ನವದೆಹಲಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಹಾಗೂ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವುದು ಎಲ್ಲರಿಗೂ ಗೊತ್ತೇ ಇದೆ. ಟಿ20 ವಿಶ್ವಕಪ್ನಲ್ಲಿ ಟ್ರೋಫಿ ಜಯಿಸಿದ ಖುಷಿಯಲ್ಲೇ ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದರು. ಇದು ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ತರಿಸಿತು. ಟಿ20ಯಲ್ಲಿ ಈ ಸ್ಟಾರ್‌ಗಳು ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂಬ ನೋವಿನಿಂದ ಹಲವರು ಭಾವುಕರಾದರು.
ಏಕದಿನ ಹಾಗೂ ಟೆಸ್ಟ್‌ನಲ್ಲಿ ಮುಂದುವರಿಯುತ್ತಿರುವ ಈ ಲೆಜೆಂಡ್ಗಳು ವರ್ಷಕ್ಕೊಮ್ಮೆ ಐಪಿಎಲ್ ರೂಪದಲ್ಲಿ ಟಿ20 ಸ್ವರೂಪದಲ್ಲಿ ಮನರಂಜನೆ ನೀಡಲಿದ್ದಾರೆ. ಆದರೆ, ಇವರಿಬ್ಬರೂ ಇನ್ನೂ ಎಷ್ಟು ವರ್ಷ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಇಬ್ಬರು ಸ್ಟಾರ್‌ಗಳು ಸಾಧ್ಯವಾದಷ್ಟು ಸಮಯ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕೆಂದು ಅಭಿಮಾನಿಗಳು ಬಯಸುತ್ತಾರೆ.
ರೋಹಿತ್ ಮತ್ತು ಕೊಹ್ಲಿ ಎಷ್ಟು ವರ್ಷಗಳ ಕಾಲ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂಬುದರ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಹಾಗೂ ಕೊಹ್ಲಿಯನ್ನು ಕಡಿಮೆ ಅಂದಾಜು ಮಾಡಬೇಡಿ. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅವರಿಬ್ಬರೂ ಇನ್ನೂ ನಿವೃತ್ತರಾಗಿಲ್ಲ. ಅದಕ್ಕೆ ಸಾಕಷ್ಟು ಸಮಯವಿದೆ. ಇನ್ನು ಎರಡು ವರ್ಷ ರೋಹಿತ್ ಕ್ರಿಕೆಟ್ ಆಡಬಹುದು ಎಂದ ಭಜ್ಜಿ, ವಿರಾಟ್ ಕೊಹ್ಲಿ ಫಿಟ್ನೆಸ್ ಅನ್ನು ನಿರ್ಣಯಿಸುವುದು ಸುಲಭವಲ್ಲ ಎಂದರು.
ಕೊಹ್ಲಿ ಬಗ್ಗೆ ನಾನೇನೂ ಹೇಳಲಾರೆ. ಏಕೆಂದರೆ, ಅವರ ಫಿಟ್ನೆಸ್ ಅನ್ನು ನಿರ್ಣಯಿಸುವುದು ಕಷ್ಟ. ಕೊಹ್ಲಿ ಇನ್ನು 5 ವರ್ಷ ಕ್ರಿಕೆಟ್‌ನಲ್ಲಿ ಮುಂದುವರಿದರೂ ಅಚ್ಚರಿಪಡಬೇಕಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಅವರಿಗಿಂತ ಫಿಟ್ ಆಟಗಾರ ಮತ್ತೊಬ್ಬರಿಲ್ಲ. ಇನ್ನು ಕೆಲವು ವರ್ಷಗಳ ಕಾಲ ರೋಹಿತ್-ಕೊಹ್ಲಿ ಇದೇ ರೀತಿ ಭಾರತ ತಂಡಕ್ಕೆ ಸೇವೆ ಸಲ್ಲಿಸಲಿ ಎಂಬುದು ನನ್ನ ಹಾರೈಕೆ ಎಂದು ಭಜ್ಜಿ ಹೇಳಿದ್ದಾರೆ.
ಸದ್ಯ ಟೀಮ್ ಇಂಡಿಯಾಗೆ ಯಾವುದೇ ಪಂದ್ಯಗಳಿಲ್ಲದ ಕಾರಣ ರೋಹಿತ್-ಕೊಹ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ಬಾಂಗ್ಲಾದೇಶ ಸರಣಿಯೊಂದಿಗೆ ಪುನರಾಗಮನ ಮಾಡಲಿದ್ದಾರೆ. (ಏಜೆನ್ಸೀಸ್)