ಕ್ರೀಡೆ

ರಿಟೇನ್​-ರಿಲೀಸ್​ ಪಟ್ಟಿ ಅಂತಿಮಗೊಂಡ ಬಳಿಕ ಹೇಗಿದೆ ಆರ್​ಸಿಬಿ ತಂಡ? ಯಾರು ಔಟ್​? ಯಾರು ಸೇಫ್​?

ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಆರ್​ಸಿಬಿ ತಂಡ ತನ್ನ ಆಟಗಾರರ ರಿಟೇನ್​ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಕೆಲ ಪ್ರಮುಖ ಆಟಗಾರರನ್ನು ರಿಲೀಸ್​ ಮಾಡಿದೆ. ಆರ್​ಸಿಬಿ ತಂಡ ಪ್ರಮುಖರಾದ ವೇಗಿ ಹರ್ಷಲ್​ ಪಟೇಲ್​, ಲಂಕಾ ಸ್ಪಿನ್ನರ್​ ವಾನಿಂದು ಹಸರಂಗ ಮತ್ತು ಆಸೀಸ್​ ವೇಗಿ ಜೋಶ್​ ಹ್ಯಾಸಲ್​ವುಡ್​ರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ.

ಅನುಭವಿ ವಿಕೆಟ್​ ಕೀಪರ್​-ಬ್ಯಾಟರ್​ ದಿನೇಶ್​ ಕಾರ್ತಿಕ್​ರನ್ನೂ ಆರ್​ಸಿಬಿ ಕೈಬಿಡುವ ಸಾಧ್ಯತೆ ಇದ್ದರೂ, ಅವರನ್ನು ತಂಡದಲ್ಲಿ ರಿಟೇನ್​ ಮಾಡಿಕೊಂಡಿದೆ. ಇದೇ ರೀತಿ ಅನುಜ್ ರಾವತ್​ ಕೂಡ ಸೇಫ್​ ಆಗಿದ್ದಾರೆ. ಇದೇ ವೇಳೆ ತಂಡದಲ್ಲಿರುವ ಇಬ್ಬರು ಕನ್ನಡಿಗರಾದ ವೈಶಾಕ್​ ವಿಜಯ್​ಕುಮಾರ್​ ಮತ್ತು ಮನೋಜ್​ ಭಾಂಡಗೆ ಅವರನ್ನು ರಿಟೇನ್​ ಮಾಡಿಕೊಂಡಿದೆ.

ಆರ್​ಸಿಬಿ ತಂಡ ಪ್ರಮುಖವಾಗಿ ಕೆಲ ಬೌಲರ್​ಗಳನ್ನು ಕೈಬಿಟ್ಟುದ್ದು, ಮುಂಬರುವ ಹರಾಜಿನಲ್ಲಿ ಬೌಲಿಂಗ್​ ವಿಭಾಗವನ್ನು ಬಲಪಡಿಸಿಕೊಳ್ಳಬೇಕಾದ ಅಗತ್ಯವೂ ಎದುರಾಗಿದೆ. ಈ ನಡುವೆ, ಕೆಲ ಆವೃತ್ತಿಗಳ ಹಿಂದೆಯಷ್ಟೇ ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ದ ವೇಗಿ ಹರ್ಷಲ್​ ಪಟೇಲ್​ರನ್ನು ಕೈಬಿಟ್ಟಿರುವ ಆರ್​ಸಿಬಿ ನಡೆ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದೆ. ಈ ಹಿಂದೆ ಪ್ರಮುಖ ಸ್ಪಿನ್ನರ್​ ಯಜುವೇಂದ್ರ ಚಾಹಲ್​ರನ್ನು ಕೈಬಿಟ್ಟು ಎಡವಟ್ಟು ಮಾಡಿಕೊಂಡಿದ್ದ ಆರ್​ಸಿಬಿ, ಹರ್ಷಲ್​ ಜತೆಯಲ್ಲೂ ಅಂಥದ್ದೇ ತಪ್ಪು ಹೆಜ್ಜೆ ಇಟ್ಟಿದೆ ಎಂದು ದೂರಲಾಗುತ್ತಿದೆ. ಇನ್ನು ಆಸೀಸ್​ ವೇಗಿ ಜೋಶ್​ ಹ್ಯಾಸಲ್​ವುಡ್​ ಏಪ್ರಿಲ್​ನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದು, ಆ ಸಮಯದಲ್ಲಿ ಪತ್ನಿ ಜತೆಯಲ್ಲಿರಲು ಬಯಸಿರುವುದರಿಂದ ಐಪಿಎಲ್​ನಲ್ಲಿ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಆರ್​ಸಿಬಿ ಅವರನ್ನು ಕೈಬಿಟ್ಟಿದೆ ಎನ್ನಲಾಗುತ್ತಿದೆ.

ಆರ್​ಸಿಬಿ ತಂಡ ಹೀಗಿದೆ: 

ರಿಲೀಸ್​: ವಾನಿಂದು ಹಸರಂಗ, ಜೋಶ್​ ಹ್ಯಾಸಲ್​ವುಡ್​, ಹರ್ಷಲ್​ ಪಟೇಲ್​, ಫಿನ್​ ಅಲೆನ್​, ಮಿಚೆಲ್​ ಬ್ರೇಸ್​ವೆಲ್​, ಕೇದಾರ್​ ಜಾಧವ್​, ಡೇವಿಡ್​ ವಿಲ್ಲಿ, ವೇಯ್ನ್​ ಪಾರ್ನೆಲ್​, ಸೋನು ಯಾದವ್​, ಅವಿನಾಶ್​ ಸಿಂಗ್​, ಸಿದ್ಧಾರ್ಥ್​ ಕೌಲ್​.

ರಿಟೇನ್​: ಫಾಫ್​ ಡು ಪ್ಲೆಸಿಸ್​, ವಿರಾಟ್​ ಕೊಹ್ಲಿ, ಗ್ಲೆನ್​ ಮ್ಯಾಕ್ಸ್​ವೆಲ್​, ದಿನೇಶ್​ ಕಾರ್ತಿಕ್​, ರಜತ್​ ಪಾಟಿದಾರ್​, ಅನುಜ್​ ರಾವತ್​, ಸುಯಶ್​ ಪ್ರಭುದೇಸಾಯಿ, ವಿಲ್​ ಜಾಕ್ಸ್​, ಮಹಿಪಾಲ್​ ಲೊಮ್ರೊರ್​, ಕರ್ಣ್​ ಶರ್ಮ, ಮನೋಜ್​ ಭಾಂಡಗೆ, ವೈಶಾಕ್​ ವಿಜಯ್​ಕುಮಾರ್​, ಆಕಾಶ್​ದೀಪ್​, ಮೊಹಮದ್​ ಸಿರಾಜ್​, ರೀಸ್​ ಟಾಪ್ಲೆ, ಹಿಮಾಂಶು ಶರ್ಮ, ರಾಜನ್​ ಕುಮಾರ್​.

ವರ್ಗಾವಣೆ: ಮಯಾಂಕ್​ ದಾಗರ್​ (ಸನ್​ರೈಸರ್ಸ್​ನಿಂದ).

ಹರಾಜಿನಲ್ಲಿ ಹೊಸ ಆಟಗಾರರ ಖರೀದಿಗೆ ಉಳಿದ ಮೊತ್ತ: 40.75 ಕೋಟಿ ರೂ.