Rohit Sharma: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ನಾಯಕನಾಗಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ರೋಹಿತ್ ಶರ್ಮ, ಕೇವಲ ಕ್ಯಾಪ್ಟನ್ ಮಾತ್ರವಲ್ಲದೆ ತಮ್ಮ ಆಟವನ್ನೂ ಮರೆತು ಕಳಪೆ ಪ್ರದರ್ಶನ ತೋರಿದ್ದು ಇದೀಗ ಅವರ ನಿವೃತ್ತಿಯನ್ನು ಪದೇ ಪದೇ ಪ್ರಶ್ನಿಸುವಂತೆ ಮಾಡಿದೆ.
ಇದೇ ಫೆ.19ರಿಂದ ಪ್ರಾರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸಜ್ಜಾಗಿರುವ ಭಾರತ ತಂಡಕ್ಕೆ ರೋಹಿತ್ ಕ್ಯಾಪ್ಟನ್ ಆಗಿ ಅಖಾಡಕ್ಕಿಳಿಯಲಿದ್ದಾರೆ. ಈ ಮೂಲಕ 50 ಓವರ್ನ ಏಕದಿನ ಟೂರ್ನಿಯಲ್ಲಿ ತಂಡವನ್ನು ಗೆಲುವಿನಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದರೆ, ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ವರದಿಯೊಂದು ಹೊರಬಿದ್ದಿದ್ದು, 2025ರ ಚಾಂಪಿಯನ್ಸ್ ಟ್ರೋಫಿಯೇ ರೋಹಿತ್ ಶರ್ಮಗೆ ಕೊನೆ ಎಂದು ಹೇಳಲಾಗಿದೆ. ಇದಕ್ಕೆ ಬಲವಾದ ಕಾರಣವೂ ಇದೆ.
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಂತರದಿಂದ ಭಾರತ ಹೀನಾಯ ಸೋಲು ಕಂಡಿತು. ತಂಡದ ನಾಯಕನಾಗಿ ಆಸೀಸ್ ನೆಲದಲ್ಲಿ ಉತ್ತಮ ಪ್ರದರ್ಶನ ತೋರದ ರೋಹಿತ್ ಶರ್ಮ, ಸರಣಿಯುದ್ದಕ್ಕೂ ಅತ್ಯಂತ ಕಳಪೆ ಫಾರ್ಮ್ ಹೊಂದಿದ್ದರು. ಸದ್ಯ ಇದೇ ಅವರಿಗೆ ಮುಳುವಾಗಿದೆ. ಕ್ಯಾಪ್ಟನ್ ಆಗಿ ತಂಡವನ್ನು ಗೆಲುವಿನೆಡೆಗೆ ಸಾಗಿಸಬೇಕಿದ್ದ ರೋಹಿತ್, ನಾಯಕತ್ವದ ಜವಾಬ್ದಾರಿಯ ಜತೆಗೆ ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ತೋರಿದ್ದೇ ಇಂದಿಗೂ ಅವರನ್ನು ನಿವೃತ್ತಿ ಪಡೆಯುವಂತೆ ಒತ್ತಾಯಿಸಿದೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟವಾಗಿದೆ. ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿರುವ ರೋಹಿತ್ ಶರ್ಮ, ಗೆಲುವಿಗಾಗಿ ಹಾಗೂ ಉತ್ತಮ ಪ್ರದರ್ಶನಕ್ಕಾಗಿ ಮೈದಾನದಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆಯೇ ಬಿಸಿಸಿಐ ರೋಹಿತ್ಗೆ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸುವಂತೆ ತಿಳಿಸಿದೆ. ಅಂತಾರಾಷ್ಟ್ರೀಯ ಟಿ20 ಫಾರ್ಮೆಟ್ಗೆ ಈಗಾಗಲೇ ಗುಡ್ಬೈ ಹೇಳಿರುವ ರೋಹಿತ್, ಈಗ ಏಕದಿನ, ಟೆಸ್ಟ್ಗೂ ವಿದಾಯ ಹೇಳುವ ಸಮಯ ಸನ್ನಿಹಿತ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಿಟ್ಮ್ಯಾನ್ಗೆ ತಮ್ಮ ಉತ್ತರ ತಿಳಿಸುವಂತೆ ಹೇಳಿದೆ ಎಂದು ಕ್ರಿಕೆಟ್ ವರದಿಯೊಂದು ಉಲ್ಲೇಖಿಸಿದೆ.
"ಆದಾಗ್ಯೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗ ತಮ್ಮ ಭವಿಷ್ಯದ ಯೋಜನೆಗಳನ್ನು ಸ್ಪಷ್ಟಪಡಿಸುವಂತೆ ರೋಹಿತ್ರನ್ನು ಒತ್ತಾಯಿಸಿದೆ. 2027ರ ಏಕದಿನ ವಿಶ್ವಕಪ್ಗೆ ಹಲವು ಮಾರ್ಗಸೂಚಿಯನ್ನು ನಿರ್ಮಿಸುವತ್ತ ಗಮನಹರಿಸಿರುವ ಬಿಸಿಸಿಐ, ಆಟಗಾರ ದೀರ್ಘ ಕಾಲ ತಂಡದೊಂದಿಗೆ ಇರುವ ಒಪ್ಪಂದವನ್ನು ಬಯಸಿ, ರೋಹಿತ್ಗೆ ಶೀಘ್ರವೇ ಉತ್ತರಿಸುವಂತೆ" ಹೇಳಿದೆ,(ಏಜೆನ್ಸೀಸ್).