RCB vs PBKS: ಐಪಿಎಲ್ 18ನೇ ಆವೃತ್ತಿಯಲ್ಲಿ ಸತತ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಇಂದು (ಮೇ.29) ಕ್ವಾಲಿಫೈರ್-1 ಕದನ ಸಂಭವಿಸಲಿದೆ. ಅಗ್ರಸ್ಥಾನದಲ್ಲಿ ಪಂಜಾಬ್ ಇದ್ದರೆ, ಎರಡನೇ ಸ್ಥಾನದಲ್ಲಿ ಆರ್ಸಿಬಿ ತಂಡವಿದೆ. ಎರಡೂ ತಂಡಗಳು ಭಾರೀ ಬಲಿಷ್ಠವಾಗಿ ಕಂಡುಬಂದಿದ್ದು, ಯಾರು ಫೈನಲ್ಗೆ ನೇರ ಲಗ್ಗೆಯಿಡಲಿದ್ದಾರೆ ಎಂಬುದೇ ರೋಚಕ, ಕೌತುಕ.
ಇದನ್ನೂ ಓದಿ: ಸರ್ಕಾರ, ಪೊಲೀಸ್ ಇಲಾಖೆ ವೈಫಲ್ಯ – ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಆರೋಪ
ಚಂಡಿಗಢದ ಮುಲ್ಲಾನ್ಪುರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂದಿನ ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಲಿವೆ. ಕಳೆದ ಒಂದು ವಾರದಿಂದ ದೇಶಾದ್ಯಂತ ಭಾರೀ ಮಳೆಯಾಗುತ್ತಿದ್ದು, ದೆಹಲಿ, ಮುಂಬೈ ನಗರಗಳು ವರುಣಾರ್ಭಟಕ್ಕೆ ತತ್ತರಿಸಿವೆ. ಹೀಗಿರುವಾಗ ಬಹುನಿರೀಕ್ಷಿತ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಹೇಗೆ? ಎಂಬ ಗೊಂದಲ ಸದ್ಯ ಕ್ರಿಕೆಟ್ ಅಭಿಮಾನಿಗಳನ್ನು ಬೆಂಬಿಡದೆ ಕಾಡುತ್ತಿದೆ. ಅಕಸ್ಮಾತ್ ಬಿರುಸಿನ ಮಳೆ ಪಂದ್ಯಕ್ಕೆ ಅಡಚಣೆ ಉಂಟು ಮಾಡಿದ್ದೇ ಆದರೆ, ಪಂದ್ಯ ಒಂದು ದಿನ ಮುಂದೂಡಿಕೆ ಆಗಲಿದೆಯಾ ಅಥವಾ ಒಂದು ತಂಡಕ್ಕೆ ನೇರ ಫೈನಲ್ ಪ್ರವೇಶ ಸಿಗಲಿದೆಯಾ? ಎಂಬ ಪ್ರಶ್ನೆಗಳಿಗೆ ಹೀಗಿದೆ ಉತ್ತರ.
ಕ್ವಾಲಿಫೈರ್-1 ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಪಂದ್ಯವನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಇದಕ್ಕೆ ಅವಕಾಶವಿಲ್ಲ. ಹೀಗಿರುವಾಗ ಅಂಕಪಟ್ಟಿಯಲ್ಲಿ ಹೆಚ್ಚುವರಿ ಪಾಯಿಂಟ್ಗಳಿಂದ ಮೊದಲ ಸ್ಥಾನದಲ್ಲಿರುವ ಪಂಜಾಬ್ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇನ್ನು ಆರ್ಸಿಬಿ ಎರಡನೇ ಸ್ಥಾನದಲ್ಲಿರುವ ಕಾರಣ, ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಯಾವ ತಂಡ ಗೆಲ್ಲಲಿದೆಯೋ ಆ ತಂಡದೊಂದಿಗೆ ಫೈನಲ್ ಪ್ರವೇಶಕ್ಕಾಗಿ ಕಾದಾಟ ನಡೆಸಲಿದೆ. ಇದು ಐಪಿಎಲ್ ಲೆಕ್ಕಾಚಾರ.,(ಏಜೆನ್ಸೀಸ್).