ಕ್ರೀಡೆ

RCBಗೆ ನೂತನ ಕ್ಯಾಪ್ಟನ್​ ಅವಶ್ಯಕತೆ? ಈ 3 ಸ್ಟಾರ್​ ಆಟಗಾರರ ಮೇಲೆ ಫ್ರಾಂಚೈಸಿ ಕಣ್ಣು

ನವದೆಹಲಿ: ಐಪಿಎಲ್​ 18ನೇ ಆವೃತ್ತಿ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ​ ಸೀಸನ್​ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯಲ್ಲಿ (IPL Mega Auction) ಆಯಾ ಫ್ರಾಂಚೈಸಿಗಳ ಕ್ಯಾಪ್ಟನ್​ಗಳು ಸೇರಿದಂತೆ ಸ್ಟಾರ್​ ಆಟಗಾರರು ಈಗಿರುವ ತಮ್ಮ ತಂಡ ಬಿಟ್ಟು ಬೇರೆ ತಂಡಗಳಿಗೆ ಸೇರುತ್ತಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಇನ್ನು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಕ್ಷನ್​ನತ್ತ ಎದುರುನೋಡುತ್ತಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB), ಪ್ರಸ್ತುತ ಆರ್​ಸಿಬಿ ಕ್ಯಾಪ್ಟನ್​ ಆಗಿರುವ ಫಾಫ್​ ಡು ಪ್ಲೆಸಿಸ್​ ಸ್ಥಾನಕ್ಕಾಗಿ ಈ ಮೂವರು ಸ್ಟಾರ್​ ಆಟಗಾರರ ಮೇಲೆ ಕಣ್ಣಿಟ್ಟಿದೆ.

ವರದಿಗಳ ಪ್ರಕಾರ, ಈ ಬಾರಿ ನಡೆಯಲಿರುವ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಆರ್​ಸಿಬಿ ತಮ್ಮ ಕ್ಯಾಪ್ಟನ್ ಫಾಫ್​ ಡು ಪ್ಲೆಸಿಸ್​ರನ್ನು ತಂಡದಿಂದ ಕೈಬಿಡಲಿದ್ದು, ರಿಲೀಸ್​ ಮಾಡಿದ ಬಳಿಕ ಹೊಸ ನಾಯಕನಿಗೆ ಹುಡುಕಾಟ ನಡೆಸಲಿದೆ ಎಂದು ಹೇಳಲಾಗಿದೆ. ಅಸಲಿಗೆ ಇದು ಶೇ.90% ರಷ್ಟು ನಿಜ ಎಂದೇ ನಂಬಲಾಗಿದೆ. ಫಾಫ್​ ಡು ಪ್ಲೆಸಿಸ್​ರನ್ನು ರಿಲೀಸ್​ ಮಾಡಿದರೆ ಮುಂದೆ ಆರ್​ಸಿಬಿ ತಂಡದ ನಾಯಕ ಯಾರು ಎಂಬ ಪ್ರಶ್ನೆ ಇದೀಗ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಹರಾಜು ಪ್ರಕ್ರಿಯೆಯಲ್ಲಿ ಫಾಫ್​ ಸ್ಥಾನಕ್ಕೆ ಇನ್ಯಾವ ಆಟಗಾರನನ್ನು ತರಬೇಕು ಎಂಬ ಲೆಕ್ಕಾಚಾರಗಳನ್ನು ಹಾಕಿಕೊಂಡಿರುವ ಆರ್​ಸಿಬಿ, ಇದೀಗ ಮೂವರು ಟಿ20 ಸ್ಪೆಷಲಿಸ್ಟ್​​ ಕಡೆ ತಮ್ಮ ಒಲವು ತೋರಿದೆ. ಇವರ ಪೈಕಿ ಒಬ್ಬರನ್ನು ಕ್ಯಾಪ್ಟನ್​ ಸ್ಥಾನಕ್ಕೆ ಕೂರಿಸಲು ಚಿಂತನೆ ನಡೆಸಿದೆ.

ಯಾರು ಈ ಮೂವರು ಸ್ಟಾರ್ ಆಟಗಾರರು

1. ಐಡೆನ್ ಮಾರ್ಕ್ರಾಮ್

ಪ್ರಸ್ತುತ ಸನ್​ರೈಸರ್ಸ್​ ಹೈದರಾಬಾದ್​ ತಂಡದಲ್ಲಿ ಅದ್ಭುತ ಆಟಗಾರನಾಗಿ ಗುರುತಿಸಿಕೊಂಡಿರುವ ಐಡೆನ್ ಮಾರ್ಕ್ರಾಮ್, ಕಳೆದ ಸೀಸನ್​ಗಳಲ್ಲಿ ಎಸ್​ಆರ್​ಎಚ್​ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ತಾವೊಬ್ಬ ಉತ್ತಮ ಟಿ20 ಸ್ಪೆಷಲಿಸ್ಟ್​ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುವ ಆರ್​ಸಿಬಿ, ಮಾರ್ಕ್ರಾಮ್​ರನ್ನು ತಂಡಕ್ಕೆ ಕರೆತಂದರೆ ಬ್ಯಾಟಿಂಗ್​ ಹಾಗೂ ನಾಯಕನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬಹುದು ಎಂಬ ನಿರೀಕ್ಷೆಯಲ್ಲಿದೆ ಎನಿಸುತ್ತದೆ.

2. ಸ್ಟೀವ್​ ಸ್ಮಿತ್​

ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್​ ಮೇಲೆ ಇದೀಗ ಆರ್​ಸಿಬಿ ಕಣ್ಣಿಟ್ಟಿದ್ದು, ನಾಯಕನಾಗಿ ಹಾಗೂ ಅತ್ಯುತ್ತಮ ರನ್​ಸ್ಕೋರರ್​​ ಆಗಿ ಯಶಸ್ವಿಯಾಗಿರುವ ಸ್ಮಿತ್,​ ತಂಡದ ಜವಾಬ್ದಾರಿ ಹೊರಲು ಸೂಕ್ತ ಆಟಗಾರ ಎಂದು ನಿರ್ಧರಿಸುವಂತೆ ಕಂಡುಬಂದಿದೆ. ಒಬ್ಬ ಕ್ಯಾಪ್ಟನ್ ಆಗಿ ಉತ್ತಮವಾಗಿ ಈಗಾಗಲೇ ತಮ್ಮ ತಂಡವನ್ನು ಮುನ್ನಡೆಸಿರುವ ಸ್ಮಿತ್​, ಆರ್​ಸಿಬಿ ಬ್ಯಾಟಿಂಗ್​ ಲೈನ್​ ಅನ್ನು ಮತ್ತಷ್ಟು ಬಲ ಪಡಿಸುತ್ತಾರೆ ಎಂಬ ವಿಶ್ವಾಸ ಫ್ರಾಂಚೈಸಿಗಿರಬಹುದು. ಅಸಲಿಗೆ ಸ್ಟೀವ್ ಸ್ಮಿತ್​ರನ್ನು ತಂಡಕ್ಕೆ ಕರೆದುಕೊಳ್ಳಲಿದೆಯೇ ಫ್ರಾಂಚೈಸಿ ಎಂಬುದನ್ನು ಆಕ್ಷನ್​ ದಿನವೇ ತಿಳಿಯಬೇಕಿದೆ.

3. ಕನ್ನಡಿಗ ಕೆ.ಎಲ್​. ರಾಹುಲ್​

ಟೀಮ್ ಇಂಡಿಯಾದ ಸ್ಟಾರ್​ ಓಪನಿಂಗ್ ಬ್ಯಾಟ್ಸ್​ಮನ್​ ಮತ್ತು ವಿಕೆಟ್​ ಕೀಪರ್ ಆಗಿರುವ ನಮ್ಮ ಬೆಂಗಳೂರಿನ ಹುಡುಗ ಕೆ.ಎಲ್​. ರಾಹುಲ್​, ಇಲ್ಲಿಯವರೆಗೂ ಕಳೆದ ಕೆಲವು ಸೀಸನ್​ಗಳಿಂದ ಲಖನೌ ಸೂಪರ್ ಜೈಂಟ್ಸ್​ ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಕ್ಯಾಪ್ಟನ್ ಹಾಗೂ ಅತ್ಯುತ್ತಮ ಓಪನರ್​ ಆಗಿಯೂ ತಂಡದಲ್ಲಿ ಉತ್ತಮ ಹೆಸರು ಗಳಿಸಿರುವ ರಾಹುಲ್​, ತಾವೊಬ್ಬ ಟಿ20 ಸ್ಪೆಷಲಿಸ್ಟ್​ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಒಂದೆಡೆ ಆರ್​ಸಿಬಿ ಫ್ಯಾನ್ಸ್​ಗಳು ಈ ಹಿಂದಿನಿಂದಲೂ ರಾಹುಲ್ ಬೆಂಗಳೂರು ಪರ ಆಡಬೇಕು ಎಂದು ಅಭಿಪ್ರಾಯಿಸಿದ್ದರು. ಅದಕ್ಕೆ ತಕ್ಕಂತೆ ಫ್ರಾಂಚೈಸಿ ಕೂಡ ಇದೀಗ ಕೆ.ಎಲ್.​ ರಾಹುಲ್​​ರನ್ನು ಆಯ್ಕೆ ಮಾಡಲು ಚಿಂತಿಸಿದ್ದು, ಅಂತಿಮವಾಗಿ ಯಾರು ಆರ್​ಸಿಬಿ ಕ್ಯಾಪ್ಟನ್ ಪಟ್ಟ ಸ್ವೀಕರಿಸುತ್ತಾರೆ? ತಂಡ ಸೇರುತ್ತಾರೆ? ಎಂಬುದು ಐಪಿಎಲ್​ ಆಕ್ಷನ್​ನಲ್ಲಿ ಸ್ಪಷ್ಟವಾಗಲಿದೆ,(ಏಜೆನ್ಸೀಸ್).