ಕ್ರೀಡೆ

ಸೆಂಚುರಿ ಸ್ಟಾರ್ ಪಂತ್​ಗೆ ಐಸಿಸಿ ಶಾಕ್​! ಟೀಮ್ ಇಂಡಿಯಾ ಉಪನಾಯಕ ಮಾಡಿದ ಎಡವಟ್ಟೇನು? | Rishabh Pant

Rishabh Pant: ಪ್ರಸಕ್ತ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ (ಜೂ.20) ಲೀಡ್ಸ್‌ನ ಹೆಡಿಂಗ್ಲಿನಲ್ಲಿ ಆರಂಭಗೊಂಡಿದ್ದು, ಇಂದು ಐದನೇ ಹಾಗೂ ಕೊನೆ ದಿನಕ್ಕೆ ಕಾಲಿಟ್ಟಿದೆ. ಆಂಗ್ಲರ ಎದುರು ಮೊದಲ ಟೆಸ್ಟ್​ ಗೆದ್ದು ಬೀಗಲು ಟೀಮ್ ಇಂಡಿಯಾ ಎದುರುನೋಡುತ್ತಿದೆ. ಈ ಮಧ್ಯೆ ಉಪನಾಯಕ, ಎರಡು ಶತಕ ಬಾರಿಸಿದ ರಿಷಭ್ ಪಂತ್ ಮಾಡಿದ ಎಡವಟ್ಟು ಇದೀಗ ಐಸಿಸಿ ಕಣ್ಣಿಗೆ ಬಿದ್ದಿದೆ.

ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಪಂತ್‌ಗೆ ಐಸಿಸಿ ವಾಗ್ದಂಡನೆ ವಿಧಿಸಿದ್ದು, ಡಿಮೆರಿಟ್ ಪಾಯಿಂಟ್ ಕೂಡ ನೀಡಿದೆ. ಪಂತ್ ನೀತಿ ಸಂಹಿತೆಯ ಆರ್ಟಿಕಲ್ 2.8 ಅನ್ನು ಉಲ್ಲಂಘಿಸಿದ ಹಿನ್ನೆಲೆ ಐಸಿಸಿ ಈ ನಿರ್ಧಾರವನ್ನು ಕೈಗೊಂಡಿದೆ. ಇದಕ್ಕೆ ಪಂತ್ ಕೂಡ ಒಪ್ಪಿಕೊಂಡಿದ್ದು, ತಮ್ಮಿಂದ ತಪ್ಪಾಗಿರುವುದಾಗಿ ಹೇಳಿದ್ದಾರೆ. ಈ ವಿಷಯದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುವುದಿಲ್ಲ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಸಲಿಗೆ ಆಗಿದ್ದೇನು?

ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನ 61ನೇ ಓವರ್‌ನಲ್ಲಿ, ಹ್ಯಾರಿ ಬ್ರೂಕ್ ಮತ್ತು ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬಾಲ್​ನ ಆಕಾರ ಹಾನಿಗೊಳಗಾಗಿದೆ ಎಂದು ಪಂತ್ ದೂರಿದರು. ಈ ವಿಚಾರವನ್ನು ಆನ್​ಫೀಲ್ಡ್​ ಅಂಪೈರ್​ವರೆಗೂ ತೆಗೆದುಕೊಂಡು ಪಂತ್​, ಬಾಲ್​ ಬದಲಿಸುವಂತೆ ಕೇಳಿದರು. ಇದಕ್ಕೆ ಒಪ್ಪದ ಆನ್​-ಫೀಲ್ಡ್​ ಅಂಪೈರ್​, ಬದಲಿಸುವ ಮಾತನ್ನು ತಳ್ಳಿಹಾಕಿದರು. ಇದರಿಂದ ಕೆರಳಿದ ರಿಷಭ್, ತನ್ನ ಕೈಯಲ್ಲಿದ್ದ ಬಾಲ್​ ಅನ್ನು ಕೋಪದಲ್ಲಿ ಅಂಪೈರ್ ಕಡೆ ಎಸೆದ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿತು.

ಎರಡೂ ಇನ್ನಿಂಗ್ಸ್‌ನಲ್ಲಿ ಪಂತ್​ ಶತಕ

ಇದೆಲ್ಲದರ ಮಧ್ಯೆ, ಮೊದಲ ಟೆಸ್ಟ್​ನಲ್ಲಿ ಪಂತ್ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ದಾಖಲಿಸಿದರು. ಒಂದರಲ್ಲಿ 134 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 118 ರನ್ ಬಾರಿಸಿದರು. ಫಸ್ಟ್​ ಟೆಸ್ಟ್​ ಇನ್ನಿಂಗ್ಸ್​ನಲ್ಲಿ ಎರಡು ಶತಕ ದಾಖಲಿಸಿದ ಮೊದಲ ಭಾರತೀಯ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ರಿಷಭ್ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಕೆಟ್​ ಇತಿಹಾಸದಲ್ಲಿ ಪಂತ್ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ,(ಏಜೆನ್ಸೀಸ್).