ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್-2024ರ ಸೀಸನ್ನಲ್ಲಿ ಆರ್‌ಸಿಬಿ ಅದ್ಭುತ ಯಶಸ್ಸನ್ನು ದಾಖಲಿಸಿದೆ. ಅಭಿಮಾನಿಗಳು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ ಈ ಸೀಸನ್ನ ಆರಂಭದಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ, ಅನಿರೀಕ್ಷಿತವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ. ಕ್ರಿಕೆಟ್ ದಿಗ್ಗಜರು ಕೂಡ ಇಂತಹದ್ದೊಂದು ಪ್ರದರ್ಶನವನ್ನು ನಿರೀಕ್ಷಿಸಿರಲಿಲ್ಲ. ಆರ್‌ಸಿಬಿ ತಂಡ ಪ್ಲೇಆಫ್ ಪ್ರವೇಶಿಸುವುದು ಅಸಾಧ್ಯ ಎಂದು ಮಾಜಿ ಆಟಗಾರರು ಮತ್ತು ತಜ್ಞರು ಕೂಡ ವಿವರಿಸಿದ್ದರು. ಆದರೆ, ಎಲ್ಲರ ಬಾಯಿ ಮುಚ್ಚಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಯಲ್ ಆಗಿ ಪ್ಲೇ ಆಫ್ ಪ್ರವೇಶಿಸಿದೆ. ಆರ್‌ಸಿಬಿ ಎದುರು ಸೋತು ಸಿಎಸ್ಕೆ ಟೂರ್ನಿಯಿಂದ ಹೊರಬಿದ್ದಿದೆ. ಆರ್‌ಸಿಬಿ ಅಭಿಮಾನಿಗಳು ಈ ಬಾರಿ ಕಪ್ ನಮ್ದೆ ಅನ್ನುತ್ತಿದ್ದಾರೆ. ಆದರೆ, ಆರ್‌ಸಿಬಿ ಅಭಿಮಾನಿಗಳಲ್ಲಿ ಇನ್ನೂ ಒಂದು ಆತಂಕ ಇದೀಗ ಎದುರಾಗಿದೆ.
ಐಪಿಎಲ್ ಇತಿಹಾಸದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ-ಆರ್‌ಸಿಬಿ ಪಂದ್ಯ ಫೈನಲ್‌ಗಿಂತ ಹೆಚ್ಚು ಕ್ರೇಜ್ ಗಳಿಸಿದೆ. ಜಿಯೋ ಸಿನಿಮಾ ಆ್ಯಪ್ನಲ್ಲಿ 50 ಕೋಟಿ ವೀಕ್ಷಕರನ್ನು ಗಳಿಸಿದೆ. ಫೈನಲ್ ಪಂದ್ಯಕ್ಕೂ ಈ ರೀತಿಯ ಕ್ರೇಜ್ ಹಾಗೂ ಫಾಲೋಯಿಂಗ್ ಮತ್ತು ವೀಕ್ಷಕರನ್ನು ಊಹಿಸಲು ಸಾಧ್ಯವಿಲ್ಲ. ಈ ಸೀಸನ್ನಲ್ಲಿ ಆರ್‌ಸಿಬಿ ತಂಡ ಈ ಮಟ್ಟಕ್ಕೆ ಬರಲು ಸಾಕಷ್ಟು ಹೋರಾಟ ನಡೆಸಿದೆ. ಮೊದಲು ಸತತ 6 ಪಂದ್ಯಗಳಲ್ಲಿ ಸೋತಿದ್ದ ಬೆಂಗಳೂರು ತಂಡ, ನಂತರ ಸತತ 6 ಪಂದ್ಯಗಳನ್ನು ಗೆದ್ದು ಒಟ್ಟಿಗೆ ಪ್ಲೇ ಆಫ್ ಪ್ರವೇಶಿಸಿದೆ. ಈಗ ಫೈನಲ್‌ಗೆ ಪ್ರವೇಶ ಪಡೆದು ಕಪ್ ಗೆಲ್ಲುವ ಗುರಿ ಹೊಂದಿದೆ. ಅಭಿಮಾನಿಗಳು ಕೂಡ ಈ ವರ್ಷ ಕಪ್ ಗೆಲ್ಲಲ್ಲೇಬೇಕೆಂದು ಬಯಸಿದೆ.
ಈ ಸೀಸನ್ನಲ್ಲಿ ಆರ್‌ಸಿಬಿ ಪ್ರದರ್ಶನ ಸಿಕ್ಕಾಪಟ್ಟೆ ಹಿಟ್ ಆಗಿದೆ. ಟ್ರೋಫಿ ಗೆಲ್ಲುವ ಆಸೆಯ ನಡುವೆ ಅದೊಂದು ಮಾತ್ರ ಮರುಕಳಿಸಬಾರದು ಅಂತಾ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳನ್ನು ಇದು ಗೊಂದಲಕ್ಕೀಡುಮಾಡಿದೆ. ಆ ಕ್ಷಣ ಪುನರಾವರ್ತನೆಯಾದರೆ ಆರ್‌ಸಿಬಿಗೆ ಕಪ್ ಗೆಲ್ಲುವುದು ಅಸಾಧ್ಯ ಎಂಬ ಕಾಮೆಂಟ್‌ಗಳು ಕೇಳಿಬರುತ್ತಿವೆ. ಅದೇನೆಂದರೆ, ಈ ಹಿಂದೆಯೂ ಆರ್‌ಸಿಬಿ ಸತತ ಪಂದ್ಯಗಳಲ್ಲಿ ಗೆದ್ದು ಅಮೋಘ ಪ್ರದರ್ಶನ ನೀಡಿತ್ತು. ಆದರೂ ಆ ಸೀಸನ್‌ಗಳಲ್ಲಿ ಆರ್‌ಸಿಬಿಗೆ ಕಪ್ ದಕ್ಕಲಿಲ್ಲ. 2009ರಲ್ಲಿ ಆರ್‌ಸಿಬಿ ತಂಡ ಸತತ 5 ಪಂದ್ಯಗಳನ್ನು ಗೆದ್ದಿತ್ತು. ಆದರೆ, ಆ ಸೀಸನ್ನಲ್ಲಿ ಆರ್‌ಸಿಬಿ ತಂಡ ರನ್ನರ್ ಅಪ್ ಆಗಿ ಕೊನೆಗೊಂಡಿತು. ಆ ನಂತರ 2011ರ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಪಂದ್ಯಗಳಲ್ಲಿ ಸತತ ಜಯ ದಾಖಲಿಸಿತ್ತು. ಆದರೆ, ಆ ಸೀಸನ್ನಲ್ಲೂ ಅದು ರನ್ನರ್ ಅಪ್ ಆಗಿಯೇ ಕೊನೆಗೊಂಡಿತು.
2016ರ ಸೀಸನ್ನಲ್ಲೂ ಆರ್‌ಸಿಬಿ ತಂಡ ಸತತ 5 ಪಂದ್ಯಗಳನ್ನು ಗೆದ್ದಿತ್ತು. ಆ ಸೀಸಸ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕಪ್ ಗೆದ್ದಿತ್ತು. ಇದೀಗ 2024ರ ಸೀಸನ್ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ತಲುಪಿದೆ. ಇದೀಗ ಈ ಫಲಿತಾಂಶದ ಬಗ್ಗೆ ಆರ್‌ಸಿಬಿ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಇದಲ್ಲದೆ, ಸನ್‌ರೈಸರ್ಸ್ ಹೈದರಾಬಾದ್ ತಂಡವೂ ಪ್ಲೇ ಆಫ್‌ನಲ್ಲಿದೆ. ಇದು ಆರ್‌ಸಿಬಿ ಅಭಿಮಾನಿಗಳನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಆದರೆ ಈ ಬಾರಿ ಆರ್‌ಸಿಬಿ ತಂಡದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಆರ್‌ಸಿಬಿ ಮಹಿಳಾ ತಂಡವು ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಲ್ಲದೆ, ಡುಪ್ಲೆಸಿಸ್ ತಂಡ ಕೂಡ ಮೊದಲ ಕಪ್ ಗೆದ್ದು ಇತಿಹಾಸ ಸೃಷ್ಟಿಸುವ ಭರವಸೆಯಲ್ಲಿದೆ. ಹಿಂದೆ ಏನು ನಡೆದಿದೆ ಎಂಬುದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. (ಏಜೆನ್ಸೀಸ್)