ಕ್ರೀಡೆ

ಧರ್ಮಶಾಲಾದಲ್ಲಿ ರೋಹಿತ್​-ಗಿಲ್​ ಶತಕದಬ್ಬರ; ಆಂಗ್ಲರ ಮೇಲೆ ಬಿಗಿಹಿಡಿತ ಸಾಧಿಸಿದ ಭಾರತ

ಧರ್ಮಶಾಲಾ: ನಾಯಕ ರೋಹಿತ್​ ಶರ್ಮ (103 ರನ್​, 162 ಎಸೆತ, 13 ಬೌಂಡರಿ, 3 ಸಿಕ್ಸರ್​) ಮತ್ತು ಶುಭಮಾನ್​ ಗಿಲ್​ (110 ರನ್​, 150 ಎಸೆತ, 12 ಬೌಂಡರಿ, 5 ಸಿಕ್ಸರ್​) ಭರ್ಜರಿ ಶತಕದ ನೆರವಿನಿಂದ ಭಾರತ ತಂಡ 5ನೇ ಹಾಗೂ ಕೊನೇ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್​ ವಿರುದ್ಧ ಬೃಹತ್​ ಮುನ್ನಡೆ ಸಾಧಿಸಿದೆ. ಈ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ರೋಹಿತ್​ ಶರ್ಮ ಪಡೆ, 4&1 ಅಂತರದಿಂದ ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆ ಹೆಚ್ಚಿಸಿದೆ.

ಎಚ್​ಪಿಸಿಎ ಸ್ಟೇಡಿಯಂನಲ್ಲಿ ಶುಕ್ರವಾರ 1 ವಿಕೆಟ್​ಗೆ 135 ರನ್​ಗಳಿಂದ 2ನೇ ದಿನದಾಟ ಮುಂದುವರಿಸಿದ ಭಾರತ ತಂಡ, ದಿನದಂತ್ಯಕ್ಕೆ 120 ಓವರ್​ಗಳಲ್ಲಿ 8 ವಿಕೆಟ್​ಗೆ 473 ರನ್​ ಪೇರಿಸಿದೆ. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ 255 ರನ್​ ಮುನ್ನಡೆ ಸಾಧಿಸಿ ಪ್ರಾಬಲ್ಯ ಮೆರೆದಿದೆ. ಇಂಗ್ಲೆಂಡ್​ ತಂಡವಿನ್ನು 2ನೇ ಇನಿಂಗ್ಸ್​ನಲ್ಲಿ ಹರಸಾಹಸ ನಡೆಸದಿದ್ದರೆ ಸೋಲಿನಿಂದ ಪಾರಾಗುವುದು ಕಷ್ಟಕರವೆನಿಸಿದೆ.

ಕುಲದೀಪ್-ಬುಮ್ರಾ ಸೆಡ್ಡು

ಭಾರತ ತಂಡ ಚಹಾ ವಿರಾಮದ ಬಳಿಕ 52 ರನ್​ ಅಂತರದಲ್ಲಿ 5 ವಿಕೆಟ್​ ಕಳೆದುಕೊಂಡಾಗ 2ನೇ ದಿನದಾಟ ಮುಕ್ತಾಯಕ್ಕೆ ಮುನ್ನವೇ ಸರ್ವಪತನ ಕಾಣುವ ಸಾಧ್ಯತೆ ಕಾಣಿಸಿತು. ಆದರೆ 9ನೇ ವಿಕೆಟ್​ಗೆ ಆಂಗ್ಲರಿಗೆ ಸವಾಲಾಗಿ ನಿಂತ ಕುಲದೀಪ್​ ಯಾದವ್​ (27*) ಮತ್ತು ಜಸ್​ಪ್ರೀತ್​ ಬುಮ್ರಾ (19*) ಜೋಡಿ 18 ಓವರ್​ಗಳಲ್ಲಿ 45 ರನ್​ ಸೇರಿಸುವ ಮೂಲಕ ಮುನ್ನಡೆಯನ್ನು 250ರ ಗಡಿ ದಾಟಿಸಿತು.

ರೋಹಿತ್​-ಗಿಲ್​ ಶತಕದಬ್ಬರ

ಬೆಳಗ್ಗೆ ಕ್ರಮವಾಗಿ 52 ಮತ್ತು 26 ರನ್​ಗಳಿಂದ ದಿನದಾಟ ಆರಂಭಿಸಿದ ರೋಹಿತ್​ ಶರ್ಮ ಮತ್ತು ಶುಭಮಾನ್​ ಗಿಲ್​ ಭೋಜನ ವಿರಾಮಕ್ಕೆ ಮುನ್ನವೇ ಶತಕ ಪೂರೈಸಿದರು. ಗಿಲ್​ ಬಿರುಸಿನ ಬ್ಯಾಟಿಂಗ್​ನೊಂದಿಗೆ ರೋಹಿತ್​ ಜತೆಗೆ ರನ್​ ಗಳಿಕೆಯಲ್ಲಿ ಪೈಪೋಟಿ ನಡೆಸಿದರು. ರೋಹಿತ್​ 154 ಎಸೆತಗಳಲ್ಲಿ ಶತಕ ಪೂರೈಸಿದರೆ, ಮರು ಓವರ್​ನಲ್ಲೇ ಗಿಲ್​ ಬೌಂಡರಿ ಬಾರಿಸುವ ಮೂಲಕ 137 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಇಬ್ಬರಿಗೂ ಇದು ಸರಣಿಯಲ್ಲಿ 2ನೇ ಶತಕವಾಗಿದೆ ಮತ್ತು ಇಬ್ಬರೂ ಸರಣಿಯಲ್ಲಿ 400 ರನ್​ ಗಳಿಸಿದ ಸಾಧನೆ ಮಾಡಿದರು. 2ನೇ ವಿಕೆಟ್​ಗೆ 244 ಎಸೆತಗಳಲ್ಲಿ 171 ರನ್​ ಸೇರಿಸಿದ ಈ ಜೋಡಿಯನ್ನು ನಾಯಕ ಬೆನ್​ ಸ್ಟೋಕ್ಸ್​ ಬೇರ್ಪಡಿಸಿದರು. ಭೋಜನ ವಿರಾಮದ ಬಳಿಕ ಇಬ್ಬರೂ ಸತತ 2 ಓವರ್​ಗಳಲ್ಲಿ ಔಟಾದರು. ಫಿಟ್ನೆಸ್​ ಸಮಸ್ಯೆಯಿಂದಾಗಿ ಸರಣಿಯಲ್ಲಿ ಕೇವಲ ಬ್ಯಾಟರ್​ ಆಗಿ ಆಡುತ್ತಿದ್ದ ಸ್ಟೋಕ್ಸ್​, 2023ರ ಜೂನ್​ ಬಳಿಕ ಎಸೆದ ಮೊದಲ ಎಸೆತದಲ್ಲೇ ರೋಹಿತ್​ ಬೌಲ್ಡಾದರು.

ಕನ್ನಡಿಗ ಪಡಿಕ್ಕಲ್​ ಯಶಸ್ವಿ ಪದಾರ್ಪಣೆ

ರೋಹಿತ್​&ಗಿಲ್​ ಜೋಡಿ ಬೇರ್ಪಟ್ಟ ಬೆನ್ನಲ್ಲೇ ಕಣಕ್ಕಿಳಿದ ಕನ್ನಡಿಗ ದೇವದತ್​ ಪಡಿಕ್ಕಲ್​ (65 ರನ್​, 103 ಎಸೆತ, 10 ಬೌಂಡರಿ, 1 ಸಿಕ್ಸರ್) ಅರ್ಧಶತಕ ಬಾರಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಯಶಸ್ವಿ ಪದಾರ್ಪಣೆ ಮಾಡಿದರು. 4ನೇ ವಿಕೆಟ್​ಗೆ ಅವರು ಸ್ರಾರ್ಜ್​ ಖಾನ್​ (56 ರನ್​, 60 ಎಸೆತ, 8 ಬೌಂಡರಿ, 1 ಸಿಕ್ಸರ್​) ಜತೆಗೂಡಿ 132 ಎಸೆತಗಳಲ್ಲಿ 97 ರನ್​ ಸೇರಿಸಿದರು. ವೇಗವಾಗಿ ರನ್​ ಕಲೆಹಾಕುವ ಮೂಲಕ ಚಹಾ ವಿರಾಮದವರೆಗೂ ಈ ಯುವ ಜೋಡಿ ಆಂಗ್ಲರಿಗೆ ಸವಾಲಾಗಿ ನಿಂತಿತು. ಸ್ರಾರ್ಜ್​ 55 ಮತ್ತು ಪಡಿಕ್ಕಲ್​ 83 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ದೇಶೀಯ ಕ್ರಿಕೆಟ್​ನಲ್ಲಿ ರನ್​ಮಳೆ ಹರಿಸಿದ್ದಕ್ಕೆ ಪ್ರತಿಫಲವಾಗಿ ಸಿಕ್ಕ ಅವಕಾಶವನ್ನು 23 ವರ್ಷದ ಪಡಿಕ್ಕಲ್​ ಸಮರ್ಥವಾಗಿ ಬಳಸಿಕೊಂಡರು. ಆದರೆ ಚೊಚ್ಚಲ ಟೆಸ್ಟ್​ನಲ್ಲೇ ಶತಕ ಬಾರಿಸುವ ಅವಕಾಶವನ್ನು ಕೈಚೆಲ್ಲಿದರು. ಭಾರತ ಪರ ಟಿ20ಗೆ 2021ರಲ್ಲೇ ಪದಾರ್ಪಣೆ ಮಾಡಿದ್ದರೂ, ನಂತರದಲ್ಲಿ ಕರೊನಾ ಮತ್ತು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದ ಬಳಲಿದ್ದ ಪಡಿಕ್ಕಲ್​, ಪುನರಾಗಮನದ ಬಳಿಕ 2023-24ರ ದೇಶೀಯ ಕ್ರಿಕೆಟ್​ ಋತುವಿನಲ್ಲಿ ರನ್​ಮಳೆ ಹರಿಸಿ ಮತ್ತೆ ಗಮನಸೆಳೆದಿದ್ದರು.

ಬಶೀರ್​-ಹಾರ್ಟ್ಲಿ ಬ್ರೇಕ್​

ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಸ್ಪಿನ್ನರ್​ ಶೋಯಿಬ್​ ಬಶೀರ್​ (170ಕ್ಕೆ 4) ಬ್ರೇಕ್​ ಹಾಕಿದರೆ, ಮತ್ತೋರ್ವ ಸ್ಪಿನ್ನರ್​ ಟಾಮ್​ ಹಾರ್ಟ್ಲಿ (126ಕ್ಕೆ 2) ಉತ್ತಮ ಬೆಂಬಲ ಒದಗಿಸಿದರು. ಚಹಾ ವಿರಾಮದ ಬಳಿಕ ಮೊದಲ ಎಸೆತದಲ್ಲೇ ಸ್ರಾರ್ಜ್​ ಔಟಾದರೆ, ರವೀಂದ್ರ ಜಡೇಜಾ (15) ಜತೆಗೆ 27 ಸೇರಿಸಿ ಪಡಿಕ್ಕಲ್​ ಕೂಡ ಬಶೀರ್​ಗೆ ವಿಕೆಟ್​ ಒಪ್ಪಿಸಿದರು. ನಂತರದಲ್ಲಿ ಧ್ರುವ ಜುರೆಲ್​ (15), ಜಡೇಜಾ ಮತ್ತು ಆರ್​. ಅಶ್ವಿನ್​ 1 ರನ್​ ಅಂತರದಲ್ಲಿ ಔಟಾದರು. ಅಶ್ವಿನ್​ 100ನೇ ಟೆಸ್ಟ್​ನಲ್ಲಿ ಖಾತೆಯನ್ನೂ ತೆರೆಯದೆ ನಿರಾಸೆ ಅನುಭವಿಸಿದರು.

ಜೇಮ್ಸ್​ 699!

ಅನುಭವಿ ವೇಗಿ ಜೇಮ್ಸ್​ ಆಂಡರ್​ಸನ್​ ಎಸೆತವೊಂದರಲ್ಲಿ ಮುನ್ನುಗ್ಗಿ ಬಂದು ನೇರವಾಗಿ ಸಿಕ್ಸರ್​ ಸಿಡಿಸಿ ಗಮನಸೆಳೆದಿದ್ದ ಶುಭಮಾನ್​ ಗಿಲ್​ ಅಂತಿಮವಾಗಿ ಅವರದೇ ಎಸೆತದಲ್ಲಿ ಬೌಲ್ಡಾದರು. ಈ ಮೂಲಕ 41 ವರ್ಷದ ಆಂಡರ್​ಸನ್​ಗೆ 699ನೇ ವಿಕೆಟ್​ ಒಪ್ಪಿಸಿದರು.

4: ಶುಭಮಾನ್​ ಗಿಲ್​ (4098) ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ಸಾಧನೆ ಮಾಡಿದರು.

*11: ಶುಭಮಾನ್​ ಗಿಲ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 11ನೇ ಶತಕ ಬಾರಿಸಿದರು. ಟೆಸ್ಟ್​ನಲ್ಲಿ ಇದು 4ನೇ ಶತಕ. ಏಕದಿನದಲ್ಲಿ 6, ಟಿ20ಯಲ್ಲಿ 1 ಶತಕ ಸಿಡಿಸಿದ್ದಾರೆ.

*5: ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ನಲ್ಲಿ ಭಾರತದ ಅಗ್ರ ಕ್ರಮಾಂಕದ ಐವರು ಬ್ಯಾಟರ್​ಗಳು 50 ಪ್ಲಸ್​ ರನ್​ ಗಳಿಸಿದ್ದು ಇದೇ ಮೊದಲಾಗಿದೆ.