ಕ್ರೀಡೆ

ಆರ್​ಸಿಬಿ ಇಲ್ಲದಿದ್ದರೆ ಏನಂತೆ, ನಾನು ಸಿಎಸ್​ಕೆ ಪರ ಆಡುತ್ತೇನೆ; ಬೆಂಗಳೂರು ತಂಡದ ಸ್ಟಾರ್​ ಆಟಗಾರನ ಹೇಳಿಕೆ ವೈರಲ್​

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್​ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ವರ್ಷಾಂತ್ಯದಲ್ಲಿ ನಡೆಯಲಿರುವ ಮೆಹಾ ಹರಾಜಿನ ಬಗ್ಗೆ ಈಗಾಗಲೇ ಮಾತುಕತೆಗಳು ಆರಂಭವಾಗಿದ್ದು, ಯಾವ ಆಟಗಾರ ಯಾವ ತಂಡಕ್ಕೆ ಸೇರಲಿದ್ದಾನೆ ಎಂಬ ಕುತೂಹಲ ಕ್ರೀಡಾಭಿಮಾನಿಗಳನ್ನು ಕೆರಳಿಸಿದೆ. ಆದರೆ, ಆರ್​ಸಿಬಿಯ ಆಟಗಾರನೋರ್ವ ಮುಂದಿನ ಆವೃತ್ತಿಯಲ್ಲಿ ತಾನು ಬದ್ಧ ಎದುರಾಳಿ ಸಿಎಸ್​ಕೆ ಪರ ಆಡಬೇಕೆಂಬ ಬಯಕೆಯನ್ನು ಹೊರಹಾಕಿದ್ದು, ಈ ಬಗ್ಗೆ ಕಾರಣವನ್ನು ಸಹ ನೀಡಿದ್ದಾರೆ.

ವಾಸ್ತವವಾಗಿ ಐಪಿಎಲ್​ನ ಸಾಂಪ್ರದಾಯಿಕ ಎದುರಾಳಿಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ತಪ್ಪಾಗಲಾರದು. ಏಕೆಂದರೆ ಪ್ರತಿಬಾರಿಯೂ ಉಭಯ ತಂಡಗಳು ಎದುರಾದಾಗಲೂ ಅಭಿಮಾನಿಗಳ ನಡುವಿನ ವಾರ್​ ಸೋಶಿಯಲ್​ ಮೀಡಿಯಾ ವಾರ್​ ಮುಗಿಲು ಮುಟ್ಟಿರುತ್ತದೆ. ಇದೀಗ ಆರ್​ಸಿಬಿ ತಂಡದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಅನುಜ್​ ರಾವತ್​ ಮಾತನಾಡಿದ್ದು, ಎಸ್​ಕೆ ಪರ ಕಣಕ್ಕಿಳಿಯಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಾವತ್​, ಆರ್​ಸಿಬಿ ಇಲ್ಲದಿದ್ದರೆ, ನಾನು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಬಯಸುತ್ತೇನೆ. ಏಕೆಂದರೆ ಸಿಎಸ್​ಕೆ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಅವರು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಲ್ಲದೆ ಎಲ್ಲಾ ಆಟಗಾರರು ಅವರ ಬಗ್ಗೆ ಮಾತನಾಡುತ್ತಿರುತ್ತಾರೆ. ಹೀಗಾಗಿ ನನಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಬೇಕೆಂಬ ಆಸೆಯಿದೆ ಎಂದು ಅನೂಜ್ ರಾವತ್ ಹೇಳಿದ್ದಾರೆ.

ತಂಡದಲ್ಲಿ ರಾವತ್​ ಉಳಿಯೋದು ಡೌಟ್​?

18ನೇ ಆವೃತ್ತಿಯ ಐಪಿಎಲ್​ಗೆ ಸಂಬಂಧಿಸಿದಂತೆ ಈಗಾಗಲೇ ಸಿದ್ಧತೆಗಳು ಆರಂಭಿಸಿದ್ದು, ಇದರ ಭಾಗವಾಗಿ ಮೆಗಾ ಹರಾಜಿಗಾಗಿ ರೂಪುರೇಷೆಗಳನ್ನು ಸಿದ್ದ ಮಾಡಲಾಗಿದೆ. ಅದರಂತೆ ಮುಂದಿನ ಸೀಸನ್​ಗೂ ಮುನ್ನ ಪ್ರತಿ ತಂಡಗಳಿಂದ ಬಹುತೇಕ ಆಟಗಾರರು ಹೊರಬೀಳಲಿದ್ದಾರೆ. ಅಂದರೆ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ 4 ರಿಂದ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಬಹುತೇಕ ಆಟಗಾರರು ರಿಲೀಸ್ ಆಗುವುದು ಖಚಿತ ಎಂದು ಹೇಳಲಾಗಿದ್ದು, ಅದರಲ್ಲೂ 2022 ರಿಂದ ಆರ್​ಸಿಬಿ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟರ್ ಅನುಜ್ ರಾವತ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. ಏಕೆಂದರೆ ಕಳೆದ ಮೂರು ಸೀಸನ್​ಗಳಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿರುವ ರಾವತ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಈ ಬಾರಿ ಅನೂಜ್ ರಾವತ್ ರಾಯಲ್ ಬಳಗದಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.