ಕ್ರೀಡೆ

ವಿಶ್ವಕಪ್​ನಲ್ಲಿ ಗರಿಷ್ಠ ಮೊತ್ತದ ಚೇಸಿಂಗ್​ ದಾಖಲೆ ಬರೆದ ಪಾಕಿಸ್ತಾನ

ಹೈದರಾಬಾದ್​: ಮೊದಲ ಪಂದ್ಯದಲ್ಲಿ ನಿರೀಕ್ಷಿತ ನಿರ್ವಹಣೆ ತೋರದ ಪಾಕಿಸ್ತಾನ ದಾಖಲೆಯ ರನ್​ ಚೇಸಿಂಗ್​ನಲ್ಲಿ 37 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆಗ ವಿಕೆಟ್​ ಕೀಪರ್-ಬ್ಯಾಟರ್​ ಮೊಹಮದ್​ ರಿಜ್ವಾನ್​ (131* ರನ್​, 121 ಎಸೆತ, 8 ಬೌಂಡರಿ, 3 ಸಿಕ್ಸರ್​) ಶತಕ ಹಾಗೂ ಯುವ ಬ್ಯಾಟರ್​ ಅಬ್ದುಲ್ಲಾ ಶಫೀಕ್​ (113 ರನ್​, 103 ಎಸೆತ, 10 ಬೌಂಡರಿ, 3 ಸಿಕ್ಸರ್​) ಸಿಡಿಸಿದ ಸಮಯೋಚಿತ ಶತಕದ ನೆರವಿನಿಂದ ಬಾಬರ್​ ಅಜಮ್​ ಪಡೆ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಶ್ರೀಲಂಕಾ ಎದುರು 6 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ವಿಶ್ವಕಪ್​ನಲ್ಲಿ ಗರಿಷ್ಠ ಮೊತ್ತದ ಚೇಸಿಂಗ್​ ದಾಖಲೆ ಬರೆಯಿತು. 2011ರಲ್ಲಿ ಆಂಗ್ಲರೆದುರು ಐರ್ಲೆಂಡ್​ 329 ರನ್​ ಚೇಸಿಂಗ್​ ಮಾಡಿದ್ದು ಹಿಂದಿನ ಗರಿಷ್ಠ.

ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ನರ ಕಾದಾಟದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಲಂಕಾ ಪರ, ಶಹೀನ್​ ಷಾ ಅಫ್ರಿದಿ ಹಾಗೂ ಹ್ಯಾರಿಸ್​ ರೌಫ್​ ಜೋಡಿಯನ್ನು ಸಮರ್ಥವಾಗಿ ಎದುರಿಸಿದ ಕುಸಲ್​ ಮೆಂಡಿಸ್​ (122 ರನ್​, 77 ಎಸೆತ, 14 ಬೌಂಡರಿ, 6 ಸಿಕ್ಸರ್​) ಸ್ಫೋಟಕ ಶತಕ ಮತ್ತು ಸಧೀರ ಸಮರವಿಕ್ರಮ (108 ರನ್​, 89 ಎಸೆತ, 11 ಬೌಂಡರಿ, 2 ಸಿಕ್ಸರ್​) ಶತಕದ ಬಲದಿಂದ 9 ವಿಕೆಟ್​ಗೆ 344 ರನ್​ ಪೇರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಪಾಕ್​, ಆರಂಭಿಕ ಆಘಾತದ ಬಳಿಕ ರಿಜ್ವಾನ್​-ಶಫೀಕ್​ ನಡುವಿನ 3ನೇ ವಿಕೆಟ್​ ಜತೆಯಾಟದಿಂದ 48.2 ಓವರ್​ಗಳಲ್ಲಿ 4 ವಿಕೆಟ್​ಗೆ 345 ರನ್​ಗಳಿಸಿ ಯಶಸ್ವಿ ಚೇಸಿಂಗ್​ ನಡೆಸಿತು. ಲಂಕಾ ಸತತ 2ನೇ ಸೋಲುಂಡಿತು.

ಶ್ರೀಲಂಕಾ: 9 ವಿಕೆಟ್​ಗೆ 344 (ನಿಸ್ಸಂಕ 51, ಕುಸಲ್​ ಮೆಂಡಿಸ್​ 122, ಸಧೀರ 108, ಧನಂಜಯ 25, ಶನಕ 12, ಹಸನ್​ ಅಲಿ 71ಕ್ಕೆ4, ಹ್ಯಾರಿಸ್​ ರೌಫ್​ 64ಕ್ಕೆ2). ಪಾಕ್​: 48.2 ಓವರ್​ಗಳಲ್ಲಿ 4 ವಿಕೆಟ್​ಗೆ 345 ( ಶಫೀಕ್​ 113, ಬಾಬರ್​ 10, ರಿಜ್ವಾನ್​ 131* ಶಕೀಲ್​ 31, ಇಫ್ತಿಕರ್​ 22*, ಮಧುಶಂಕ 60ಕ್ಕೆ2).