ಕ್ರೀಡೆ

ಕೆಎಸ್​ಸಿಎ ಆಡಳಿತ ವೈಖರಿ ವಿರುದ್ಧ ರಾಬಿನ್​ ಉತ್ತಪ್ಪ ಅಸಮಾಧಾನ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ (ಕೆಎಸ್​ಸಿಎ) ಆಡಳಿತ ವೈಖರಿಯ ವಿರುದ್ಧ ಮಾಜಿ ಬ್ಯಾಟರ್​ ರಾಬಿನ್​ ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ತನ್ನನ್ನು ಸೇರಿದಂತೆ ರಾಜ್ಯದ ಪ್ರಮುಖ ಆಟಗಾರರನ್ನು ನಡೆಸಿಕೊಂಡ ರೀತಿಯ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

'ಕೆಎಸ್​ಸಿಎಯಲ್ಲಿನ ರಾಜಕೀಯದಿಂದಾಗಿ ರಾಜ್ಯದ ಹಲವು ಪ್ರಮುಖ ಕ್ರಿಕೆಟಿಗರ ವೃತ್ತೀಜಿವನ ಸರಿಯಾದ ದಿಕ್ಕಿನಲ್ಲಿ ಸಾಗಲಿಲ್ಲ. ಕರ್ನಾಟಕದಲ್ಲಿ ಹಲವಾರು ಪ್ರತಿಭಾನ್ವಿತ ಆಟಗಾರರನ್ನು ತಪ್ಪಾಗಿ ನಡೆಸಿಕೊಳ್ಳಲಾಗಿದೆ' ಎಂದು 2002ರಿಂದ 2017ರವರೆಗೆ ರಾಜ್ಯದ ಪರ 15 ವರ್ಷಗಳ ಅವಧಿಯಲ್ಲಿ 130 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಉತ್ತಪ್ಪ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕರ್ನಾಟಕ 2014-15ರಲ್ಲಿ ಕೊನೆಯದಾಗಿ ರಣಜಿ ಟ್ರೋಫಿ ಗೆದ್ದಾಗ ಇದ್ದ ಆಟಗಾರರನ್ನು ಸಂಪೂರ್ಣವಾಗಿ ವಿಘಟಿತಗೊಳಿಸಲಾಯಿತು. ಒಬ್ಬೊಬ್ಬರಾಗಿ ಬಹುತೇಕ ಎಲ್ಲ ಆಟಗಾರರು ಬೇರೆ ರಾಜ್ಯಗಳಿಗೆ ವಲಸೆ ಹೋದರು, ಅದಕ್ಕಿಂತ ಹೆಚ್ಚಾಗಿ ಹೋಗುವಂತೆ ಮಾಡಲಾಯಿತು. ಆಯ್ಕೆಗಾರರು ಮತ್ತು ಆಡಳಿತಾಧಿಕಾರಿಗಳು ತಮ್ಮ ಅಧಿಕಾರವನ್ನು ನಕಾರಾತ್ಮಕವಾಗಿ ಬಳಸಿಕೊಂಡರು. ಕರ್ನಾಟಕ ಕ್ರಿಕೆಟ್​ ಈಗ ಆರೋಗ್ಯಕರ ಸ್ಥಿತಿಯಲ್ಲಿಲ್ಲ. ಪ್ರತಿಭೆ ಇದ್ದರೂ ಬೆಳೆಯಲು ಅವಕಾಶ ಸಿಗುತ್ತಿಲ್ಲ. ಇದರಿಂದಾಗಿ ರಾಜ್ಯದ ಹಲವು ಕ್ರಿಕೆಟಿಗರು ವಲಸೆ ಹೋಗುವಂತಾಗಿದೆ ಎಂದು 37 ವರ್ಷದ ಉತ್ತಪ್ಪ ವಿವರಿಸಿದ್ದಾರೆ.

'ಸದ್ಯ ಕರ್ನಾಟಕದಲ್ಲಿ ಕ್ರಿಕೆಟಿಗರನ್ನು ಅಭದ್ರತೆ ಕಾಡುತ್ತಿದೆ. ರಣಜಿ ಟ್ರೋಫಿ ಪ್ರಶಸ್ತಿ ಗೆದ್ದರೆ ಭಾರತ ತಂಡದ ಪರ ಆಡುವ ಹಾದಿ ಸುಗಮವಾಗುತ್ತದೆ. ಕೆಎಲ್​ ರಾಹುಲ್​, ಕರುಣ್​ ನಾಯರ್​, ಮನೀಷ್​ ಪಾಂಡೆ ಅದೇ ಕಾರಣದಿಂದಾಗಿ ಭಾರತ ಪರ ಆಡುವ ಅವಕಾಶ ಪಡೆದುಕೊಂಡರು ಎಂದು ಉತ್ತಪ್ಪ ಹೇಳಿದ್ದಾರೆ.

ಕರ್ನಾಟಕ ತಂಡ 2013-14 ಮತ್ತು 2014-15ರಲ್ಲಿ ಸತತ 2 ಬಾರಿ ರಣಜಿ ಟ್ರೋಫಿ ಗೆದ್ದಾಗ ತಂಡದಲ್ಲಿದ್ದ ಉತ್ತಪ್ಪ, ಗಣೇಶ್​ ಸತೀಶ್​, ಅಮಿತ್​ ವರ್ಮ, ವಿನಯ್​ಕುಮಾರ್​, ಸ್ಟುವರ್ಟ್​ ಬಿನ್ನಿ ನಂತರದಲ್ಲಿ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದರು. ಅದೇ ತಂಡದಲ್ಲಿದ್ದ ಕರುಣ್​ ನಾಯರ್​, ಶ್ರೇಯಸ್​ ಗೋಪಾಲ್​ ಕೂಡ ಇತ್ತೀಚೆಗೆ ರಾಜ್ಯ ತಂಡ ತೊರೆದಿದ್ದಾರೆ.

ಹಾಲಿ ದೇಶೀಯ ಕ್ರಿಕೆಟ್​ ಋತುವಿನ ಮೊದಲ ಟೂರ್ನಿ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಕನಿಷ್ಠ ನಾಕೌಟ್​ ಹಂತಕ್ಕೇರಲು ವಿಫಲವಾಗಿದೆ.