ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತದಿಂದ ದಾಖಲೆ ಶೂಟರ್​ಗಳು; 16ನೇ ಕೋಟಾ ಸ್ಥಾನ ಗೆದ್ದುಕೊಟ್ಟ ರಿದಂ ಸಂಗ್ವಾನ್​

ಜಕಾರ್ತ: ಯುವ ಶೂಟರ್​ ರಿದಂ ಸಂಗ್ವಾನ್​ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತಕ್ಕೆ 16ನೇ ಕೋಟಾ ಸ್ಥಾನವನ್ನು ಗೆದ್ದುಕೊಟ್ಟಿದ್ದಾರೆ. ಏಷ್ಯನ್​ ಅರ್ಹತಾ ಶೂಟಿಂಗ್​ ಕೂಟದಲ್ಲಿ 25 ಮೀ. ಸ್ಪೋರ್ಟ್ಸ್​ ಪಿಸ್ತೂಲ್​ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅವರು ಈ ಸ್ಥಾನ ಮಾಡಿದ್ದಾರೆ. ಇದರೊಂದಿಗೆ ಪ್ಯಾರಿಸ್​ನಲ್ಲಿ ಭಾರತದಿಂದ ದಾಖಲೆಯ ಶೂಟರ್​ಗಳು ಪಾಲ್ಗೊಳ್ಳಲಿದ್ದಾರೆ.

2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತದಿಂದ 15 ಶೂಟರ್​ಗಳು ಭಾಗವಹಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಜುಲೈ&ಆಗಸ್ಟ್​ನಲ್ಲಿ ಪ್ಯಾರಿಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ನಲ್ಲಿ ಭಾರತದಿಂದ ಸರ್ವಾಧಿಕ 16 ಶೂಟರ್​ಗಳು ಭಾಗವಹಿಸಲಿದ್ದಾರೆ. ಏಷ್ಯನ್​ ಅರ್ಹತಾ ಕೂಟದಲ್ಲಿ ಭಾರತಕ್ಕೆ ಲಭಿಸಿದ 3ನೇ ಕೋಟಾ ಸ್ಥಾನ ಆಗಿದೆ. ಈ ಮುನ್ನ ಇಶಾ ಸಿಂಗ್​ ಮತ್ತು ವರುಣ್​ ತೋಮರ್​ ಮಹಿಳೆಯರ ಮತ್ತು ಪುರುಷರ 10 ಮೀ. ಪಿಸ್ತೂಲ್​ ವಿಭಾಗದಲ್ಲಿ ಕೋಟಾ ಸ್ಥಾನ ಗೆದ್ದಿದ್ದರು.

ಹರಿಯಾಣದ 20 ವರ್ಷದ ರಿದಂ ಕಳೆದ ವರ್ಷ ಏಷ್ಯನ್​ ಗೇಮ್ಸ್​ನಲ್ಲಿ 25 ಮೀ. ಪಿಸ್ತೂಲ್​ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಏಷ್ಯನ್​ ಅರ್ಹತಾ ಕೂಟದಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟರೂ ರಿದಂಗೆ ಒಲಿಂಪಿಕ್ಸ್​ ಸ್ಪರ್ಧೆ ಅವಕಾಶ ಲಭಿಸಿತು. ಇದು ಕೂಟದಲ್ಲಿ ರಿದಂಗೆ 3ನೇ ಪದಕವಾಗಿದೆ. ಈ ಮುನ್ನ 10 ಮೀ. ಏರ್​ ಪಿಸ್ತೂಲ್​ನ ಮಹಿಳಾ ತಂಡ ಸ್ಪರ್ಧೆಯಲ್ಲಿ ಇಶಾ ಜತೆ ಚಿನ್ನ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಅರ್ಜುನ್​ ಸಿಂಗ್​ ಜತೆ ಬೆಳ್ಳಿ ಗೆದ್ದಿದ್ದರು.