ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಪ್ರವಾಸಿ ತಂಡವು ಆತಿಥೇಯರಿಗೆ ತಕ್ಕ ತಿರುಗೇಟು ನೀಡಿದ್ದು, ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಇನ್ನೂ ಸರಣಿಯ ಕೊನೆ ಪಂದ್ಯದಿಂದ ರೋಹಿತ್ ಶರ್ಮ (Rohit Sharma) ಹೊರಗುಳಿದಿದ್ದು, ಜಸ್ಪ್ರೀತ್ ಬುಮ್ರಾಗೆ ನಾಯಕತ್ವವನ್ನು ವಹಿಸಲಾಗಿದೆ. ರೋಹಿತ್ ಶರ್ಮ ಪಂದ್ಯದದಿಂದ ಹೊರಗುಳಿಯುವುದರ ಹಿಂದೆ ಹಲವಾರು ಕಾರಣಗಳನ್ನು ನೀಡಲಾಗಿದ್ದು, ಇದರಲ್ಲಿ ಪ್ರಮುಖವಾಗಿ ನಿವೃತ್ತಿಯ ವಿಚಾರವೂ ಕೇಳಿ ಬರುತ್ತಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿ ಸೇರಿದಂತೆ ಹಾಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಶರ್ಮರಿಂದ (Rohit Sharma) ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ನಾಯಕತ್ವದ ವಿಚಾರಕ್ಕೂ ಬರುವುದಾದರೆ ತಂಡ ಸರಣಿಗಳನ್ನು ಸೋಲುವ ಮೂಲಕ ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡುತ್ತಿದ್ದು, ರೋಹಿತ್ ಶರ್ಮ (Rohit Sharma) ನಿವೃತ್ತಿಗೆ ಆಗ್ರಹ ಕೇಳಿ ಬರುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಕೊನೆ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ಇದೇ ಕಾರಣ ಎಂದು ಹೇಳಲಾಗಿದ್ದು, ಟೆಸ್ಟ್ ಸರಣಿ (test Series) ಮುಕ್ತಾಯದ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ನಿವೃತ್ತಿಗೆ ಸಂಬಂಧಿಸಿದಂತೆ ಸ್ವತಃ ರೋಹಿತ್ ಶರ್ಮ ಸ್ಪಷ್ಟನೆ ನೀಡಿದ್ದಾರೆ.
ಸ್ಟಾರ್ ಸ್ಫೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮ (Rohit Sharma), ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ನಿರ್ಧಾರವನ್ನು ನಾನೇ ಖುದ್ದು ತೆಗೆದುಕೊಂಡಿದ್ದು. ಏಕೆಂದರೆ ನನ್ನ ಬ್ಯಾಟ್ ಈಗ ಸದ್ದು ಮಾಡುತ್ತಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಾನು 2 ಮಕ್ಕಳ ತಂದೆ, ಹಾಗಾಗಿ ನಾನು ಸಹ ಸಂವೇದನಾಶೀಲ, ಪ್ರಬುದ್ಧ, ಯಾವಾಗ ಏನು ಮಾಡಬೇಕೆಂದು ನನಗೆ ತಿಳಿದಿದೆ. ಔಟ್ ಆಫ್ ಫಾರ್ಮ್ನಲ್ಲಿರುವ ನಾನು ಇಂತಹ ಮಹತ್ವದ ಪಂದ್ಯವನ್ನು ಆಡಬಾರದು. ಆಡಲು ಅವಕಾಶ ಸಿಗಬಾರದು. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದೆ.
ನಾನು ಸಿಡ್ನಿ ಟೆಸ್ಟ್ ಪಂದ್ಯದಿಂದ ಮಾತ್ರ ಹೊರಗುಳಿದಿದ್ದೇನೆ. ನನ್ನ ಟೆಸ್ಟ್ ಕೆರಿಯರ್ ಅನ್ನು ಅಂತ್ಯಗೊಳಿಸಿಲ್ಲ. ಈಗ ರನ್‌ಗಳು ಬರುತ್ತಿಲ್ಲ ನಿಜ. ಆದರೆ 5 ತಿಂಗಳು ಕಳೆದರೂ ಬರುವುದಿಲ್ಲ ಎಂಬುದನ್ನು ನಾನು ನಂಬಲ್ಲ. ನಾನಂತು ಕಠಿಣ ಅಭ್ಯಾಸ ಮಾಡುತ್ತೇನೆ. ಈ ಮೂಲಕ ಫಾರ್ಮ್ಗೆ ಮರಳಲಿದ್ದೇನೆ. ಹೀಗಾಗಿ ಸಿಡ್ನಿ ಪಂದ್ಯದಿಂದ ಹೊರಗುಳಿದಿರುವುದು ನನ್ನ ನಿವೃತ್ತಿಯ ನಿರ್ಧಾರವಲ್ಲ. ಹೊರಗೆ ಲ್ಯಾಪ್‌ಟಾಪ್, ಪೆನ್ನು – ಪೇಪರ್ ಹಿಡಿದು ಕುಳಿತವರು ನಿವೃತ್ತಿ ಯಾವಾಗ ಬರುತ್ತದೆ. ನಾನು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದಿಲ್ಲ. ಹೀಗಾಗಿ ನನ್ನ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ನನ್ನ ನಿವೃತ್ತಿಯನ್ನು ಎದುರು ನೋಡಬೇಡಿ ಎಂದು ರೋಹಿತ್ ಶರ್ಮ (Rohit Sharma) ಹೇಳಿದ್ದಾರೆ.