RCB On Sale: ಐಪಿಎಲ್ ಇತಿಹಾಸದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಏಕೈಕ ಫ್ರಾಂಚೈಸಿ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಕಳೆದ 18 ವರ್ಷಗಳಲ್ಲಿ ಒಂದು ಬಾರಿಯೂ ಕಪ್ ಗೆಲ್ಲದ ತಂಡ 18ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿಯಿತು. ಇದು ಆರ್‌ಸಿಬಿ ಲಾಯಲ್ ಫ್ಯಾನ್ಸ್ಗಳ ಭರ್ಜರಿ ಸಂಭ್ರಮಕ್ಕೆ ಕಾರಣವಾಯಿತು. ಆದರೆ, ಅದೇ ಸಂತೋಷ, ದುಃಖಕ್ಕೆ ತಿರುಗಿದ್ದು ನಿಜಕ್ಕೂ ಬೇಸರದ ಸಂಗತಿ.
ಇದನ್ನೂ ಓದಿ: Rajnath Singh | ಮೂರು ಸೇನೆಗಳ ಒಗ್ಗಟ್ಟಿನಿಂದ ಆಪರೇಷನ್ ಸಿಂಧೂರ ಸಕ್ಸಸ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್
ಆರ್‌ಸಿಬಿ 18 ವರ್ಷಗಳ ಬಳಿಕ ತಮ್ಮ ಚೊಚ್ಚಲ ಐಪಿಎಲ್ ಕಪ್ ಗೆದ್ದ ಬೆನ್ನಲ್ಲೇ ಬೆಂಗಳೂರಿಗೆ ಆಗಮಿಸಿತು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಯುವ ಅಭಿಮಾನಿಗಳು ದುರಂತ ಅಂತ್ಯ ಕಂಡರು. ಇನ್ನೂ ಅನೇಕರು ಗಂಭೀರವಾಗಿ ಗಾಯಗೊಂಡರು. ಈ ಘಟನೆ ಬಳಿಕ ಫ್ರಾಂಚೈಸಿಗೆ ಹಲವಾರು ಸಮಸ್ಯೆಗಳು ಎದುರಾಯಿತು. ಸಾಲು ಸಾಲು ಆರೋಪಗಳ ಜತೆಗೆ ಕೇಸ್ ಕೂಡ ದಾಖಲಾಯ್ತು. ಸಂಭ್ರಮದ ಹಾದಿಯಿಂದ ಸೂತಕದ ಛಾಯೆ ಮೂಡಿದ್ದು, ಫ್ರಾಂಚೈಸಿಯ ಕಳೆಯನ್ನೇ ಕಸಿದಂತಾಗಿದೆ. ಈ ಮಧ್ಯೆ, ಹೊಸ ವರದಿಯೊಂದು, ಆರ್‌ಸಿಬಿ ಅನ್ನು ಮಾರಾಟ ಮಾಡಲು ಆಡಳಿತ ಮಂಡಳಿಯು ನಿರ್ಧರಿಸಿರುವುದಾಗಿ ತಿಳಿಸಿದೆ.
'ಟೈಮ್ಸ್ ಆಫ್ ಇಂಡಿಯಾ' ವರದಿ ಪ್ರಕಾರ, ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. "ಆರ್‌ಸಿಬಿ ಫ್ರಾಂಚೈಸಿಯು ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ತೆಗೆದುಹಾಕಲು ಅಂತಿಮ ನಿರ್ಧಾರವನ್ನು ಈಗಾಗಲೇ ಕೈಗೊಂಡಿದೆ. ಈ ಸಂಬಂಧ ದಾಖಲೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಖರೀದಿದಾರರು ಮುಂದೆ ಬಂದರೆ ಶೀಘ್ರವೇ ಫ್ರಾಂಚೈಸಿಯನ್ನು ಮಾಲೀಕರು ಮಾರಾಟ ಮಾಡಲು ಸಿದ್ಧರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಲಲಿತ್ ಮೋದಿ ಉಲ್ಲೇಖಿಸಿರುವ ವಿವರಗಳ ಪ್ರಕಾರ, ಆರ್‌ಸಿಬಿ ಫ್ರಾಂಚೈಸಿ ಮಾರಾಟದ ಬಗ್ಗೆ ಈ ಹಿಂದೆ ಹಲವು ವದಂತಿಗಳು ಹಬ್ಬಿದ್ದವು. ಆದರೆ, ಸ್ವತಃ ಮ್ಯಾನೇಜ್‌ಮೆಂಟ್ ಇಂತಹ ವರದಿಗಳನ್ನು ನಿರಾಕರಿಸಿತು. ಆದರೀಗ, ಮಾಲೀಕರು ಆರ್‌ಸಿಬಿ ತಂಡವನ್ನು ಮಾರಾಟ ಮಾಡಲು ಕ್ರಮ ಕೈಗೊಂಡಿದ್ದಾರೆ. ದಾಖಲೆಗಳು ಈಗಾಗಲೇ ಪೂರ್ಣಗೊಂಡಿವೆ. ಕಳೆದ ಆವೃತ್ತಿಯಲ್ಲಿ ಗೆದ್ದ ನಂತರ, ಆರ್‌ಸಿಬಿ ತಂಡವು ಎಲ್ಲಾ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಇದಕ್ಕಿಂತ ಉತ್ತಮ ಹೂಡಿಕೆ ಅವಕಾಶ ಇನ್ನೊಂದಿಲ್ಲ. ಮುಂದಿನ ದಿನಗಳಲ್ಲಿ ಇದು ಖಂಡಿತವಾಗಿಯೂ ಹೊಸ ದಾಖಲೆ ಮೌಲ್ಯವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
ಇನ್ನು ಕಳೆದ ತಿಂಗಳು ನಡೆದ ಪಾಡ್‌ಕ್ಯಾಸ್ಟ್‌ನಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಮೈಕೆಲ್ ಕ್ಲಾರ್ಕ್ ಜತೆ ಮಾತನಾಡಿದ ಲಲಿತ್ ಮೋದಿ, "ಆರ್‌ಸಿಬಿ 2 ಬಿಲಿಯನ್ ಯುಎಸ್ ಡಾಲರ್‌ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದರೆ, ಅದು ತಪ್ಪು ನಿರ್ಧಾರವಾಗಲಿದೆ. ಅದೇ ಮುಂದಿನ ವರ್ಷ ಮಾರಾಟ ಮಾಡಿದರೆ, ಮೌಲ್ಯಮಾಪನವು 2.5 ಬಿಲಿಯನ್ ಯುಎಸ್ ಡಾಲರ್‌ಗಳನ್ನು ಮೀರಬಹುದು" ಎಂದು ಸಲಹೆ ನೀಡಿದ್ದಾರೆ,(ಏಜೆನ್ಸೀಸ್).