ಕ್ರೀಡೆ

ನಾವು ಸುಮ್ಮನಿದ್ದ ಮಾತ್ರಕ್ಕೆ... 3 ತಿಂಗಳ ಬಳಿಕ ಮೌನ ಮುರಿದ ಆರ್​ಸಿಬಿ, ಅಭಿಮಾನಿಗಳಿಗೆ ಬಿಗ್​ ಅಪ್​​ಡೇಟ್​! RCB

RCB : ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹದಿನೇಳು ವರ್ಷಗಳ ಕನಸನ್ನು ನನಸಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆರ್​ಸಿಬಿ ಅಭಿಮಾನಿಗಳ ಬಹು ವರ್ಷಗಳ ಕನಸಾಗಿದ್ದ ಐಪಿಎಲ್​ ಟ್ರೋಫಿಗೆ ಕೊನೆಗೂ ರಜತ್​ ಪಾಟಿದಾರ್​ ನೇತೃತ್ವದ ಆರ್​ಸಿಬಿ ತಂಡ ಮುತ್ತಿಟ್ಟಿತು. ಚೊಚ್ಚಲ ಪ್ರಶಸ್ತಿ ಗೆದ್ದಿದ್ದಕ್ಕೆ ಭಾರಿ ಸಂಭ್ರಮಾಚರಣೆ ಮಾಡಲು ಆರ್​ಸಿಬಿ ಫ್ರಾಂಚೈಸಿ ಮತ್ತು ಅಭಿಮಾನಿಗಳು ಮುಂದಾಗಿದ್ದರು. ಅಷ್ಟರಲ್ಲಿ ಯಾರು ನಿರೀಕ್ಷೆ ಮಾಡಿರದ ದುರಂತ ಒಂದು ನಡದೇ ಹೋಯಿತು.

ಪ್ರಶಸ್ತಿ ಗೆದ್ದು ತವರಿಗೆ ಹಿಂತಿರುಗಿದ ಆರ್‌ಸಿಬಿ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಂಡೋಪತಂಡ ಜಮಾಯಿಸಿದರು. ಎಲ್ಲರು ಒಂದೆಡೆ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿ, ಹನ್ನೊಂದು ಮಂದಿ ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡರು. ಅಲ್ಲದೆ, ಈ ಘಟನೆಯಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಘಟನೆ ನಂತರದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡು ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು. ಕೆಲವರು ಸರ್ಕಾರದ ನಿರ್ಲಕ್ಷ್ಯದಿಂದ ಇದು ಸಂಭವಿಸಿತು ಎಂದರು. ಆದರೆ, ಸರ್ಕಾರ ಮಾತ್ರ ಇದು ಆರ್​ಸಿಬಿಯ ಲೋಪ ಎಂದು ವಾದಿಸಿತು.

ಈ ದುರಂತ ಘಟನೆಯ ತನಿಖೆ ನಡೆಸಿದ ಕೇಂದ್ರ ಆಡಳಿತ ನ್ಯಾಯಮಂಡಳಿ (CAT) RCB ತಂಡವನ್ನು ಸಂಪೂರ್ಣವಾಗಿ ತಪ್ಪಿತಸ್ಥರೆಂದು ಹೇಳಿತು. ಪೊಲೀಸರಿಂದ ಪೂರ್ವಾನುಮತಿ ಪಡೆಯದೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಗೆಲುವಿನ ಸಂಭ್ರಮಾಚರಣೆ ಬಗ್ಗೆ ಪೋಸ್ಟ್ ಮಾಡಿದ್ದಕ್ಕಾಗಿ RCB ವಿರುದ್ಧ ಸಿಎಟಿ ತನ್ನ ಕೋಪವನ್ನು ವ್ಯಕ್ತಪಡಿಸಿತು. ಈ ಪ್ರಕರಣ ಸಂಬಂಧ RCBಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರನ್ನು ಜೂನ್‌ನಲ್ಲಿ ಬಂಧಿಸಲಾಯಿತು. ಆದಾಗ್ಯೂ, ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಘಟನೆಗೆ ಪ್ರತಿಕ್ರಿಯೆಯಾಗಿ ಜೂನ್ 5 ರಂದೇ ಆರ್‌ಸಿಬಿ ಒಂದು ಪೋಸ್ಟ್ ಪೋಸ್ಟ್ ಮಾಡಿತು. ಆರ್‌ಸಿಬಿ ಕೇರ್ಸ್ ಮೂಲಕ ಗಾಯಗೊಂಡ ಅಭಿಮಾನಿಗಳ ಬೆಂಬಲಕ್ಕೆ ನಿಲ್ಲುವುದಾಗಿ ಅದು ಘೋಷಿಸಿತು. ಅದರ ನಂತರ, ಆರ್‌ಸಿಬಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಯಾವುದೇ ಪೋಸ್ಟ್​ ಮಾಡಿರಲಿಲ್ಲ. ಇದೀಗ ಕೊನೆಗೂ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದೆ.

'ಪ್ರೀತಿಯ 12ನೇ ಮ್ಯಾನ್ ಆರ್ಮಿ (ಆರ್‌ಸಿಬಿ ಅಭಿಮಾನಿಗಳನ್ನು ಉದ್ದೇಶಿಸಿ).. ಈ ಹೃದಯಸ್ಪರ್ಶಿ ಪತ್ರ ನಿಮಗಾಗಿ. ನಾವು ಸುಮಾರು ಮೂರು ತಿಂಗಳಿನಿಂದ ಇಲ್ಲಿಯವರೆಗೆ ಏನನ್ನೂ ಪೋಸ್ಟ್ ಮಾಡಿಲ್ಲ. ನಾವು ಹೀಗೆ ಸುಮ್ಮನಿದ್ದ ಮಾತ್ರಕ್ಕೆ ನಮ್ಮ ಅನುಪಸ್ಥಿತಿ ಎಂದು ಭಾವಿಸಬೇಡಿ. ವಾಸ್ತವವಾಗಿ, ನಾವು ಆ ದುರಂತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇಲ್ಲಿ, ನಮ್ಮ ಶಕ್ತಿ, ಸುಂದರ ನೆನಪುಗಳು ಮತ್ತು ಅದ್ಭುತ ಘಟನೆಗಳ ಬಗ್ಗೆ ಮಾತ್ರ ಪೋಸ್ಟ್‌ಗಳು ಇರುತ್ತಿದ್ದವು. ನಾವೆಲ್ಲರೂ ಇಲ್ಲಿ ಒಟ್ಟಿಗೆ ಅನೇಕ ಸಂತೋಷಗಳನ್ನು ಹಂಚಿಕೊಂಡಿದ್ದೇವೆ. ನಾವು ಪ್ರತಿ ಕ್ಷಣವನ್ನು ಆನಂದಿಸಿದ್ದೇವೆ. ಆದರೆ ಜೂನ್ 4 ಎಲ್ಲವನ್ನೂ ತಲೆಕೆಳಗಾಗಿ ಮಾಡಿತು. ಆ ದಿನ ನಮ್ಮ ಹೃದಯಗಳನ್ನು ಛಿದ್ರಗೊಳಿಸಿತು. ಅಂದಿನಿಂದ ನಾವು ಮೌನವಾಗಿದ್ದೇವೆ. ದುಃಖದಲ್ಲಿ ಮುಳುಗಿದ್ದೇವೆ. ಮೌನವಾಗಿ ಎಲ್ಲವನ್ನೂ ಕೇಳುತ್ತಿದ್ದೇವೆ. ಏನು ಮಾಡಬೇಕೆಂದು ಯೋಚಿಸುತ್ತಿದ್ದೇವೆ.

ನಾವು ಪ್ರತಿಕ್ರಿಯಿಸುವುದಕ್ಕಿಂತ ದೊಡ್ಡದನ್ನು ಮಾಡಲು ಬಯಸಿದ್ದೆವು. ಅದಕ್ಕಾಗಿಯೇ ನಾವು 'RCB CARES' ಅನ್ನು ತಂದಿದ್ದೇವೆ. ಈ ವೇದಿಕೆಯ ಮೂಲಕ, ನಾವು ನಮ್ಮ ಜನರ ಪರವಾಗಿ ನಿಲ್ಲುತ್ತೇವೆ. ಇಂದು ನಾವು ಮರಳಿದ್ದೇವೆ. ನಾವು ನಿಮ್ಮೊಂದಿಗಿದ್ದೇವೆ. ನಾವೆಲ್ಲರೂ ಒಟ್ಟಾಗಿ ಪ್ರಾರ್ಥಿಸೋಣ. ಕರ್ನಾಟಕದ ಹೆಮ್ಮೆಯನ್ನು ಒಟ್ಟಾಗಿ ಮುಂದೆ ಕೊಂಡೊಯ್ಯೋಣ. ಇದು ನಿಜ.. ಆರ್‌ಸಿಬಿ ಕಾಳಜಿ.. ಎಂದು ಆರ್‌ಸಿಬಿ ಫ್ರಾಂಚೈಸಿ ಭಾವನಾತ್ಮಕ ಪತ್ರವನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೆ, ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಬಿಗ್​ ಅಪ್​ಡೇಟ್​ ಸೂಚನೆಯನ್ನು ನೀಡಿದೆ. (ಏಜೆನ್ಸೀಸ್​)

https://www.vijayavani.net/22-runs-in-1-ball-rcb-star-who-slammed-fastest-50-in-ipl-2025-does-the-unthinkable-in-cpl ​