ಕ್ರೀಡೆ

ಲಖನೌ ಸೂಪರ್​ಜೈಂಟ್ಸ್​ಗೆ ರಿಷಭ್​ ಪಂತ್​ ಹೊಸ ನಾಯಕ; ಈಗ ಅಧಿಕೃತ...

ಕೋಲ್ಕತ: ವಿಕೆಟ್​ ಕೀಪರ್​&ಬ್ಯಾಟರ್​ ರಿಷಭ್​ ಪಂತ್​ ಮುಂಬರುವ ಐಪಿಎಲ್​ 18ನೇ ಆವೃತ್ತಿಗೆ ಪೂರ್ವಭಾವಿಯಾಗಿ ಲಖನೌ ಸೂಪರ್​ಜೈಂಟ್ಸ್​ ತಂಡದ ಹೊಸ ನಾಯಕರಾಗಿ ಸೋಮವಾರ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಎಲ್​ಎಸ್​ಜಿ ಸೇರಿದ್ದ ಪಂತ್​, ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡಲು ಶೇ. 200 ಪ್ರಯತ್ನ ಪಡುವುದಾಗಿ ಹೇಳಿದರು.

ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್​ ಗೋಯೆಂಕಾ ತಂಡದ ಹೊಸ ನಾಯಕನನ್ನು ಹೆಸರಿಸಿ, "ನಾವು ಹೊಸ ಭರವಸೆ ಮತ್ತು ಆಕಾಂಕ್ಷೆಯೊಂದಿಗೆ ಈ ಬಾರಿ ಕಣಕ್ಕಿಳಿಯಲಿದ್ದೇವೆ. ಹೊಸ ಆತ್ಮವಿಶ್ವಾಸವೂ ಬಂದಿದೆ' ಎಂದರು. ಐಪಿಎಲ್​ 18ನೇ ಆವೃತ್ತಿಗೆ ಇನ್ನು ಆರ್​ಸಿಬಿ, ಕೆಕೆಆರ್​ ಮತ್ತು ಡೆಲ್ಲಿ ತಂಡಗಳಷ್ಟೇ ನಾಯಕನ ಹೆಸರನ್ನು ಘೋಷಿಸುವುದು ಬಾಕಿ ಉಳಿದಿದೆ.

2016ರಿಂದ ಡೆಲ್ಲಿ ಕ್ಯಾಪಿಟಲ್ಸ್​ ಪರ ಐಪಿಎಲ್​ನಲ್ಲಿ ಆಡಿರುವ 26 ವರ್ಷದ ಪಂತ್​, 2021ರಲ್ಲಿ ನಾಯಕರಾಗಿ ನೇಮಕಗೊಂಡಿದ್ದರು. 2022ರ ಅಂತ್ಯದ ಕಾರು ಅಪಘಾತದ ಬಳಿಕ 2023ರ ಆವೃತ್ತಿ ತಪ್ಪಿಸಿಕೊಂಡಿದ್ದ ಪಂತ್​, 2024ರಲ್ಲಿ ಮತ್ತೆ ಡೆಲ್ಲಿ ನಾಯಕರಾಗಿ ಪುನರಾಗಮನ ಕಂಡಿದ್ದರು.