ಕ್ರೀಡೆ

ಗುಕೇಶ್​ ಗೆದ್ದ ಬಹುಮಾನ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡಲು ಮನವಿ! ನಿಜಕ್ಕೂ ಕೇಂದ್ರ ಸರ್ಕಾರಕ್ಕೆ ತೆರಿಗೆ ಕಟ್ಟಬೇಕೇ?

ಚೆನ್ನೈ: ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್​ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ ಯುವ ಆಟಗಾರ ಡಿ. ಗುಕೇಶ್​ ತಮಗೆ ಲಭಿಸಿದ 11.45 ಕೋಟಿ ರೂ. ಬಹುಮಾನ ಮೊತ್ತದಲ್ಲಿ 4.8 ಕೋಟಿ ರೂ. (ಶೇ. 30+ಶೇ.4 ಆರೋಗ್ಯ, ಶಿಕ್ಷಣ ಸೆಸ್​) ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗಿದೆ. ಹೀಗಾಗಿ, ದೇಶಕ್ಕೆ ಹೆಮ್ಮೆ ತಂದಿರುವ ಗುಕೇಶ್​ಗೆ ತೆರಿಗೆ ವಿನಾಯಿತಿ ನೀಡಬೇಕೆಂದು ತಮಿಳುನಾಡಿನ ಕಾಂಗ್ರೆಸ್​ ಸಂಸದೆ ಆರ್​. ಸುಧಾ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಈ ಹಿಂದೆ ಕ್ರಿಕೆಟಿಗರಾದ ಸಚಿನ್​ ತೆಂಡುಲ್ಕರ್​ ಮತ್ತು ರವಿಶಾಸ್ತ್ರಿಗೆ ತೆರಿಗೆ ವಿನಾಯಿತಿ ನೀಡಿದ ವಿಶೇಷ ಸಂದರ್ಭಗಳನ್ನು ಅವರು ನೆನಪಿಸಿದ್ದಾರೆ. ಗುಕೇಶ್​ ಕಟ್ಟಬೇಕಿರುವ ಭಾರಿ ತೆರಿಗೆಗಾಗಿ, ಈ ಮುನ್ನ ಸಾಮಾಜಿಕ ಜಾಲತಾಣದಲ್ಲಿ ನಿರ್ಮಾಲಾ ಸೀತಾರಾಮನ್ ಅವರನ್ನು ಅಭಿನಂದಿಸುವ ಮೂಲಕ ನೆಟ್ಟಿಗರು ಕಾಲೆಳೆದಿದ್ದರು.

ಆದರೆ ಇನ್ನೊಂದು ವರದಿಯ ಪ್ರಕಾರ, ಟೂರ್ನಿ ನಡೆದಿರುವುದು ಸಿಂಗಾಪುರದಲ್ಲಾಗಿರುವ ಕಾರಣ ಗುಕೇಶ್​ ಅಲ್ಲೇ ತೆರಿಗೆ ಪಾವತಿಸಬೇಕಿದೆ. ಅಲ್ಲದೆ ಭಾರತ-ಸಿಂಗಾಪುರ ನಡುವಿನ ಅವಳಿ ತೆರಿಗೆ ತಪ್ಪಿಸುವ ಡಿಟಿಎಎ ಒಪ್ಪಂದದ ಪ್ರಕಾರ ಅವರು ಭಾರತದಲ್ಲಿ ತೆರಿಗೆ ಕಟ್ಟಬೇಕಿಲ್ಲ. ಸಿಂಗಾಪುರದಲ್ಲಿ ಗುಕೇಶ್​ ಶೇ. 22 ಅಂದರೆ 2.52 ಕೋಟಿ ರೂ. ತೆರಿಗೆ ಪಾವತಿಸಬೇಕಿದೆ.