ಬೆಂಗಳೂರು: 18ನೇ ಆವೃತ್ತಿತಯ ಐಪಿಎಲ್ (IPL) ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ರಿಟೇನ್ (Retain) ವಿಚಾರಕ್ಕೆ ಸಂಬಂಧಿಸಿದಂತೆ ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಕ್ಟೋಬರ್ 31ರಂದು ತಂಡಗಳು ರಿಟೇನ್ ಪಟ್ಟಿಯನ್ನು (Retain List) ಬಿಡುಗಡೆ ಮಾಡಲಿದ್ದು, ಎಲ್ಲರ ಚಿತ್ತ ಅದರತ್ತ ಬಿದ್ದಿದೆ. ರಿಟೇನ್ (Retain) ಸುದ್ದಿ ಹೊರಬೀಳುತ್ತಿದ್ದಂತೆ ಆಟಗಾರರು ತಾವು ಪ್ರತಿನಿಧಿಸುವ ತಂಡಗಳ ಪರ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಐಪಿಎಲ್ನಲ್ಲಿ ತಾವು ಪ್ರತಿನಿಧಿಸುವ ತಂಡಗಳಿಗೆ ಸಂದೇಶವನ್ನು ರವಾನಿಸುತ್ತಿದ್ದಾರೆ. ಇದೀಗ ಆರ್ಸಿಬಿ (RCB) ತಂಡದ ಆಟಗಾರ ಕೂಡ ಇದೇ ಕೆಲಸ ಮಾಡಿದ್ದು, ದೇಶೀಯ ಕ್ರಿಕೆಟ್ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.
ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಧ್ಯಪ್ರದೇಶ ಹಾಗೂ ಹರಿಯಾಣ ನಡುವಿನ ರಣಜಿ ಪಂದ್ಯದಲ್ಲಿ ರಜತ್ ಪಾಟಿದಾರ್ 68 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ್ದು, ದೇಶೀಯ ಕ್ರಿಕೆಟ್ನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದಾರೆ. ಈ ಮೂಲಕ ರಣಜಿ ಟೂರ್ನಿಯಲ್ಲಿ (Rajat Patidar) ಅತೀ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ (Rajat Patidar) ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಹೆಚ್ಚಿನ ಒತ್ತು ನೀಡಿದರು. 6 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ಗಳೊಂದಿಗೆ ವೇಗದ ಶತಕ ಸಿಡಿಸಿದರು. ಇದಕ್ಕೂ ಮೊದಲು 2016 ರಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಪಂತ್ (Rishabh Pant) ಜಾರ್ಖಂಡ್ ವಿರುದ್ಧ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 2023 ರಲ್ಲಿ ಛತ್ತೀಸ್ಗಢದ ವಿರುದ್ಧ ರಿಯಾನ್ ಪರಾಗ್ (Riyan Parag) 56 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಮೊದಲೆರಡು ವೇಗದ ಶತಕಗಳಾಗಿವೆ.
15, 16, 17ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ (RCB) ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರಜತ್ ಪಾಟೀದಾರ್ ತಂಡದ ಪಾಲಿನ ಆಪತ್ಭಾಂದವ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುತ್ತಿದ್ದರು. 18ನೇ ಆವೃತ್ತಿಗೆ ಸಂಬಂಧಿಸಿದಂತೆ ಒಂದು ತಂಡಕ್ಕೆ ಆರು ಆಟಗಾರರನ್ನು ರಿಟೇನ್ ಮಾಡಲು ಐಪಿಎಲ್ ಫ್ರಾಂಚೈಸಿ ಅವಕಾಶ ನೀಡಿದ್ದು, ಶತಕ ಸಿಡಿಸುವ ಮೂಲಕ ರಜತ್ ಪಾಟೀದಾರ್ ಆರ್ಸಿಬಿ (RCB) ರಿಟೇನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಇಲ್ಲವಾ ಎಂದು ಕಾದು ನೋಡಬೇಕಿದೆ.