ಕ್ರೀಡೆ

T20 World Cup: ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್ಸ್‌‌ ಕಂಬ್ಯಾಕ್‌! ಇಲ್ಲಿದೆ ಸಂಭಾವ್ಯ ಭಾರತ ತಂಡ

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 17ನೇ ಆವೃತ್ತಿಯ ಅಂತ್ಯದ ಬೆನ್ನಲ್ಲೇ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಕಿರು ವಿಶ್ವಕಪ್ ಜೂನ್ 1 ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ.

ಐಪಿಎಲ್‌ 2024 ಟೂರ್ನಿಯಲ್ಲಿ ಆಟಗಾರರು ನೀಡುವ ಪ್ರದರ್ಶನದ ಮೇಲೆ ಬಿಸಿಸಿಐ ಸೆಲೆಕ್ಟರ್ಸ್‌ ಹದ್ದಿನ ಕಣ್ಣಿಟ್ಟಿದೆ. ಜೂನ್ 1 ರಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಕದನಕ್ಕಾಗಿ ಎಲ್ಲಾ ತಂಡಗಳು ಮೇ 1 ರೊಳಗೆ ತಮ್ಮ ತಂಡಗಳನ್ನು ಪ್ರಕಟಿಸಬೇಕಿದೆ. ಇದಕ್ಕಾಗಿ ಬಿಸಿಸಿಐ ಕೆಲ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಪಟ್ಟಿಯಲ್ಲಿ ರಿಷಭ್ ಪಂತ್ ಅವರ ಹೆಸರು ಕೂಡ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಭಾರತ ಟಿ20 ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಫರ್ ರಿಷಬ್ ಪಂತ್ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಅಪಘಾತದ ಬಳಿಕ ಒಂದು ವರ್ಷ ಆಟದಿಂದ ದೂರ ಉಳಿದಿದ್ದ ಪಂತ್ ಇದೀಗ ಐಪಿಎಲ್ ನಲ್ಲಿ ಅಮೋಘವಾಗಿ ಆಡುತ್ತಿದ್ದಾರೆ.

ಈ ಋತುವಿನಲ್ಲಿ ಆಡಿರುವ 5 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದಿರುವ ಪಂತ್ 154.55ರ ಸ್ಟ್ರೈಕ್ ರೇಟ್​ನಲ್ಲಿ 153 ರನ್ ಕಲೆಹಾಕಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಈ ಮೂಲಕ ಭರ್ಜರಿ ಪ್ರದರ್ಶನ ನೀಡಿರುವ ಪಂತ್​ಗೆ ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ.

ಪಂತ್ ಆಯ್ಕೆ ಬಹುತೇಕ ಅಂತಿಮಗೊಂಡಿದ್ದು, ಟಿ20 ವಿಶ್ವಕಪ್ ತಂಡದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಜಿತೇಶ್ ಶರ್ಮಾಗೆ ಅವಕಾಶ ಸಿಗುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ ಮುಂಬರುವ ಪಂದ್ಯಗಳಲ್ಲಿ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ಇಬ್ಬರಲ್ಲಿ ಒಬ್ಬರನ್ನು ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಬಹುದು ಎನ್ನಲಾಗಿದೆ.ಅಮೆರಿಕ ಮತ್ತು ವೆಸ್ಟ್ ಇಂಡೀಸ್​ ನಲ್ಲಿ ಟಿ20 ವಿಶ್ವಕಪ್ ಮೂಲಕ ರಿಷಬ್​ ಪಂತ್ ರೀ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗಿದೆ

ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ರಿಂಕು ಸಿಂಗ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.