ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ರೋಹಿತ್ ಶರ್ಮ (Rohit Sharma), ಮೊದಲ ಪಂದ್ಯವನ್ನು ಹೊರತುಪಡಿಸಿ, ಉಳಿದ ಎರಡು ಮ್ಯಾಚ್ಗಳಲ್ಲಿ ಭರ್ಜರಿ ಅರ್ಧಶತಕ ಹಾಗೂ ಶತಕ ದಾಖಲಿಸಿದರು. ಇದು ಕ್ರಿಕೆಟ್ನಲ್ಲಿ ಅವರ ಅಸ್ತಿತ್ವ ಮತ್ತು ನಿವೃತ್ತಿ ಕುರಿತು ಕೇಳಿಬಂದ ಪ್ರಶ್ನೆ, ಟೀಕೆಗಳಿಗೆ ತಾತ್ಕಾಲಿಕವಾಗಿ ತೆರೆ ಎಳೆದಿದೆ. ಆದರೀಗ, ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಅವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತೊರೆದಿದ್ದಾರೆ ಎಂಬ ಸುದ್ದಿಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.
ಇಷ್ಟು ದಿನಗಳ ಕಾಲ ರೋಹಿತ್ ಅವರ ಏಕದಿನ ನಿವೃತ್ತಿ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚಿಸಲಾಗುತ್ತಿತ್ತು. ಆದರೆ, ಕಳೆದ ಎರಡು ದಿನಗಳಿಂದ, ಅವರು ಮುಂಬೈ ಇಂಡಿಯನ್ಸ್ ತೊರೆದು 2026ರ ಐಪಿಎಲ್ ಆವೃತ್ತಿಗೆ ಸಜ್ಜಾಗಿದ್ದಾರೆ. ಅದರಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ರೋಹಿತ್ ಆಡಲಿದ್ದಾರೆ ಎಂಬ ಸುದ್ದಿಗಳು, ಒಂದಷ್ಟು ವರದಿಗಳು ಸೋಷಿಯಲ್ ಮೀಡಿಯಾ ಸುತ್ತುವರೆದಿವೆ. ಇದು ಅವರ ಅಭಿಮಾನಿಗಳಲ್ಲಿ ತೀವ್ರ ಗೊಂದಲಗಳನ್ನು ಹುಟ್ಟುಹಾಕಿವೆ. ಇದಕ್ಕೆ ಪುಷ್ಠಿ ನೀಡಿರುವುದು ಕೆಕೆಆರ್ ಮಾಡಿರುವ ಆ ಒಂದು ಪೋಸ್ಟ್.
ಇದನ್ನೂ ಓದಿ: Chanakya Niti: ಈ 3 ವಿಷಯಗಳ ಬಗ್ಗೆ ಎಂದಿಗೂ ನಾಚಿಕೆಪಡಬೇಡಿ! ನೀವು ಭಾರೀ ಬೆಲೆ ತೆರಬೇಕಾಗುತ್ತದೆ ಎಚ್ಚರ..
ಆಸೀಸ್ ವಿರುದ್ಧ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಈ ಸಿರೀಸ್ನಲ್ಲಿ ಅವರು ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. 'ಹಿಟ್‌ಮ್ಯಾನ್' ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಏಕದಿನಗಳಲ್ಲಿ ಅಗ್ರ ಶ್ರೇಯಾಂಕವನ್ನು ತಲುಪಿದ್ದಕ್ಕೆ ಕೆಕೆಆರ್ ಫ್ರಾಂಚೈಸಿಯು ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮುಖೇನ ರೋಹಿತ್ಗೆ ಮೆಚ್ಚುಗೆ ಹಾಗೂ ಅಭಿನಂದನೆ ತಿಳಿಸಿತು. ಅಸಲಿಗೆ ಇದೇ ವದಂತಿಗಳಿಗೆ ಸಾಕ್ಷಿಯಾಗಿದ್ದು.
ಇಂದು ಅಭಿಷೇಕ್ ನಾಯರ್ ಅವರನ್ನು ಕೆಕೆಆರ್‌ನ ಮುಖ್ಯ ಕೋಚ್ ಆಗಿ ಫ್ರಾಂಚೈಸಿ ನೇಮಕ ಮಾಡಿಕೊಂಡಿದೆ. ಈ ಕುರಿತಂತೆ ತಂಡವು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ರೋಹಿತ್ ಶರ್ಮ ಕೆಕೆಆರ್ ಪರ ಆಡಲಿದ್ದಾರೆ, ಇದು ಖಚಿತ ಎಂಬ ಸುದ್ದಿಗಳು ತೀರ ಗೊಂದಲ ಹುಟ್ಟುಹಾಕುತ್ತಿದ್ದಂತೆ ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿರುವ ಮುಂಬೈ ಇಂಡಿಯನ್ಸ್, ನಾಳೆ ಬೆಳಗ್ಗೆ ಸೂರ್ಯ ಉದಯಿಸುವುದು ಖಚಿತ. ಆದರೆ, ರಾತ್ರಿ? ಅಸಾಧ್ಯ. ಹಿಟ್‌ಮ್ಯಾನ್ ಎಲ್ಲಿಗೂ ಹೋಗುವುದಿಲ್ಲ. ನಮ್ಮ ತಂಡದಲ್ಲೇ ಮುಂದುವರಿಯುತ್ತಾರೆ ಎಂದು ತಿಳಿಸಿದೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದೆ,(ಏಜೆನ್ಸೀಸ್).