ಕ್ರೀಡೆ

ಇಂಗ್ಲೆಂಡ್​ ವಿರುದ್ಧ ಕ್ರಿಕೆಟ್​ ಸರಣಿಯಿಂದ ಕನ್ನಡಿಗ ಕೆಎಲ್​ ರಾಹುಲ್​ಗೆ ರೆಸ್ಟ್​? ಚಾಂಪಿಯನ್ಸ್ ಟ್ರೋಫಿಗೆ ವಾಪಸ್​!

ನವದೆಹಲಿ: ಟೀಮ್​ ಇಂಡಿಯಾ ಬ್ಯಾಟರ್​ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ಗೆ ಮುಂಬರುವ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ ಕ್ರಿಕೆಟ್​ ಸರಣಿಯಿಂದ ವಿಶ್ರಾಂತಿ ನೀಡಲಾಗುತ್ತದೆ. ಆದರೆ ಫೆ.19ರಿಂದ ನಡೆಯಲಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡದಲ್ಲಿ ಸ್ಥಾನ ಕಲ್ಪಿಸಲಾಗುತ್ತದೆ ಎಂದು ವರದಿಯಾಗಿದೆ.

ಆಸ್ಟ್ರೆಲಿಯಾದಲ್ಲಿ ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಎಲ್ಲ 5 ಪಂದ್ಯಗಳಲ್ಲಿ ಆಡಿರುವ ರಾಹುಲ್​, ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಯಾವುದೇ ಪಂದ್ಯ ಆಡುವುದಿಲ್ಲ. ಆದರೆ ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡದಲ್ಲಿ ಅವರು ಪ್ರಮುಖ ಸದಸ್ಯರಾಗಿರುತ್ತಾರೆ ಎನ್ನಲಾಗಿದೆ.

ರಾಹುಲ್​ ಇಂಗ್ಲೆಂಡ್​ ವಿರುದ್ಧ ಸರಣಿಯಿಂದ ವಿಶ್ರಾಂತಿ ಕೇಳಿದ್ದಾರೆ. ಆದರೆ ಚಾಂಪಿಯನ್ಸ್​ ಟ್ರೋಫಿಗೆ ಲಭ್ಯರಿರುವುದಾಗಿ ತಿಳಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರಾಹುಲ್​ ಈಗಾಗಲೆ ವಿಜಯ್​ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್​ ಟೂರ್ನಿಯ ನಾಕೌಟ್​ ಪಂದ್ಯಗಳಿಗೆ ಕರ್ನಾಟಕ ತಂಡದಿಂದಲೂ ವಿಶ್ರಾಂತಿ ಕೇಳಿದ್ದರು. ಆದರೆ ಜನವರಿ 23ರಿಂದ ನಡೆಯಲಿರುವ ರಣಜಿ ಟ್ರೋಫಿ 2ನೇ ಹಂತದ ಪಂದ್ಯಗಳಿಗೆ ಲಭ್ಯರಾಗುವರೇ ಎಂಬುದು ಸ್ಪಷ್ಟವಿಲ್ಲ.