ಕ್ರೀಡೆ

ಆರು ತಿಂಗಳ ಕಾಲ ನಾನು ಹಲ್ಲುಜ್ಜಲ್ಲೂ ಸಾಧ್ಯವಾಗಿರಲಿಲ್ಲ; ಅಪಘಾತದ ದಿನಗಳನ್ನು ನೆನೆದು ಭಾವುಕರಾದ ರಿಷಭ್

ನವದೆಹಲಿ: 2022ರ ವರ್ಷಾಂತ್ಯದಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾಗಿ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದ ರಿಷಭ್​ ಪಂತ್​ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡುವ ಮೂಲಕ ಮುಂಬರುವ ಟಿ-20 ವಿಶ್ವಕಪ್​ನಲ್ಲೂ ಸ್ಥಾನ ಪಡೆಯುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಲು ಸಜ್ಜಾಗಿದ್ದಾರೆ.

2022ರ ಡಿಸೆಂಬರ್ 30ರಂದು ಹೊಸ ವರ್ಷಾಚರಣೆಗೆ ಮನೆಗೆ ತೆರಳಿ ಅಮ್ಮನಿಗೆ ಅಚ್ಚರಿ ಉಂಟು ಮಾಡಲು ಬಯಿಸದ್ದ ರಿಷಭ್ ಪಂತ್ ಅವರ ಪ್ರಯಾಣ ಭೀಕರ ಅಪಘಾತದಲ್ಲಿ ಕೊನೆಗೊಂಡಿತ್ತು. ಉತ್ತರಾಖಂಡದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುತ್ತಿದ್ದ ಪಂತ್ ಅವರಿದ್ದ ಕಾರು  ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು. ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಆರಿಸುವ ಮುನ್ನವೇ ಹೊರಬಂದ ಕಾರಣ ಪಂತ್ ಬದುಕುಳಿದಿದ್ದರು. ಗಂಭೀರವಾಗಿ ಗಾಯಗೊಂಡ ಪಂತ್ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಅಪಘಾತಕ್ಕೀಡಾದ ಬಳಿಕ ಸಂಫೂರ್ಣವಾಗಿ ಚೇತರಿಸಿಕೊಂಡು ಐಪಿಎಲ್​ಗೆ ಮರಳಿದ ರಿಷಭ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ರಿಷಭ್​ ಶಿಖರ್​ ಧವನ್ ನಡೆಸಿಕೊಡುವ ಧವನ್ ಕರೆಂಗೆ ಎಂಬ ಕಾರ್ಯಕ್ರಮದಲ್ಲಿ ತಮ್ಮ ನೋವಿನ ದಿನಗಳನ್ನು ನೆನೆಸಿಕೊಂಡು ಭಾವುಕರಾಗಿದ್ದಾರೆ.

ಗಾಯದಿಂದ ಸಂಫೂರ್ಣವಾಗಿ ಗುಣಮುಖರಾಗಬೇಕೆಂದರೆ ನಂಬಿಕೆ ಮತ್ತು ಆತ್ಮವಿಶ್ವಾಸ ಮುಖ್ಯ. ಏಕೆಂದರೆ ನಿಮ್ಮ ಸುತ್ತಲೂ ಎಲ್ಲಾ ರೀತಿ ಮಾತನಾಡುವ ಜನರಿರುತ್ತಾರೆ. ನೀವು ಒಬ್ಬ ವ್ಯಕ್ತಿಯಾಗಿ ನಿಮಗೆ ಯಾವುದು ಉತ್ತಮ ಎಂದು ಯೋಚಿಸುವುದು ಸೂಕ್ತ. ಆ ಅಫಘಾತವು ನನ್ನ ಜೀವನವನ್ನು ಬದಲಾಯಿಸುವ ಅನುಭವವಾಗಿತ್ತು. ಅಪಘಾತದ ಬಳಿಕ ನಾನು ಬದುಕುಳಿಯುತ್ತೇನೆ ಎಂದುಕೊಂಡಿರಲಿಲ್ಲ. ಆರು ತಿಂಗಳುಗಳ ಕಾಲ ನಾನು ಹಲ್ಲುಜ್ಜಲು ಸಾಧ್ಯವಾಗಿರಲಿಲ್ಲ.

ನಾನು ಏರ್​ಪೋರ್ಟ್​ಗೆ ವೀಲ್​ಚೇರ್​ನಲ್ಲಿ ಹೋಗಲು ಹೆದರಿದ್ದೆ. ಜನರು ನನ್ನನ್ನು ನೋಡಿ ಏನೆಂದು ಹೇಳುತ್ತಾರೆಂದು. ನಂಬಿಕೆ ಹಾಗೂ ಆತ್ಮವಿಶ್ವಾಸ ನನ್ನನ್ನು ಬೇಗ ಗುಣಮುಖನಾಗುವಂತೆ ಮಾಡಿತು. ಈಗ ನಾನು ಕ್ರಿಕೆಟ್​ಗೆ ಮರಳಿದ್ದೇನೆ. ಒತ್ತಡಕ್ಕಿಂತೆ ಹೆ ಚ್ಚು ಉತ್ಸುಕನಾಗಿದ್ದೇನೆ. ಇದು ಎರಡನೇ ಜೀವನ ಎಂದು ಭಾವಿಸುತ್ತೇನೆ. ಉತ್ಸುಕತೆಯ ಜೊತೆಗೆ ಭಯದಲ್ಲಿದ್ದೇನೆ ಎಂದು ರಿಷಭ್​ ಪಂತ್​ ಶಿಖರ್​ ಧವನ್ ನಡೆಸಿಕೊಡುವ ಧವನ್ ಕರೆಂಗೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.