ಕ್ರೀಡೆ

ರೋಹಿತ್​, ಕೊಹ್ಲಿಯಲ್ಲ ಟಿ20 ವಿಶ್ವಕಪ್​ ಗೆಲ್ಲಿಸುವ ಸಾಮರ್ಥ್ಯ ಇರೋದು ಆತನಿಗೆ ಮಾತ್ರ! ಲಕ್ಷ್ಮೀಪತಿ ಬಾಲಾಜಿ ಹೇಳಿಕೆ

ನವದೆಹಲಿ: ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ವಿಜಯಯಾತ್ರೆ ನಡೆಯುತ್ತಿದೆ. ಇದುವರೆಗೆ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ರೋಹಿತ್ ಸೇನೆ ಸೂಪರ್-8ರ ಸ್ಥಾನವನ್ನು ಅಧಿಕೃತವಾಗಿ ಖಚಿತಪಡಿಸಿದೆ. ಕೆನಡಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಟೀಮ್​ ಇಂಡಿಯಾದ ಚಿತ್ತ ಇದೀಗ ಸೂಪರ್​ 8ರತ್ತ ನೆಟ್ಟಿದೆ.

ಸೂಪರ್​ 8ರ ಹಂತದಲ್ಲಿ ಭಾರತದ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಇದುವರೆಗೆ ನಮ್ಮ ತಂಡ ಆಡಿದ ಗ್ರೂಪ್​ ಪಂದ್ಯಗಳು ಅಮೆರಿಕದಲ್ಲಿ ನಡೆದವು. ಅಲ್ಲಿನ ಟ್ರಿಕಿ ಪಿಚ್‌ಗಳ್​ ಬ್ಯಾಟರ್​ಗಳಿಗೆ ಅಷ್ಟೊಂದು ನೆರವಾಗಲಿಲ್ಲ. ಆದರೆ, ಬೌಲರ್‌ಗಳಿಗೆ ತುಂಬಾ ನೆರವಾಯಿತು. ಆದರೆ, ಮುಂದಿನ ಪಂದ್ಯಗಳಿಗೆ ಟೀಮ್ ಇಂಡಿಯಾ ಕೆರಿಬಿಯನ್ ದ್ವೀಪಗಳಿಗೆ ಹೋಗಬೇಕಾಗುತ್ತದೆ. ಅಲ್ಲಿನ ನಿಧಾನಗತಿಯ ಪಿಚ್‌ಗಳಲ್ಲಿ ರೋಹಿತ್​ ಪಡೆ ಹೇಗೆ ಆಡುತ್ತದೆ ಎಂಬುದು ಸದ್ಯದ ಕುತೂಹಲಕಾರಿಯಾಗಿದೆ. ನಾಯಕ ರೋಹಿತ್ ಶರ್ಮ ಮತ್ತು ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೇಲೆ ಎಲ್ಲರೂ ಗಮನ ಹರಿಸುತ್ತಿದ್ದಾರೆ.

ವೆಸ್ಟ್ ಇಂಡೀಸ್ ಮೈದಾನದಲ್ಲಿ ಆಡಿದ ಅನುಭವ ಹೊಂದಿರುವ ರೋಹಿತ್, ಕೊಹ್ಲಿ ಮಿಂಚಿದರೆ ಭಾರತಕ್ಕೆ ಕಪ್​ ಗ್ಯಾರಂಟಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಫಾರ್ಮ್ ಕಳೆದುಕೊಂಡಿರುವ ವಿರಾಟ್ ಒಂದೊಮ್ಮೆ ಮತ್ತೆ ಫಾರ್ಮ್​ಗೆ ಮರಳಿದರೆ ಅವರನ್ನು ತಡೆಯುವುದು ಕಷ್ಟ ಎನ್ನಲಾಗುತ್ತಿದೆ. ಮೆಗಾ ಟೂರ್ನಿಯಲ್ಲಿ ಇವರಿಬ್ಬರ ಪ್ರದರ್ಶನದ ಮೇಲೆ ಟೀಮ್​ ಇಂಡಿಯಾ ಭವಿಷ್ಯ ನಿರ್ಧಾರವಾಗಲಿದೆ. ಆದರೆ ರೋಹಿತ್ ಮತ್ತು ಕೊಹ್ಲಿಗಿಂತ ವೇಗದ ಕುದುರೆ ಜಸ್ಪ್ರೀತ್ ಬುಮ್ರಾ ಮುಖ್ಯ ಎಂದು ಅನುಭವಿ ವೇಗಿ ಲಕ್ಷ್ಮೀಪತಿ ಬಾಲಾಜಿ ಹೇಳಿದ್ದಾರೆ.

ಜಸ್ಪ್ರೀತ್ ಬುಮ್ರಾ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಏಕಾಂಗಿಯಾಗಿ ತಂಡಕ್ಕೆ ವಿಶ್ವಕಪ್ ನೀಡುವ ಸಾಮರ್ಥ್ಯ ಬುಮ್ರಾಗೆ ಇದೆ. ಅವರನ್ನು ವಾಸಿಂ ಅಕ್ರಮ್ ನಂತರ ಏಷ್ಯಾದ ಅತ್ಯುತ್ತಮ ವೇಗದ ಬೌಲರ್ ಎಂದು ಹೇಳಬಹುದು. ಮುಂದಿನ ದಶಕದಲ್ಲಿ ಬುಮ್ರಾ ಅಬ್ಬರಿಸಲಿದ್ದಾರೆ. ಯಾವುದೇ ಫಾರ್ಮ್ಯಾಟ್ ಆಗಿರಲಿ, ಬುಮ್ರಾ ಅವರು ಚೆಂಡು ಪಡೆದಾಗಲೆಲ್ಲ ಸಿಡಿಯುತ್ತಾರೆ. ಹೊಸ ಚೆಂಡು, ಹಳೆ ಚೆಂಡು ಎನ್ನದೇ ಪ್ರತಿ ಹಂತದಲ್ಲೂ ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಮಧ್ಯಮ ಓವರ್‌ಗಳಲ್ಲಿಯೂ ವಿಕೆಟ್‌ಗಳು ಬೀಳುತ್ತಿವೆ. ಬುಮ್ರಾಗಿಂತ ಬಹುಮುಖ ಮತ್ತು ಅಪಾಯಕಾರಿ ಬೌಲರ್ ಎಲ್ಲಿಯೂ ಕಾಣಸಿಗುವುದಿಲ್ಲ ಎಂದು ಬಾಲಾಜಿ ಹೇಳಿದ್ದಾರೆ.

ಬೌಲಿಂಗ್ ಘಟಕದ ಜೊತೆಗೆ ಇಡೀ ತಂಡವನ್ನು ನಾಯಕನಾಗಿ ಮುನ್ನಡೆಸುವ ಧೈರ್ಯವನ್ನು ಬುಮ್ರಾ ಹೊಂದಿದ್ದಾರೆ ಎಂದು ಬಾಲಾಜಿ ಹೇಳಿದರು. ಅವರ ಶಾಂತತೆ, ಪ್ರಬುದ್ಧತೆಯ ಮಟ್ಟ ಮತ್ತು ಆಟದ ಅರಿವು ನೋಡಿದರೆ, ಶೀಘ್ರದಲ್ಲೇ ಬುಮ್ರಾ ಅವರನ್ನು ಭಾರತದ ನಾಯಕನಾಗಿ ನೋಡುವ ಸಾಧ್ಯತೆಗಳಿವೆ ಎಂದು ಬಾಲಾಜಿ ಹೇಳಿದರು. (ಏಜೆನ್ಸೀಸ್​)