ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ 12 ವರ್ಷಗಳ ಹಿಂದೆ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಮುಖಾಮುಖಿಯಾಗಿದ್ದ ತಂಡಗಳಾದ ಆತಿಥೇಯ ಭಾರತ ಮತ್ತು ಶ್ರೀಲಂಕಾ ತಂಡಗಳು ಈ ಬಾರಿ ಲೀಗ್ ಹಂತದಲ್ಲೇ ಅದೇ ತಾಣದಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ. ಆದರೆ ಗುರುವಾರ ನಡೆಯಲಿರುವ ಈ ಪಂದ್ಯದಲ್ಲಿ ಆಗಿನ ರೋಚಕ ಕಾದಾಟದ ನಿರೀಕ್ಷೆ ಇಲ್ಲ. ಸತತ 6 ಗೆಲುವಿನೊಂದಿಗೆ ಬೀಗುತ್ತಿರುವ ಭಾರತ ಹಾಟ್ ಫೇವರಿಟ್ ತಂಡವಾಗಿ ಕಣಕ್ಕಿಳಿಯಲಿದ್ದರೆ, ಶ್ರೀಲಂಕಾ ತಂಡ ಆಗಿನಂತೆ ಈಗ ಬಲಿಷ್ಠವೆನಿಸಿಲ್ಲ. ಸೆಮೀಸ್ ಆಸೆಯನ್ನು ಬಹುತೇಕ ಕೈಚೆಲ್ಲಿರುವ ಲಂಕಾ ತಂಡ ಈ ಬಾರಿ ಹೆಚ್ಚಿನ ಒತ್ತಡ ಎದುರಿಸುತ್ತಿದೆ. ರೋಹಿತ್ ಶರ್ಮ ಪಡೆ ವಾಂಖೆಡೆಯಲ್ಲಿ ಸತತ 7ನೇ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶವನ್ನು ಅಧಿಕೃತಗೊಳಿಸುವ ತವಕದಲ್ಲಿದೆ. ಲಂಕಾ ಗೆದ್ದರಷ್ಟೇ, ಉಳಿದಿರುವ ಅಲ್ಪಸ್ವಲ್ಪ ಸೆಮೀಸ್ ಆಸೆಯನ್ನು ಜೀವಂತ ಉಳಿಸಿಕೊಳ್ಳಲಿದೆ.
ಚೆನ್ನೈನಲ್ಲಿ ಆಡಿದ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೆಲಿಯಾ ಎದುರು ಚೇಸಿಂಗ್ ವೇಳೆ ಕೇವಲ 2 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ, ಅಲ್ಲಿಂದ ಪುಟಿದೆದ್ದು ಗೆದ್ದ ಬಳಿಕ ತಿರುಗಿ ನೋಡಿದ್ದೇ ಇಲ್ಲ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಸರಾಗವಾಗಿ ಗೆಲುವು ಒಲಿಸಿಕೊಂಡಿದೆ. ಮೊದಲ 5 ಪಂದ್ಯಗಳಲ್ಲಿ ಚೇಸಿಂಗ್ ಮೂಲಕ ಗೆದ್ದಿದ್ದ ಭಾರತ, 6ನೇ ಪಂದ್ಯದಲ್ಲಿ ಆಂಗ್ಲರೆದುರು ಸಾಧಾರಣ ಮೊತ್ತ ಪೇರಿಸಿದರೂ, ಅದನ್ನು ರಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ರೋಹಿತ್ ಶರ್ಮ ಪಡೆ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಅರ್ಹವಾದ ಆಟವನ್ನೇ ಇದುವರೆಗೆ ಆಡುತ್ತ ಬಂದಿದೆ.
ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದು ಭಾರತ ತಂಡದ ಸಂಯೋಜನೆಗೆ ಹೊಡೆತ ನೀಡುವ ಭೀತಿ ಹುಟ್ಟಿಸಿದ್ದರೂ, ವೇಗಿ ಮೊಹಮದ್ ಶಮಿ ಮಾರಕ ದಾಳಿ ಸಂಟಿಸುವ ಮತ್ತು ಸೂರ್ಯಕುಮಾರ್ ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಆಟವನ್ನೇ ಆಡುವ ಮೂಲಕ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಆಡುವ ಹನ್ನೊಂದರ ಬಳಗದಲ್ಲಿನ ಸಮತೋಲನ ಕಾಪಾಡಿಕೊಂಡ ಶ್ರೇಯ ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ಗೆ ಸಲ್ಲಬೇಕಾಗುತ್ತದೆ.
ಗಿಲ್, ಶ್ರೇಯಸ್ ಮೇಲೆ ಹೆಚ್ಚಿನ ನಿರೀಕ್ಷೆ
ಭಾರತ ತಂಡ ಟೂರ್ನಿಯಲ್ಲಿ ಬಲಿಷ್ಠ ಬ್ಯಾಟಿಂಗ್ ನಿರ್ವಹಣೆ ತೋರುತ್ತಲೇ ಬಂದಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅಮೋಘ ಫಾರ್ಮ್ನಲ್ಲಿದ್ದಾರೆ. ಈ ನಡುವೆ ಯುವ ಆರಂಭಿಕ ಶುಭಮಾನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಆರಂಭ ಕಂಡರೂ, ಅದನ್ನು ದೊಡ್ಡ ಇನಿಂಗ್ಸ್ ಆಗಿ ಬದಲಾಯಿಸುವಲ್ಲಿ ಸಫಲರಾಗುತ್ತಿಲ್ಲ. ಟೂರ್ನಿಗೆ ಮುನ್ನ ಭರ್ಜರಿ ಫಾರ್ಮ್ನಲ್ಲಿದ್ದ ಗಿಲ್ ಡೆಂಘೆ ಜ್ವರದಿಂದ ಚೇತರಿಸಿಕೊಂಡ ಹಳೆಯ ಲಯಕ್ಕೆ ಮರಳಲು ಪರದಾಡುತ್ತಿರುವಂತಿದೆ. ಶ್ರೇಯಸ್ ಈ ಬಾರಿ ತವರು ಅಂಗಣದಲ್ಲಿ ಆಡುವ ಅನುಕೂಲ ಹೊಂದಿದ್ದಾರೆ. ಅದನ್ನು ಬಳಸಿಕೊಳ್ಳದಿದ್ದರೆ, ಪಾಂಡ್ಯ ಮರಳಿದಾಗ ಅವರೇ 11ರ ಬಳಗದಲ್ಲಿ ಸ್ಥಾನ ಬಿಟ್ಟುಕೊಡಬೇಕಾದೀತು.
ಪರದಾಡುತ್ತಿದೆ ಶ್ರೀಲಂಕಾ
ಗಾಯದಿಂದಾಗಿ ಕೆಲ ಪ್ರಮುಖ ಆಟಗಾರರ ಅಲಭ್ಯತೆ ಈಗಾಗಲೆ ಟೂರ್ನಿಯಲ್ಲಿ ಶ್ರೀಲಂಕಾಕ್ಕೆ ಭಾರಿ ಹೊಡೆತ ನೀಡಿದೆ. ಇದುವರೆಗೆ ಆಡಿದ 6 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 4ರಲ್ಲಿ ಸೋತಿರುವ ಲಂಕಾ, ಕಳೆದ ಪಂದ್ಯದಲ್ಲಿ ಅ್ಘಾನಿಸ್ತಾನ ವಿರುದ್ಧ ಸೋತಿರುವುದು ಇನ್ನಷ್ಟು ಹಿನ್ನಡೆ ತಂದಿದೆ. ಏಷ್ಯಾಕಪ್ ಫೈನಲ್ನಲ್ಲಿ ಭಾರತದ ದಾಳಿಗೆ ಅಲ್ಪಮೊತ್ತಕ್ಕೆ ಕುಸಿದು ಹೀನಾಯ ಸೋಲಿಗೆ ಶರಣಾಗಿದ್ದ ಲಂಕಾ, ಈ ಬಾರಿ ಚೇತೋಹಾರಿ ನಿರ್ವಹಣೆ ತೋರಿದರಷ್ಟೇ ಮಾನ ಉಳಿಸಿಕೊಳ್ಳಲಿದೆ. ಲಂಕಾ ಬ್ಯಾಟರ್ಗಳ ನಿರ್ವಹಣೆ ಅಸ್ಥಿರವಾಗಿದ್ದರೆ, ಬೌಲರ್ಗಳಿಗೆ ಅನನುಭವವೇ ದೊಡ್ಡ ಕೊರತೆಯಾಗಿದೆ.
ಟೀಮ್ ನ್ಯೂಸ್:
ಭಾರತ: ಹಾರ್ದಿಕ್ ಪಾಂಡ್ಯ ಈ ಪಂದ್ಯಕ್ಕೂ ಅಲಭ್ಯರಾಗಿರುವುದರಿಂದ ಭಾರತದ ಆಡುವ 11ರ ಬಳಗದಲ್ಲಿ ಈ ಬಾರಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಸಿರಾಜ್ ಲಯದಲ್ಲಿರದಿದ್ದರೂ, ಶಾರ್ದೂಲ್ ಠಾಕೂರ್ಗೆ ತವರಿನಲ್ಲಿ ಆಡುವ ಅವಕಾಶದ ಸಾಧ್ಯತೆ ಕಡಿಮೆ.
ಶ್ರೀಲಂಕಾ: ಸ್ಪಿನ್ ವಿಭಾಗವನ್ನು ಬಲಪಡಿಸಲು ಮತ್ತು ಭಾರತದ ಬ್ಯಾಟರ್ಗಳು ಎಡಗೈ ಸ್ಪಿನ್ನರ್ಗಳೆದುರು ಹೊಂದಿರುವ ದೌರ್ಬಲ್ಯದ ಲಾಭ ಪಡೆಯಲು ಲಂಕಾ ಈ ಬಾರಿ ಧನಂಜಯ ಡಿಸಿಲ್ವ ಬದಲಿಗೆ ದಿನುತ್ ವೆಲ್ಲಲಾಗೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಪಾಂಡ್ಯ ಇನ್ನೆರಡು ಪಂದ್ಯಕ್ಕಿಲ್ಲ?
ಎಡಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಏಕದಿನ ವಿಶ್ವಕಪ್ನಲ್ಲಿ ಶ್ರೀಲಂಕಾ ಮತ್ತು ದಣ ಆಫ್ರಿಕಾ (ನ.5) ವಿರುದ್ಧದ ಪಂದ್ಯದಲ್ಲೂ ಆಡುವುದು ಅನುಮಾನವೆನಿಸಿದೆ. ನವೆಂಬರ್ 12ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ತಂಡದ ಕೊನೇ ಲೀಗ್ ಪಂದ್ಯದಲ್ಲಿ ಅವರು ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಅಕ್ಟೋಬರ್ 19ರಂದು ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತನ್ನದೇ ಬೌಲಿಂಗ್ನಲ್ಲಿ ಚೆಂಡನ್ನು ಕಾಲಿನಿಂದ ತಡೆಯುವ ಯತ್ನದಲ್ಲಿ ಪಾಂಡ್ಯ ಎಡಪಾದಕ್ಕೆ ನೋವು ಮಾಡಿಕೊಂಡಿದ್ದರು. ಈ ಮುನ್ನ ಕಿವೀಸ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳನ್ನೂ ತಪ್ಪಿಸಿಕೊಂಡಿದ್ದರು. "ಪಾಂಡ್ಯ ಅಸ್ಥಿರಜ್ಜು ಸಣ್ಣ ಪ್ರಮಾಣದ ಅರಿದಿದೆ. ಬೆಂಗಳೂರಿನ ಎನ್ಸಿಎಯಲ್ಲಿ ಅವರು ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಸೆಮೀಸ್ಗೆ ಪೂರ್ವಭಾವಿಯಾಗಿ ಕೊನೇ ಲೀಗ್ ಪಂದ್ಯದಲ್ಲಿ ಮತ್ತೆ ಆಡಬಹುದು ಅಥವಾ ನೇರವಾಗಿ ಸೆಮೀಸ್ನಲ್ಲೇ ಮರಳಿ ಕಣಕ್ಕಿಳಿಯಬಹುದು' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಏಕದಿನ ಮುಖಾಮುಖಿ: 167
ಭಾರತ: 98, ಶ್ರೀಲಂಕಾ: 57, ಟೈ: 1, ರದ್ದು: 11
ವಿಶ್ವಕಪ್ ಮುಖಾಮುಖಿ: 9
ಭಾರತ: 4, ಶ್ರೀಲಂಕಾ: 4, ರದ್ದು: 1
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ.
*308: ಭಾರತ ಈ ಪಂದ್ಯದಲ್ಲಿ ಗೆದ್ದರೆ, ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ ಗರಿಷ್ಠ ಗೆಲುವು ಕಂಡ ಆಟಗಾರ ಎನಿಸಲಿದ್ದಾರೆ. ಸದ್ಯ ಸಚಿನ್ ತೆಂಡುಲ್ಕರ್ (307) ಜತೆ ಕೊಹ್ಲಿ ಸಮಬಲದಲ್ಲಿದ್ದಾರೆ.