ಕ್ರೀಡೆ

ಧೋನಿ ಕ್ಯಾಪ್ಟನ್​ ಆದ ತಕ್ಷಣ... ಸಿಎಸ್​ಕೆಗೆ 'ತಲಾ' ದಾರಿ, ಮಾಜಿ ಕ್ರಿಕೆಟಿಗ ರಾಬಿನ್​ ಉತ್ತಪ್ಪ ಭವಿಷ್ಯ ನುಡಿ | MS Dhoni

ಮೋಹನ್​ ಶೆಟ್ಟಿ

MS Dhoni: ಪ್ರಸಕ್ತ ನಡೆಯುತ್ತಿರುವ ಐಪಿಎಲ್​ 18ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿರುವ ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್​, ರುತುರಾಜ್ ಗಾಯಕ್ವಾಡ್​ ನಾಯಕತ್ವದಲ್ಲಿ ಸತತ ಸೋಲುಗಳನ್ನು ಅನುಭವಿಸಿದೆ. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯವನ್ನು ಹೀನಾಯವಾಗಿ ಸೋತಿದೆ. ಇದು ಫ್ರಾಂಚೈಸಿ ಅಭಿಮಾನಿಗಳು ಮಾತ್ರವಲ್ಲದೇ ಮಾಜಿ ಕ್ರಿಕೆಟಿಗರ ಬೇಸರಕ್ಕೂ ಕಾರಣವಾಗಿದೆ.

ತಂಡದಿಂದ ರುತುರಾಜ್​ ಹೊರಗೆ

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರುತುರಾಜ್​ರನ್ನು ತಂಡದಿಂದ ಕೈಬಿಟ್ಟಿರುವ ಫ್ರಾಂಚೈಸಿ, ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಜವಾಬ್ದಾರಿಯನ್ನು ಹಸ್ತಾಂತರಿಸಿದೆ. ಇದು ಧೋನಿ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಖುಷಿ, ಉತ್ಸಾಹವನ್ನು ಹೆಚ್ಚಿಸಿದ್ದು, ಕೆಲವು ವರ್ಷಗಳ ಬಳಿಕ ಮತ್ತೊಮ್ಮೆ ಧೋನಿಯನ್ನು ಕ್ಯಾಪ್ಟನ್ ಕೂಲ್ ಆಗಿ ನೋಡುವ ಭಾಗ್ಯ ದೊರೆಯಲಿದೆ ಎಂಬ ಸಂತಸ ಮೂಡಿದೆ. ಆದರೆ, ಧೋನಿ ನಾಯಕತ್ವ ಸಿಎಸ್​ಕೆಗೆ ಸಿಕ್ಕರೂ ಗೆಲುವಿನ ವಿಚಾರದಲ್ಲಿ ಯಾವುದೂ ಬದಲಾವಣೆ ಆಗುವುದಿಲ್ಲ. ಬದಲಿಗೆ ಎಲ್ಲವೂ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ ಎಂದು ಮಾಜಿ ಸಿಎಸ್​ಕೆ ಬ್ಯಾಟರ್​ ರಾಬಿನ್ ಉತ್ತಪ್ಪ ಅಭಿಪ್ರಾಯಿಸಿದ್ದಾರೆ.

ಕೆಕೆಆರ್ ವಿರುದ್ಧ ಪೈಪೋಟಿ

ಇಂದು (ಏ.11) ಸಂಜೆ ಚೆಪಾಕ್‌ ಮೈದಾನದಲ್ಲಿ ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಸಿಎಸ್​ಕೆ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಮಾತನಾಡಿದ ರಾಬಿನ್ ಉತ್ತಪ್ಪ, "ಕ್ಯಾಪ್ಟನ್​ ಆಗಿ ಧೋನಿ ಸಿಎಸ್​ಕೆ ಪರ ಆಡುವುದರಿಂದ ಚೆನ್ನೈ ತಂಡದ ಪ್ರಸ್ತುತ ಚಿತ್ರಣ ಬದಲಾಗುವುದಿಲ್ಲ. ತಂಡದಲ್ಲಿ ಹಲವು ನ್ಯೂನತೆಗಳಿವೆ. ಅವುಗಳನ್ನು ಮೊದಲು ಸರಿಪಡಿಸಬೇಕು. ಇದಲ್ಲದೆ, ಧೋನಿಯನ್ನು ಮತ್ತೆ ನಾಯಕನನ್ನಾಗಿ ಮಾಡುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ" ಎಂದರು.

"ರುತುರಾಜ್​ರಂತಹ ಪ್ರಮುಖ ಬ್ಯಾಟರ್​ನನ್ನು ಯಾರಿಂದ ಬದಲಾಯಿಸುತ್ತೀರಿ? ಅವರ ಸ್ಥಾನವನ್ನು ನೀವು ಹೇಗೆ ತುಂಬುತ್ತೀರಿ? ಮ್ಯಾನೇಜ್​ಮೆಂಟ್​ ರಾಹುಲ್​ ತ್ರಿಪಾಠಿಯನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲು ಮುಂದಾಗಬೇಕು. ತಂಡದಲ್ಲಿ ಸಾಕಷ್ಟು ಬದಲಾವಣೆಗಳ ಅಗತ್ಯವಿದೆ. ಧೋನಿ ಒಬ್ಬರಿಂದಲೇ ಎಲ್ಲವೂ ಸಾಧ್ಯವಿಲ್ಲ. ಈಗಾಗಲೇ ಅವರು ತಮ್ಮ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದಾರೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).