ಕ್ರೀಡೆ

"ಸಚಿನ್​, ದ್ರಾವಿಡ್​, ಕೊಹ್ಲಿ..." ಈ ಪಟ್ಟಿಯಿಂದ ರೋಹಿತ್​ರನ್ನೇ ಮರೆಯಲಾಗಿದೆ! ಮಾಜಿ ಕ್ರಿಕೆಟಿಗ ಗರಂ | Rohit Sharma

Rohit Sharma: ಪ್ರಸ್ತುತ, ಟೀಮ್ ಇಂಡಿಯಾದ ಏಕದಿನ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮ, ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಅದ್ಭುತ ಬ್ಯಾಟರ್​ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಟಿ20 ಮತ್ತು ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿರುವ ಅವರು, ಏಕದಿನ ಕ್ರಿಕೆಟ್​ನಲ್ಲಿ ಆಡುವುದಾಗಿ ತಿಳಿಸಿದ್ದಾರೆ. ಸದ್ಯ ಕ್ರಿಕೆಟ್​ ವಿಚಾರದಲ್ಲಿ ಅಷ್ಟಾಗಿ ಸದ್ದು ಮಾಡದ ರೋಹಿತ್ ಪರ ಭಾರತೀಯ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್​ ಧ್ವನಿ ಎತ್ತಿದ್ದಾರೆ.

"ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟಿಂಗ್ ಪಟ್ಟಿಯಲ್ಲಿ ರೋಹಿತ್​ಗೆ ಸ್ಥಾನ ಕೊಟ್ಟಿಲ್ಲ. ಏಕದಿನ ಪಂದ್ಯಗಳಲ್ಲಿ ಮೂರು ದ್ವಿಶತಕಗಳನ್ನು ಗಳಿಸುವುದು, ಭಾರತಕ್ಕೆ ಟಿ20 ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ತಂದುಕೊಟ್ಟಿರುವುದು ಸೇರಿ ಭಾರತೀಯ ಕ್ರಿಕೆಟ್‌ಗಾಗಿ ಇಷ್ಟೆಲ್ಲಾ ಮಾಡಿದರೂ, ಅವರನ್ನು ಇನ್ನೂ ಭಾರತೀಯ ಕ್ರಿಕೆಟ್‌ನ ಕೆಲವು ದಿಗ್ಗಜ ಹೆಸರಿನೊಂದಿಗೆ ಪರಿಗಣಿಸುತ್ತಿಲ್ಲ" ಎಂದಿದ್ದಾರೆ.

"ನಾವು ಸುನಿಲ್​ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್​ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಬಗ್ಗೆ ಮಾತನಾಡುತ್ತಿದ್ದೇವೆ. ಅದೇ ರೋಹಿತ್​ರನ್ನು ಮಾತ್ರ ಮರೆತಿದ್ದೇವೆ. ರೋಹಿತ್ ಕ್ಯಾಪ್ಟನ್ಸಿಯನ್ನು ನಾವು ಮರೆಯಬಾರದು. ವಿಶೇಷವಾಗಿ 2023ರ ವಿಶ್ವಕಪ್ ನಂತರ, ಅಭಿಮಾನಿಗಳು ಅವರ ಮೇಲಿಟ್ಟಿರುವ ಪ್ರೀತಿ ಮತ್ತೊಂದು ಮಟ್ಟದಲ್ಲಿದೆ. ತಂಡಕ್ಕಾಗಿ ತಮ್ಮ ಸ್ವಂತ ಹಿತಾಸಕ್ತಿಗಳನ್ನು ತ್ಯಾಗ ಮಾಡಲು ಶರ್ಮ ಸಿದ್ಧರಿದ್ದರು. ಅದು ಅವರ ವಿಶೇಷತೆ" ಎಂದು ಹೊಗಳಿದ್ದಾರೆ,(ಏಜೆನ್ಸೀಸ್).