ಕ್ರೀಡೆ

ಐಪಿಎಲ್​ನಲ್ಲಿ ರಿಷಭ್​ ಪಂತ್​ ಪ್ರತಿ ನಿಮಿಷಕ್ಕೆ 2,568 ರೂಪಾಯಿ ಸಂಪಾದನೆ!

ಬೆಂಗಳೂರು: ಐಪಿಎಲ್​ ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ. ಬಿಡ್​ ಪಡೆದುಕೊಂಡಿರುವ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ಮುಂದಿನ ವರ್ಷದ ಟೂರ್ನಿಯ ವೇಳೆ ಪ್ರತಿ ನಿಮಿಷಕ್ಕೆ 2,568 ರೂ. ಸಂಪಾದಿಸಲಿದ್ದಾರೆ. 2025ರ ಐಪಿಎಲ್​ ಮಾರ್ಚ್​ 14ರಿಂದ ಮೇ 25ರವರೆಗೆ ನಿಗದಿಯಾಗಿದೆ. ಅಂದರೆ ಟೂರ್ನಿ ಒಟ್ಟು 73 ದಿನಗಳ ಕಾಲ ನಡೆಯಲಿದೆ. ಈ ಆಧಾರದಲ್ಲಿ ಪಂತ್​ ಟೂರ್ನಿಯ ವೇಳೆ ಪ್ರತಿದಿನ 36.98 ಲಕ್ಷ ರೂ. ಗಳಿಸಲಿದ್ದಾರೆ. ಅಂದರೆ ಪ್ರತಿ ಗಂಟೆಗೆ 1.54 ಲಕ್ಷ ರೂ. ಸಂಪಾದಿಸಲಿದ್ದಾರೆ. ಅಂದರೆ ಟೂರ್ನಿಯ ವೇಳೆ ಪ್ರತಿ ಸೆಕೆಂಡ್​ಗೆ 42.80 ರೂ. ಗಳಿಸಲಿದ್ದಾರೆ!

ರಿಷಭ್​ ಪಂತ್​ಗಿಂತ ಕೇವಲ 25 ಲಕ್ಷ ರೂ. ಕಡಿಮೆ ಮೊತ್ತಕ್ಕೆ ಅಂದರೆ 26.75 ಕೋಟಿ ರೂ.ಗೆ ಪಂಜಾಬ್​ ಕಿಂಗ್ಸ್ ಪಾಲಾಗಿರುವ ಶ್ರೇಯಸ್​ ಅಯ್ಯರ್​, ಐಪಿಎಲ್ ಟೂರ್ನಿಯ ವೇಳೆ ಪ್ರತಿ ದಿನಕ್ಕೆ 36.64 ಲಕ್ಷ ರೂ. ಗಳಿಸಲಿದ್ದಾರೆ. ಪ್ರತಿ ಗಂಟೆಗೆ 1.52 ಲಕ್ಷ ರೂ. ಮತ್ತು ಪ್ರತಿ ನಿಮಿಷಕ್ಕೆ 2,544 ರೂ. ಗಳಿಸಲಿದ್ದಾರೆ. ಪ್ರತಿ ಸೆಕೆಂಡ್​ಗೆ 42.41 ರೂ. ಸಂಪಾದಿಸಲಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಕನಿಷ್ಠ 30 ಲಕ್ಷ ರೂ. ಮೂಲಬೆಲೆಗೆ ಮಾರಾಟವಾಗಿರುವ ಆಟಗಾರರು ಟೂರ್ನಿಯ ವೇಳೆ ಪ್ರತಿ ದಿನಕ್ಕೆ 41,095 ರೂ. ಮಾತ್ರ ಗಳಿಸಲಿದ್ದಾರೆ. ಪ್ರತಿ ಗಂಟೆಗೆ 1,712 ರೂ. ಮತ್ತು ಪ್ರತಿ ನಿಮಿಷಕ್ಕೆ 28 ರೂ. ಮಾತ್ರ ಗಳಿಸಲಿದ್ದಾರೆ. ಪ್ರತಿ ಸೆಕೆಂಡ್​ಗೆ 47 ಪೈಸೆ ಮಾತ್ರ ಪಡೆಯಲಿದ್ದಾರೆ.