ದುಬೈ: ಎಬಿ ಡಿವಿಲಿಯರ್ಸ್ ಮೂಲತಃ ವಿಕೆಟ್ ಕೀಪರ್ ಆಗಿದ್ದರೂ, ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಕೀಪಿಂಗ್ನಿಂದ ದೂರ ಉಳಿದಿದ್ದರು. ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸುವಾಗಲೂ ಅವರು ವಿಕೆಟ್ ಕೀಪಿಂಗ್ನಿಂದ ದೂರ ಉಳಿದು ಬ್ಯಾಟ್ಸ್ಮನ್ ಆಗಿ ಆಡುತ್ತಿದ್ದರು. ಐಪಿಎಲ್ನಲ್ಲಿ ಆರ್ಸಿಬಿ ತಂಡದಲ್ಲೂ ಅವರು ಕಳೆದ ಕೆಲ ಆವೃತ್ತಿಗಳಿಂದ ಅವರು ಕೇವಲ ಬ್ಯಾಟ್ಸ್ಮನ್ ಆಗಿದ್ದರು. ಆದರೆ ಮುಂಬರುವ ಐಪಿಎಲ್ನಲ್ಲಿ ಅವರು ಆರ್ಸಿಬಿ ತಂಡದ ಸಮತೋಲನ ಮತ್ತು ಯಶಸ್ಸಿಗಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊರಲು ಸಿದ್ಧರಾಗಿದ್ದಾರೆ.
ಆರ್ಸಿಬಿ ತಂಡ ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿರುವ ವೇಳೆ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಗ್ಲೌಸ್ ತೊಟ್ಟು ಅಭ್ಯಾಸ ನಡೆಸಿರುವುದು ಕಂಡು ಬಂದಿದೆ. ತಂಡದ ಮುಖ್ಯ ಕೋಚ್ ಸೈಮನ್ ಕಾಟಿಚ್ ಅವರು ಈಗಾಗಲೆ ತಂಡದ ವಿಕೆಟ್ ಕೀಪರ್ ಆಗಿ ಎಬಿ ಡಿವಿಲಿಯರ್ಸ್ ಆಡುವ ಬಗ್ಗೆ ಸ್ಪಷ್ಟ ಸುಳಿವು ನೀಡಿದ್ದಾರೆ.
'ತಂಡ ಸಮತೋಲನದ ಬಗ್ಗೆ ನಾವು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಈ ಹಿಂದೆ ದಕ್ಷಿಣ ಆಫ್ರಿಕಾ ಪರ ವಿಕೆಟ್ ಕೀಪರ್ ಆಗಿ ಆಡಿರುವ ಎಬಿ ಡಿವಿಲಿಯರ್ಸ್ ಅವರನ್ನು ಆರ್ಸಿಬಿ ತಂಡದಲ್ಲೂ ಇದೇ ಜವಾಬ್ದಾರಿ ನಿಭಾಯಿಸಲು ಕೇಳಿಕೊಳ್ಳಬಹುದು. ಅವರು ನಮ್ಮ ತಂಡದಲ್ಲಿ ದೊಡ್ಡ ಪಾತ್ರವನ್ನು ನಿಭಾಯಿಸಲಿದ್ದಾರೆ' ಎಂದು ಸೈಮನ್ ಕಾಟಿಚ್ ಹೇಳಿದ್ದಾರೆ.
ಆರ್ಸಿಬಿ ತಂಡದಲ್ಲಿ ಕಳೆದ ವರ್ಷ ಪಾರ್ಥಿವ್ ಪಟೇಲ್ ಪರಿಣತ ವಿಕೆಟ್ ಕೀಪರ್ ಆಗಿ ಆಡಿದ್ದರು. ಅವರನ್ನು ಬಿಟ್ಟರೆ ಎಬಿಡಿ ಮಾತ್ರ ತಂಡದಲ್ಲಿ ವಿಕೆಟ್ ಕೀಪಿಂಗ್ ನಿಭಾಯಿಸಬಲ್ಲ ಆಟಗಾರರಾಗಿದ್ದಾರೆ. ಇದೀಗ ಅವರು ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸಿರುವುದು ಮುಂಬರುವ ಐಪಿಎಲ್ನಲ್ಲಿ ಇದೇ ಪಾತ್ರವನ್ನು ನಿಭಾಯಿಸುವ ನಿರೀಕ್ಷೆಯನ್ನು ಹೆಚ್ಚಿಸಿದೆ.
ಎಬಿಡಿ ವಿಕೆಟ್ ಕೀಪಿಂಗ್ ನಿರ್ವಹಿಸಿದರೆ ಆಗ ತಂಡದ ಸಮತೋಲನವೂ ಹೆಚ್ಚಲಿದೆ. ಪಾರ್ಥಿವ್ ಪಟೇಲ್ರನ್ನು ಆಡಿರುವ ಪ್ರಸಂಗ ಬಂದರೆ ಆಗ ಅವರು ಆರಂಭಿಕರಾಗಿಯೂ ಕಣಕ್ಕಿಳಿಯಬೇಕಾಗುತ್ತದೆ. ಈ ಬಾರಿ ತಂಡಕ್ಕೆ ಸೇರ್ಪಡೆಗೊಂಡಿರುವ ಆಸೀಸ್ ನಾಯಕ ಆರನ್ ಫಿಂಚ್ ಜತೆಗೆ ಉತ್ತಮ ಫಾರ್ಮ್ನಲ್ಲಿರುವ ಕರ್ನಾಟಕದ ಬ್ಯಾಟ್ಸ್ಮನ್ ದೇವದತ್ ಪಡಿಕಲ್ ಅವರನ್ನು ಕಣಕ್ಕಿಳಿಸುವ ಆರ್ಸಿಬಿ ಯೋಜನೆ ಕೈಗೂಡಲು ಇದು ಅಡ್ಡಿಯಾಗುತ್ತದೆ. ಹೀಗಾಗಿ ಫಿಂಚ್-ಪಡಿಕಲ್ ಜೋಡಿ ಜತೆಯಾಗಲು ಎಬಿಡಿ ಕೀಪಿಂಗ್ ನೆರವಾಗುತ್ತದೆ.