ಕ್ರೀಡೆ

Champions Trophy ಬಳಿಕ ರೋಹಿತ್ ಶರ್ಮ ನಿವೃತ್ತಿ? ಹಿಟ್​ಮ್ಯಾನ್ ಉತ್ತರಾಧಿಕಾರಿ ಸ್ಥಾನಕ್ಕೆ ಕೇಳಿಬಂತು ಈ ಎರಡು ಹೆಸರು

ನವದೆಹಲಿ: ಭಾರೀ ಹೈಪ್​ನೊಂದಿಗೆ ಆರಂಭವಾದ ಚಾಂಪಿಯನ್ಸ್ ಟ್ರೋಫಿ (Champions Trophy) ಟೂರ್ನಿಯು ಮಾರ್ಚ್​ 09ರಂದು ಮುಕ್ತಾಯವಾಗಲಿದ್ದು, ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ. ಇನ್ನೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಭಾರತ ಮುಂಚೂಣಿಯಲ್ಲಿದ್ದು, ರೋಹಿತ್ ಶರ್ಮ (Rohit Sharma) ಪಡೆ ಕಪ್ ಬರವನ್ನು ನೀಗಿಸುತ್ತಾ ಎಂದು ಕಾದು ನೋಡಬೇಕಿದೆ. ಪ್ರಮುಖವಾಗಿ ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್​ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇರಿಸಲಾಗಿದ್ದು, ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಪ್ರಮುಖವಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಅಭಿಮಾನಿಗಳು ಇರಿಸಿದ್ದು, ಚಾಂಪಿಯನ್ಸ್ ಟ್ರೋಫಿಯ ಬಳಿಕ ರೋಹಿತ್ ಶರ್ಮ ನಿವೃತ್ತರಾಗಲಿದ್ದಾರೆ ಎಂಬ ಮಾತುಗಳು ಕ್ರೀಡಾ ವಲಯದಲ್ಲಿ ಹರಿದಾಡಲು ಶುರುವಾಗಿದ್ದು, ಇದಕ್ಕೆ ಪುಷ್ಠಿ ಎಂಬಂತೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ.

ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿ ಸೋಲಿನ ಬಳಿಕ ರೋಹಿತ್ ಶರ್ಮ ನಿವೃತ್ತರಾಗಲಿದ್ದಾರೆ ಎಂಬ ಮಾತುಗಳು ಕ್ರೀಡಾವಲಯದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಗೌತಮ್ ಗಂಭೀರ್ ಕೋಚ್ ಆಗುವುದಕ್ಕೂ ಮುನ್ನ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದ ರೋಹಿತ್ ಆ ಬಳಿಕ ಏಕದಿನ ಹಾಗೂ ಟೆಸ್ಟ್​ ಮಾದರಿಗೂ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿತ್ತು. ಒಂದು ವೇಳೆ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಗೆದ್ದರೆ ರೋಹಿತ್ ಶರ್ಮ ಸೇಫ್ ಎಂದು ಹೇಳಲಾಗಿದ್ದು, ಒಂದು ವೇಳೆ ತಂಡ ಸೋತರೆ ನಿವೃತ್ತಿ ಘೋಷಿಸುವುದು ಅನಿವಾರ್ಯವಾಗಲಿದೆ.

ಒಂದು ವೇಳೆ ರೋಹಿತ್ ಶರ್ಮ (Rohit Sharma) ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದರೆ ಅವರ ಸ್ಥಾನಕ್ಕೆ ಯಾರು ಎಂಬ ಗುಸುಗುಸು ಈಗಾಗಲೇ ಶುರುವಾಗಿದ್ದು, ಪ್ರಮುಖವಾಗಿ ಹಾರ್ದಿಕ್ ಪಾಂಡ್ಯ ಹಾಗೂ ಶುಭಮನ್ ಗಿಲ್ ಹೆಸರು ಮುಂಚೂಣಿಯಲ್ಲಿದೆ. ಒಂದು ವೇಳೆ ರೋಹಿತ್ ಶರ್ಮ ನಿವೃತ್ತಿ ಘೋಷಿಸದಿದ್ದರೆ ಅವರನ್ನು ಆಟಗಾರನನ್ನಾಗಿ ತಂಡದಲ್ಲಿ ಉಳಿಸಿಕೊಂಡು, ನಾಯಕತ್ವಕ್ಕೆ ಈ ಇಬ್ಬರ ಪೈಕಿ ಒಬ್ಬರಿಗೆ ಬಿಸಿಸಿಐ ಮಣೆ ಹಾಕಬಹುದು ಎಂದು ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ರೋಹಿತ್ ಶರ್ಮ ನಿವೃತ್ತಿ ಕುರಿತಂತೆ ನಮಗೆ ಹೆಚ್ಚಾಗಿ ಏನು ತಿಳಿದಿಲ್ಲ. ಅವರ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಸದ್ಯಕ್ಕೆ ಅವರ ನಿವೃತ್ತರಾಗುತ್ತಾರೆ ಎಂಬ ಯಾವ ಪ್ರಸ್ತಾವನೆಯೂ ನಮ್ಮ ಮುಂದೆ ಬಂದಿಲ್ಲ. ಟೂರ್ನಿ ಮುಗಿದ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದ್ದು, ಆ ನಂತರ ಪ್ರತಿಕ್ರಿಯಿಸುತ್ತೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.