ಕ್ರೀಡೆ

ತವರಿನಲ್ಲೂ ಗೆಲುವಿನ ಓಟಕ್ಕೆ ಆರ್​ಸಿಬಿ ಸಜ್ಜು; ಇಂದು ಚಿನ್ನಸ್ವಾಮಿಯಲ್ಲಿ ಗುಜರಾತ್​ ಟೈಟಾನ್ಸ್​​ ಸವಾಲು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಈಡನ್​ ಗಾರ್ಡನ್ಸ್​ ಮತ್ತು ಚೆಪಾಕ್​ನಲ್ಲಿ ಆಡಿದ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್​ ಕೆಕೆಆರ್​ ಮತ್ತು 5 ಬಾರಿಯ ಚಾಂಪಿಯನ್​ ಸಿಎಸ್​ಕೆ ತಂಡಗಳಿಗೆ ಸೋಲುಣಿಸಿ ಐಪಿಎಲ್​ 18ನೇ ಆವೃತ್ತಿಯಲ್ಲಿ ಭರ್ಜರಿ ಆರಂಭ ಕಂಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತವರಿನ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಹಾಲಿ ಆವೃತ್ತಿಯ ಮೊದಲ ಕಾದಾಟದಲ್ಲಿ ಗುಜರಾತ್​ ಟೈಟಾನ್ಸ್​ ಸವಾಲು ಎದುರಿಸಲಿರುವ ರಜತ್​ ಪಾಟೀದಾರ್​ ಪಡೆ, ಹ್ಯಾಟ್ರಿಕ್​ ಗೆಲುವಿನೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುವ ಹಂಬಲದಲ್ಲಿದೆ.

17 ವರ್ಷಗಳ ಪ್ರಶಸ್ತಿ ಬರ ನೀಗಿಸುವ ನಿಟ್ಟಿನಲ್ಲಿ ಆರ್​ಸಿಬಿ ಈ ಬಾರಿ ಚೇತೋಹಾರಿ ಆರಂಭವನ್ನೇ ಕಂಡಿದ್ದು, ಇದೇ ಲಯದಲ್ಲಿ ಮುಂದುವರಿದರೆ ಅಭಿಮಾನಿಗಳ ಕಪ್​ ಗೆಲುವಿನ ಕನಸು ನನಸಾಗಿಸುವುದು ಕಷ್ಟವಲ್ಲ. ತವರು ಅಭಿಮಾನಿಗಳ ಎದುರು ಆರ್​ಸಿಬಿ ತಂಡದಿಂದ ಇನ್ನಷ್ಟು ಬಲಿಷ್ಠ ನಿರ್ವಹಣೆಯ ನಿರೀಕ್ಷೆ ಇಡಲಾಗಿದೆ.

ಮತ್ತೊಂದೆಡೆ ಗುಜರಾತ್​ ತಂಡ ರನ್​ಪ್ರವಾಹ ಹರಿದ ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಎದುರು 11 ರನ್​ಗಳಿಂದ ಸೋಲು ಕಂಡಿದ್ದರೆ, 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಎದುರು 36 ರನ್​ಗಳಿಂದ ಗೆದ್ದು ಖಾತೆ ತೆರದಿದೆ. ಆರಂಭಿಕ 2 ಪಂದ್ಯಗಳನ್ನು ತವರಿನಲ್ಲೇ ಆಡಿದ್ದ ಗುಜರಾತ್​, ಇದೀಗ ಎದುರಾಳಿಯ ನೆಲದಲ್ಲಿ ಮೊದಲ ಸವಾಲು ಎದುರಿಸಲಿದೆ.

ಬಲಿಷ್ಠ ಬ್ಯಾಟಿಂಗ್​ ಕ್ರಮಾಂಕ

ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ನಾಯಕ ರಜತ್​ ಪಾಟೀದಾರ್​ ಮತ್ತು ದೇವದತ್​ ಪಡಿಕ್ಕಲ್​ ಒಳಗೊಂಡ ಆರ್​ಸಿಬಿ ಅಗ್ರ ಕ್ರಮಾಂಕ ಈಗಾಗಲೆ ಆರಂಭಿಕ 2 ಪಂದ್ಯಗಳಲ್ಲಿ ಬಲಿಷ್ಠ ನಿರ್ವಹಣೆ ತೋರಿದೆ. ಅತ್ತ ಗುಜರಾತ್​ ಕೂಡ ಜೋಸ್​ ಬಟ್ಲರ್​, ನಾಯಕ ಶುಭಮಾನ್​ ಗಿಲ್​, ಸಾಯಿ ಸುದರ್ಶನ್​ ಅವರಿಂದ ಉತ್ತಮ ನಿರ್ವಹಣೆ ಕಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಪವರ್​ಪ್ಲೇನಲ್ಲಿ ಸ್ಫೋಟಕ ಆಟವಾಡಿರುವ ಫಿಲ್​ ಸಾಲ್ಟ್​, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೊಡ್ಡ ಇನಿಂಗ್ಸ್​ ಆಡುವ ನಿರೀಕ್ಷೆ ಇದೆ. ದ. ಆಫ್ರಿಕಾದ ವೇಗಿ ಕಗಿಸೊ ರಬಾಡ, ಸ್ಪಿನ್ನರ್​ಗಳಾದ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಆರ್​ಸಿಬಿ ಬ್ಯಾಟರ್​ಗಳಿಗೆ ಸವಾಲೊಡ್ಡಲಿದ್ದಾರೆ.

ಬೌಲರ್​ಗಳಿಗೆ ಸವಾಲು

ಕೋಲ್ಕತ ಮತ್ತು ಚೆನ್ನೈನಲ್ಲಿ ಸರ್ವಾಂಗೀಣ ನಿರ್ವಹಣೆ ತೋರಿರುವ ಆರ್​ಸಿಬಿ ತಂಡ ಅತ್ಯಂತ ಸಮತೋಲನದಲ್ಲಿ ಕಾಣಿಸಿದೆ. ಆದರೆ ತವರಿನ ಮೈದಾನದಲ್ಲಿ ಭಿನ್ನವಾದ ಸವಾಲು ಎದುರಾಗಲಿದೆ. ಐಪಿಎಲ್​ನಲ್ಲಿ ದೊಡ್ಡ ಪ್ರಮಾಣದ ರನ್​ಮಳೆಯನ್ನೇ ಕಂಡಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಬೌಲರ್​ಗಳಿಗೆ ನಿಜವಾದ ಸತ್ವಪರೀಕ್ಷೆ ಎದುರಾಗಲಿದೆ. ಕಿರು ಬೌಂಡರಿ ಮತ್ತು ವೇಗವಾದ ಔಟ್​ಫೀಲ್ಡ್​ ಹೊಂದಿರುವ ಸ್ಟೇಡಿಯಂನಲ್ಲಿ ಅನುಭವಿ ವೇಗಿಗಳಾದ ಜೋಶ್​ ಹ್ಯಾಸಲ್​ವುಡ್​ ಮತ್ತು ಭುವನೇಶ್ವರ್​ ಕುಮಾರ್​ ನಿರ್ವಹಣೆ ನಿರ್ಣಾಯಕ ಪಾತ್ರ ವಹಿಸಲಿದೆ. ಎಡಗೈ ವೇಗಿ ಯಶ್​ ದಯಾಳ್​ ಕಳೆದ ವರ್ಷದ ಅದ್ಭುತ ನಿರ್ವಹಣೆ ಮುಂದುವರಿಸಿದ್ದರೆ, ಸ್ಪಿನ್ನರ್​ಗಳಾದ ಕೃನಾಲ್​ ಪಾಂಡ್ಯ, ಸುಯಶ್​ ಶರ್ಮ ಆರ್​ಸಿಬಿ ಪರ ಚಿನ್ನಸ್ವಾಮಿಯಲ್ಲಿ ಮೊದಲ ಸವಾಲು ಎದುರಿಸಲಿದ್ದಾರೆ.

ಕೊಹ್ಲಿ-ಸಿರಾಜ್​ ಮುಖಾಮುಖಿ ಕುತೂಹಲ

ಕಳೆದ 7 ವರ್ಷಗಳಿಂದ ಆರ್​ಸಿಬಿ ತಂಡದಲ್ಲಿ ಜತೆಯಾಗಿ ಆಡುತ್ತ "ಭಾಯ್​'ಗಳಾಗಿದ್ದ ವಿರಾಟ್​ ಕೊಹ್ಲಿ-ಮೊಹಮದ್​ ಸಿರಾಜ್​ ಈ ಬಾರಿ ದುಶ್ಮನ್​ಗಳಾಗಿದ್ದಾರೆ! ಕಳೆದ ಮೆಗಾ ಹರಾಜಿನಲ್ಲಿ ಗುಜರಾತ್​ ಪಾಲಾಗಿರುವ ಸಿರಾಜ್​ ತನ್ನ ವೃತ್ತೀಜಿವನಕ್ಕೆ ಹೊಸ ತಿರುವು ಕೊಟ್ಟಿದ್ದ ಆರ್​ಸಿಬಿ ಮತ್ತು ವಿರಾಟ್​ ಕೊಹ್ಲಿ ಎದುರು ಈಗ ಕಣಕ್ಕಿಳಿಯಬೇಕಾಗಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ ಕೊಹ್ಲಿ&ಸಿರಾಜ್​ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ. ಇಷ್ಟು ವರ್ಷ ಸಿರಾಜ್​ ಎಸೆತದಲ್ಲಿ ವಿಕೆಟ್​ ಬಿದ್ದಾಗ ಸಂಭ್ರಮಿಸುತ್ತಿದ್ದ ಪ್ರೇಕ್ಷಕರು ಈ ಬಾರಿ ಬೌಂಡರಿ&ಸಿಕ್ಸರ್​ ಸಿಡಿದರೆ ಖುಷಿಪಡಬೇಕಿದೆ.

ಮುಖಾಮುಖಿ: 5

ಆರ್​ಸಿಬಿ: 3

ಗುಜರಾತ್​: 2

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಪಿಚ್​ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂ ಎಂದಿನಂತೆ ಈ ಸಲವೂ ಬ್ಯಾಟಿಂಗ್​ ಸ್ನೇಹಿ ಆಗಿರಲಿದೆ. ಜತೆಗೆ ಈ ಬಾರಿ ವೇಗದ ಬೌಲರ್​ಗಳಿಗೆ ಹೆಚ್ಚಿನ ನೆರವು ನೀಡುವ ನಿರೀೆ ಇದೆ. ಬೌನ್ಸ್​ನಿಂದ ಕೂಡಿರುವ ಪಿಚ್​ನಲ್ಲಿ ಪವರ್​ಪ್ಲೇನಲ್ಲಿ ವೇಗಿಗಳನ್ನು ಎಚ್ಚರಿಕೆಯಿಂದ ಎದುರಿಸಬೇಕಾಗುತ್ತದೆ.

ಕನ್ನಡಿಗರ ಹಣಾಹಣಿ

ಆರ್​ಸಿಬಿ ಆಡುವ 11ರ ಬಳಗದಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬ್ಯಾಟರ್​ ದೇವದತ್​ ಪಡಿಕ್ಕಲ್​ ಸ್ಥಾನ ಸಂಪಾದಿಸಿರುವ ಏಕೈಕ ಕನ್ನಡಿಗರಾಗಿದ್ದರೆ, ಅತ್ತ ಗುಜರಾತ್​ ಟೈಟಾನ್ಸ್​ ತಂಡದಲ್ಲಿ ರಾಜ್ಯದ ವೇಗಿ ಪ್ರಸಿದ್ಧ ಕೃಷ್ಣ ಇದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಎದುರು 4 ಓವರ್​ಗಳಲ್ಲಿ 18 ರನ್​ ನೀಡಿ 2 ವಿಕೆಟ್​ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದ ಪ್ರಸಿದ್ಧಕೃಷ್ಣ, ಈ ಬಾರಿ ತವರು ಅಂಗಣದಲ್ಲಿ ಇನ್ನಷ್ಟು ಉತ್ಸಾಹದಿಂದ ಕಣಕ್ಕಿಳಿಯಲಿದ್ದಾರೆ.

ವಿಜಯ್​ ಪ್ರಕಾಶ್​ ಗಾಯನ

ಬೆಂಗಳೂರಿನಲ್ಲಿ ಹಾಲಿ ಆವೃತ್ತಿಯ ಮೊದಲ ಪಂದ್ಯಕ್ಕೆ ಮುನ್ನ ಕಿರು ಆರಂಭೋತ್ಸವ ನಡೆಯಲಿದ್ದು, ಕರ್ನಾಟಕದ ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 6.30ರಿಂದ ಈ ಕಾರ್ಯಕ್ರಮ ನಡೆಯಲಿದೆ.

ತವರಿನಲ್ಲಿ ಶುಭಾರಂಭದ ತವಕ

ಆರ್​ಸಿಬಿ ತಂಡ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಹೆಚ್ಚಿನ ಬಾರಿ ಗೆದ್ದು ಶುಭಾರಂಭ ಕಂಡ ದಾಖಲೆ ಹೊಂದಿದೆ. 2020&22ರವರೆಗೆ ಕರೊನಾ ಕಾರಣದಿಂದಾಗಿ ತವರಿನ ಪಂದ್ಯಗಳು ಮಿಸ್​ ಆಗಿದ್ದರೆ, 2023, 2024ರಲ್ಲಿ ತವರಿನ ಮೊದಲ ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇದಕ್ಕೆ ಮುನ್ನ 2008, 2011, 2015, 2019ರಲ್ಲಷ್ಟೇ ಆರ್​ಸಿಬಿ ತವರಿನ ಮೊದಲ ಪಂದ್ಯದಲ್ಲಿ ಸೋತಿದೆ. ಒಟ್ಟಾರೆ 9 ಆವೃತ್ತಿಗಳಲ್ಲಿ ತವರಿನ ಮೊದಲ ಪಂದ್ಯದಲ್ಲಿ ಗೆದ್ದ ದಾಖಲೆ ಹೊಂದಿದೆ.