ಆಸ್ಟ್ರೇಲಿಯಾ: ಇಂದು ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆತಿಥೇಯ ಆಸೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮ (Rohit Sharma) ಅದ್ಭುತ ಇನ್ನಿಂಗ್ಸ್ ನೀಡಿದರು. 73 ರನ್ಗಳನ್ನು ಸಿಡಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್, ಶತಕದಿಂದ ವಂಚಿತರಾದರೂ ಅಪರೂಪದ ದಾಖಲೆಗೆ ಸಾಕ್ಷಿಯಾಗಿದ್ದಾರೆ.
ಆಸೀಸ್ ವಿರುದ್ಧ 1000 ರನ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇದೀಗ ರೋಹಿತ್ ಪಾತ್ರರಾಗಿದ್ದಾರೆ. ಇದರೊಂದಿಗೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರಲ್ಲಿ ಅವರು ಮೂರನೇ ಸ್ಥಾನ ತಲುಪಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ (73 ರನ್, 97 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಸಿಡಿಸುವ ಮೂಲಕ ರೋಹಿತ್ ಈ ಸಾಧನೆಗೈದಿದ್ದಾರೆ. ಈ ಸಾಲಿನಲ್ಲಿ ಅವರು ಟೀಮ್ ಇಂಡಿಯಾ 'ದಾದಾ', ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿಯನ್ನು ಮೀರಿಸಿದ್ದಾರೆ.
ಗಂಗೂಲಿ 308 ಏಕದಿನ ಪಂದ್ಯಗಳನ್ನಾಡಿದ್ದು, 297 ಇನ್ನಿಂಗ್ಸ್‌ಗಳಲ್ಲಿ 40.95 ಸರಾಸರಿಯಲ್ಲಿ 11,221 ರನ್ ದಾಖಲಿಸಿದ್ದರು. ಈ ದಾಖಲೆಯನ್ನು ಮುರಿದಿರುವ ರೋಹಿತ್ ಶರ್ಮ, 275 ಪಂದ್ಯಗಳಲ್ಲಿ, 267 ಇನ್ನಿಂಗ್ಸ್‌ಗಳಲ್ಲಿ 48.69 ಸರಾಸರಿಯಲ್ಲಿ 11,249 ರನ್ ಗಳಿಸಿದ್ದಾರೆ. ಪ್ರಸ್ತುತ, ಟೀಮ್ ಇಂಡಿಯಾ ಪರ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್, 463 ಏಕದಿನ ಪಂದ್ಯಗಳಲ್ಲಿ 18426 ರನ್ ದಾಖಲಿಸಿದ್ದಾರೆ. ಈ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದು, ಆಡಿರುವ 304 ಪಂದ್ಯಗಳಲ್ಲಿ 14,181 ರನ್ ಗಳಿಸಿದ್ದಾರೆ.
1. ಸಚಿನ್ ತೆಂಡೂಲ್ಕರ್ - 463 ಪಂದ್ಯ, 18,426 ರನ್
2. ವಿರಾಟ್ ಕೊಹ್ಲಿ - 304 ಪಂದ್ಯ, 14,181 ರನ್
3. ರೋಹಿತ್ ಶರ್ಮಾ - 275 ಪಂದ್ಯ, 11,249 ರನ್
4. ಸೌರವ್ ಗಂಗೂಲಿ - 308 ಪಂದ್ಯ, 11,221 ರನ್
5. ರಾಹುಲ್ ದ್ರಾವಿಡ್ - 340 ಪಂದ್ಯ, 10,768 ರನ್
ಇದನ್ನೂ ಓದಿ: ದೀಪಾವಳಿ ಮುಗಿಯುತ್ತಿದ್ದಂತೆ ಕುಸಿದ ಚಿನ್ನ! ಖರೀದಿದಾರರಿಗೆ ಇದು ಸೂಕ್ತ ಸಮಯವೇ? ಹೀಗಿದೆ ನೋಡಿ ಇಂದಿನ ದರ | Gold Rates
ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಆ್ಯಡಮ್ ಗಿಲ್ಕ್ರಿಸ್ಟ್ ಮತ್ತು ಭಾರತೀಯ ಕ್ರಿಕೆಟ್ನ ದಾದಾ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ, ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರ ಗಳಿಸಿದ ಅತ್ಯಧಿಕ ರನ್ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ. ಗಂಗೂಲಿ ಆರಂಭಿಕರಾಗಿ 9146 ರನ್ಗಳನ್ನು ಗಳಿಸಿದ್ದರೆ, ಗಿಲ್ಕ್ರಿಸ್ಟ್ 9,200 ರನ್ ದಾಖಲಿಸಿದ್ದಾರೆ. ಇನ್ನು ಇಂದಿನ ಪಂದ್ಯಗಳನ್ನು ಒಳಗೊಂಡಂತೆ, ರೋಹಿತ್ ಆರಂಭಿಕರಾಗಿ 9219* ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 15,310 ರನ್ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರದಲ್ಲಿ ಜಯಸೂರ್ಯ ಮತ್ತು ಕ್ರಿಸ್ ಗೇಲ್ ಇದ್ದಾರೆ.
1. ಸಚಿನ್ ತೆಂಡೂಲ್ಕರ್ (ಭಾರತ) - 15310 ರನ್
2. ಸನತ್ ಜಯಸೂರ್ಯ (ಶ್ರೀಲಂಕಾ) - 12740 ರನ್
3. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 10179 ರನ್
4. ರೋಹಿತ್ ಶರ್ಮಾ (ಭಾರತ) - 9219 ರನ್
5. ಆಡಮ್ ಗಿಲ್ಕ್ರಿಸ್ಟ್ (ಆಸ್ಟ್ರೇಲಿಯಾ) - 9200 ರನ್
6. ಸೌರವ್ ಗಂಗೂಲಿ (ಭಾರತ) - 9146 ರನ್