Rishabh Pant: ಭಾರತ ಟೆಸ್ಟ್ ತಂಡದ ಉಪನಾಯಕ ರಿಷಭ್ ಪಂತ್ ಎಡಗಾಲಿನ ಗಾಯದ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದು, ಬುಧವಾರ (ಆಗಸ್ಟ್ 13) ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅದರ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ.
ನನಗೆ ಇದು ಇಷ್ಟವಿಲ್ಲ ಎಂದು ಪಂತ್ ಸ್ಟೋರಿಯಲ್ಲಿ ತಮ್ಮ ಪಾದದ ಪೋಟೊ ಮೇಲೆ ಬರೆದುಕೊಂಡಿದ್ದಾರೆ.
27 ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪಂತ್, ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಕ್ರಿಸ್ ವೋಕ್ಸ್ ಎಸೆದ ಚೆಂಡು ಅವರ ಕಾಲಿಗೆ ಬಡಿದ ಪರಿಣಾಮ ಅವರ ಪಾದಕ್ಕೆ ಗಾಯವಾಗಿತ್ತು. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕಗಳನ್ನು ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು.
37 ರನ್‌ಗಳಿಗೆ ಗಾಯಗೊಂಡು ನಿವೃತ್ತರಾಗಿದ್ದ ಪಂತ್, ಶಾರ್ದೂಲ್ ಠಾಕೂರ್ ಔಟಾದ ನಂತರ ನಿರ್ಣಾಯಕ ಹಂತದಲ್ಲಿ ಕ್ರಿಸ್ಗೆ ಮರಳಿ 75 ಎಸೆತಗಳಲ್ಲಿ 54 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ತಂಡದ ಬಗೆಗಿನ ಪಂತ್ ಬದ್ಧತೆ ಅನೇಕರನ್ನು ಅಚ್ಚರಿಗೊಳಿಸಿದ್ದು, ಈ ಕುರಿತಾಗಿ ಮಾತನಾಡಿದ ಮುಖ್ಯ ಕೋಚ್ ಗೌತಮ್ ಗಂಭೀರ್, ತಂಡಕ್ಕೆ ಅವರ ಬ್ಯಾಟಿಂಗ್ ನಿರ್ಣಾಯಕವಾಗಿತ್ತು, ಅವರನ್ನು ಎಷ್ಟೆ ಹೊಗಳಿದರು ಕಡಿಮೆ, ಗಾಯದ ನಡುವೆ ಬ್ಯಾಟಿಂಗ್ ಮಾಡುವುದು ಸುಲಭವಲ್ಲ, ಪಂತ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಮುಂದಿನ ಪೀಳಿಗೆಯೂ ಮಾತನಾಡಬಹುದು ಎಂದು ಅಭಿಪ್ರಾಯಪಟ್ಟರು. (ಏಜೆನ್ಸೀಸ್)