ಮುಲ್ಲನ್ಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮನೆಯಂಗಣದಲ್ಲಿ ಹ್ಯಾಟ್ರಿಕ್ ಸೋಲಿನ ಆಘಾತ ಎದುರಿಸಿದ ಬೆನ್ನಲ್ಲೇ ಐಪಿಎಲ್ 18ನೇ ಆವೃತ್ತಿಯಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ಎದುರು ಮರುಮುಖಾಮುಖಿ ಆಗಲಿದೆ. ತವರಿನಾಚೆ ಸತತ 4 ಜಯದೊಂದಿಗೆ ಅಜೇಯವಾಗಿರುವ ಆರ್ಸಿಬಿ ತಂಡ ಮುಲ್ಲನ್ಪುರದ ಮಹಾರಾಜ ಯದವೀಂದ್ರ ಸಿಂಗ್ ಸ್ಟೇಡಿಯಂನಲ್ಲೂ ಗೆಲುವಿನ ಓಟ ಮುಂದುವರಿಸಲು ಸಜ್ಜಾಗಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಪಡೆ ಎದುರು ತವರಿನಲ್ಲಿ ಅನುಭವಿಸಿರುವ ಸೋಲಿಗೆ ಸೇಡು ತೀರಿಸಿಕೊಳ್ಳುವುದು ರಜತ್ ಪಾಟೀದಾರ್ ಬಳಗದ ಹಂಬಲವಾಗಿದೆ.
ಈಡನ್, ಚೆಪಾಕ್, ವಾಂಖೆಡೆ, ಜೈಪುರದಲ್ಲಿ ಗೆದ್ದಿರುವ ಆರ್ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ಗೆ ಹೊಂದಿಕೊಳ್ಳಲು ಮಾತ್ರ ಪರದಾಡುತ್ತಿದೆ. ತವರಿನಲ್ಲಿ ಆಡಿದ ಸತತ 3 ಪಂದ್ಯಗಳಲ್ಲೂ ಆರ್ಸಿಬಿಗೆ ಬ್ಯಾಟಿಂಗ್ ವಿಭಾಗವೇ ಪ್ರಮುಖವಾಗಿ ಹಿನ್ನಡೆಯಾಗಿದೆ. ಇನ್ನೂ 10-20 ರನ್ ಹೆಚ್ಚು ಗಳಿಸಿದ್ದರೆ ಈ ಮೂರೂ ಪಂದ್ಯಗಳಲ್ಲೂ ಗೆಲ್ಲುವ ಅವಕಾಶವಿತ್ತು. ಆದರೆ ಈ ಬಾರಿ ತವರಿನಿಂದ ಹೊರಗೆ ಆರ್ಸಿಬಿ ಬ್ಯಾಟಿಂಗ್ನಲ್ಲಿ ಉತ್ತಮ ನಿರ್ವಹಣೆಯನ್ನೇ ತೋರಿದೆ. ಹೀಗಾಗಿ ಮುಲ್ಲನ್ಪುರದಲ್ಲೂ ಇದೇ ನಿರ್ವಹಣೆ ಮುಂದುವರಿಯುವ ನಿರೀಕ್ಷೆ ಹರಡಿದೆ.
ಆರ್ಸಿಬಿ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಪ್ಲೇಆಫ್ ಹಂತಕ್ಕೇರಲು ಆರ್ಸಿಬಿಗೆ ಉಳಿದ 7 ಪಂದ್ಯಗಳಲ್ಲಿ ಮತ್ತೆ 4 ಗೆಲುವಿನ ಅಗತ್ಯವಿದೆ. ಮತ್ತೊಂದೆಡೆ ಪಂಜಾಬ್ ಇಷ್ಟೇ ಪಂದ್ಯಗಳಲ್ಲಿ 5 ಜಯ, 2 ಸೋಲಿನೊಂದಿಗೆ ಸುಸ್ಥಿತಿಯಲ್ಲಿದೆ.
ಪುಟಿದೇಳಬೇಕಿದೆ ಆರ್ಸಿಬಿ
ಮಳೆಯಿಂದಾಗಿ ತಲಾ 14 ಓವರ್ಗಳಿಗೆ ಕಡಿತಗೊಂಡ ತವರಿನ ಪಂದ್ಯದಲ್ಲಿ ಆರ್ಸಿಬಿಗೆ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಲಿವಿಂಗ್ಸ್ಟೋನ್ ಸಹಿತ ಪ್ರಮುಖ ಬ್ಯಾಟರ್ಗಳೆಲ್ಲ ಕೈಕೊಟ್ಟಿದ್ದರು. ಟಿಮ್ ಡೇವಿಡ್ ಏಕಾಂಗಿ ಸಾಹಸ ತೋರದಿದ್ದರೆ ಆರ್ಸಿಬಿ ಇನ್ನಷ್ಟು ಹೀನಾಯ ಸ್ಥಿತಿ ತಲುಪುತಿತ್ತು. ಬೌಲಿಂಗ್ನಲ್ಲಿ ಅನುಭವಿ ವೇಗಿಗಳಾದ ಜೋಶ್ ಹ್ಯಾಸಲ್ವುಡ್, ಭುವನೇಶ್ವರ್ ಕುಮಾರ್ ಆರ್ಸಿಬಿಗೆ ದಿಟ್ಟ ಪ್ರತಿಸ್ಪರ್ಧೆಯೊಡ್ಡಲು ನೆರವಾಗಿದ್ದರು. ಅವರಿಗೆ ಯಶ್ ದಯಾಳ್ ಮತ್ತು ಸ್ಪಿನ್ನರ್ಗಳಾದ ಸುಯಶ್ ಶರ್ಮ, ಕೃನಾಲ್ ಪಾಂಡ್ಯರಿಂದ ಇನ್ನಷ್ಟು ಉತ್ತಮ ಬೆಂಬಲ ಸಿಗಬೇಕಿದೆ.
ಶ್ರೇಯಸ್ ಪಡೆ ಗೆಲುವಿನ ಹ್ಯಾಟ್ರಿಕ್ ತವಕ
ಕಳೆದೆರಡು ಪಂದ್ಯಗಳಲ್ಲಿ ಕೆಕೆಆರ್, ಆರ್ಸಿಬಿ ವಿರುದ್ಧ ಅಮೋ ಬೌಲಿಂಗ್ ನಿರ್ವಹಣೆಯ ಮೂಲಕ ಗೆದ್ದಿರುವ ಶ್ರೇಯಸ್ ಅಯ್ಯರ್ ಪಡೆ ಇದೀಗ ಗೆಲುವಿನ ಹ್ಯಾಟ್ರಿಕ್ ಸಾಧಿಸುವ ತವಕದಲ್ಲಿದೆ. ಕೆಕೆಆರ್ ಎದುರು 111 ರನ್ ರಸಿಕೊಂಡಿದ್ದ ಪಂಜಾಬ್, ಮಳೆಬಾಧಿತ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು 95 ರನ್ಗಳಿಗೆ ನಿಯಂತ್ರಿಸಿತ್ತು. ಸ್ಪಿನ್ನರ್ ಯಜುವೇಂದ್ರ ಚಾಹಲ್ ಲಯಕ್ಕೆ ಮರಳಿರುವುದು ಪಂಜಾಬ್ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಶಕ್ತಿ ತುಂಬಿದೆ. ಜತೆಗೆ ಬ್ಯಾಟಿಂಗ್ನಲ್ಲಿ ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರನ್ ಸಿಂಗ್, ನೇಹಲ್ ವಧೇರ, ಶಶಾಂಕ್ ಸಿಂಗ್ರಂಥ ದೇಶೀಯ ಬ್ಯಾಟರ್ಗಳು ಪಂಜಾಬ್ ಯಶಸ್ಸಿಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರರಾದ ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್ ತಂಡದ ಪ್ರಮುಖ ಬಲ ಎನಿಸಿದ್ದಾರೆ. ಇವರೊಂದಿಗೆ ವಿದೇಶಿ ಆಟಗಾರರಾದ ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್ರಿಂದ ಪಂಜಾಬ್ ಇನ್ನಷ್ಟು ಕೊಡುಗೆ ನಿರೀಸುತ್ತಿದೆ.
ಮುಖಾಮುಖಿ: 33
ಪಂಜಾಬ್: 17
ಆರ್ಸಿಬಿ: 16
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
40 ಗಂಟೆಗೂ ಕಡಿಮೆ ಅಂತರದಲ್ಲಿ ಮತ್ತೆ ಕಣಕ್ಕೆ
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಆರ್ಸಿಬಿ-ಪಂಜಾಬ್ ಪಂದ್ಯ ಮಳೆಯಿಂದಾಗಿ ವಿಳಂಬವಾಗಿ ಆರಂಭಗೊಂಡಿತ್ತು. ಪಂದ್ಯ ಮುಗಿದಾಗ ರಾತ್ರಿ 12.10 ದಾಟಿತ್ತು. ಇದರ ಬೆನ್ನಲ್ಲೇ ಶನಿವಾರ ಚಂಡೀಗಢಕ್ಕೆ ಪ್ರಯಾಣಿಸಿರುವ ಉಭಯ ತಂಡಗಳು ಭಾನುವಾರ ಮಧ್ಯಾಹ್ನ 3.30ಕ್ಕೆ ಮುಲ್ಲನ್ಪುರದಲ್ಲಿ ಮತ್ತೆ ಪಂದ್ಯ ಆಡಲಿವೆ. 40 ಗಂಟೆಗೂ ಕಡಿಮೆ ಅಂತರದಲ್ಲಿ ಉಭಯ ತಂಡಗಳು ಮತ್ತೆ ಕಣಕ್ಕಿಳಿಯಲಿವೆ.