ನವದೆಹಲಿ: ಟೀಮ್ ಇಂಡಿಯಾ ಟಿ2 ವಿಶ್ವಕಪ್ನ ಸೂಪರ್-8 ಸುತ್ತಿಗಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ಗ್ರೂಪ್ ಹಂತದಲ್ಲಂತೂ ಎದುರಾಳಿಗಳನ್ನು ಬಗ್ಗುಬಡಿದ ಭಾರತ ಸೂಪರ್ 8ರಲ್ಲೂ ಅದೇ ಫಾರ್ಮ್ ಮುಂದುವರಿಸಿ, ಬ್ಯಾಕ್ ಟು ಬ್ಯಾಕ್ ಗೆಲುವುಗಳ ಮೂಲಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸುವ ನಿರೀಕ್ಷೆಯಲ್ಲಿದೆ.
ಸೂಪರ್ 8 ಯುದ್ಧದ ಭಾಗವಾಗಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಇಂದು (ಜೂನ್ 20) ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಮುಂದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಮೂರು ತಂಡಗಳು ಕೆರಿಬಿಯನ್ ಪಿಚ್‌ಗಳಲ್ಲಿ ಗ್ರೂಪ್ ಹಂತದ ಪಂದ್ಯಗಳನ್ನು ಆಡುವ ಮೂಲಕ ಉತ್ತಮ ಅನುಭವವನ್ನೂ ಗಳಿಸಿವೆ. ಅಲ್ಲಿನ ನಿಧಾನಗತಿಯ ಪಿಚ್‌ಗಳಲ್ಲಿ ಹೇಗೆ ಆಡಬೇಕೆಂದು ಅರಿತುಕೊಂಡಿವೆ. ಹೇಗೆ ಬ್ಯಾಟಿಂಗ್ ಮಾಡಬೇಕು ಮತ್ತು ಯಾವ ಲೆಂಥ್ನಲ್ಲಿ ಬೌಲಿಂಗ್ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಂಡಿವೆ. ಅಮೆರಿಕದಿಂದ ಬಂದಿರುವ ಭಾರತ ಇಲ್ಲಿನ ಪಿಚ್‌ಗಳಿಗೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿದೆ.
ವೆಸ್ಟ್ ಇಂಡೀಸ್ ಪಿಚ್‌ಗಳಲ್ಲಿ ಆಡಿದ ಅನುಭವ ಹೊಂದಿರುವ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಮೇಲೆ ಟೀಮ್ ಇಂಡಿಯಾ ಹೆಚ್ಚು ಅವಲಂಬಿತವಾಗಿದೆ. ಇವರಿಬ್ಬರ ಮ್ಯಾಜಿಕ್‌ನಿಂದ ಸೂಪರ್-8 ಜಯಿಸಲು ಮುಂದಾಗಿದೆ. ಆದರೆ ಕುಲದೀಪ್ ಯಾದವ್ ಟೀಮ್ ಇಂಡಿಯಾದ ನಿಜವಾದ ಅಸ್ತ್ರ, ರೋಹಿತ್ ಅಥವಾ ಕೊಹ್ಲಿ ಅಲ್ಲ ಎಂದು ನ್ಯೂಜಿಲೆಂಡ್ ಲೆಜೆಂಡ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ಸೂಪರ್-8, ಸೆಮಿಸ್‌ನಂತಹ ಹೈ ಟೆನ್ಶನ್ ಪಂದ್ಯಗಳಲ್ಲಿ ತಂಡವನ್ನು ಕುಲದೀಪ್ ಯಾದವ್ ಬಲಿಷ್ಠಗೊಳಿಸಲಿದ್ದಾರೆ. ಅವರ ಮೇಲೆ ನಂಬಿಕೆ ಇಟ್ಟರೆ ಭಾರತ ಟ್ರೋಫಿ ಗೆಲ್ಲಲಿದೆ. ಕೆರಿಬಿಯನ್ ಪಿಚ್‌ಗಳಲ್ಲಿ ಸ್ಪಿನ್‌ಗೆ ಬೆಂಬಲ ಸಿಕ್ಕರೆ ಕುಲದೀಪ್ ಸಿಡಿದೇಳುತ್ತಾರೆ. ಕುಲದೀಪ್ ಅವರನ್ನು ತಂಡ ಅಗತ್ಯವಿದ್ದಾಗ ಬಳಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂದು ಫ್ಲೆಮಿಂಗ್ ಸಲಹೆ ನೀಡಿದರು. ಅಲ್ಲದೆ, ಕುಲದೀಪ್, ಯಾವುದೇ ಬ್ಯಾಟರ್ ಅನ್ನು ಉಸಿರುಗಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ವೆಸ್ಟ್ ಇಂಡೀಸ್ ಪಿಚ್ಗಳು ಹೆಚ್ಚು ಸ್ಪಿನ್ ಸ್ನೇಹಿಯಾಗಿವೆ. ಹಾಗಾಗಿ, ಸ್ಪಿನ್ನರ್‌ಗಳು ಪಿಚ್‌ನ ಬೆಂಬಲವನ್ನು ಬಳಸಿಕೊಳ್ಳಬೇಕು ಎಂದು ಫ್ಲೆಮಿಂಗ್ ಸಲಹೆ ನೀಡಿದರು. ಟೀಮ್ ಇಂಡಿಯಾ ತುಂಬಾ ಬಲಿಷ್ಠವಾಗಿದೆ ಎಂದಿದ್ದಾರೆ. ಭಾರತ ತಂಡದಲ್ಲಿ ನಾಲ್ವರು ಗುಣಮಟ್ಟದ ಸ್ಪಿನ್ನರ್‌ಗಳಿದ್ದಾರೆ. ಇದೊಂದು ದೊಡ್ಡ ತಂತ್ರವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಪಿನ್ನರ್‌ಗಳಿಂದ ತಂಡಕ್ಕೆ ಬೆಂಬಲ ದೊರೆತರೆ ಟೀಮ್ ಇಂಡಿಯಾದಿಂದ ಟ್ರೋಫಿ ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಫ್ಲೆಮಿಂಗ್ ತಿಳಿಸಿದರು. (ಏಜೆನ್ಸೀಸ್)