ಬೆಂಗಳೂರು: ಆರ್ಸಿಬಿ -ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-17ರಲ್ಲಿ ಬುಧವಾರ ಮುಖಾಮುಖಿ ಆಗುತ್ತಿವೆ. ಡೆಲ್ಲಿ ತಂಡ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ ತಲಾ 6 ಜಯ, 6 ಸೋಲಿನೊಂದಿಗೆ 12 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಆರ್ಸಿಬಿ ತಂಡ ಇಷ್ಟೇ ಪಂದ್ಯಗಳಲ್ಲಿ 5 ಜಯ ಮತ್ತು 7 ಸೋಲಿನೊಂದಿಗೆ 7ನೇ ಸ್ಥಾನದಲ್ಲಿದೆ. ಉಭಯ ತಂಡಗಳ ಪ್ಲೇಆಫ್ ಆಸೆ ಸದ್ಯ ತೂಗುಯ್ಯಾಲೆಯಲ್ಲಿದ್ದು, ಈ ಪಂದ್ಯದ ಫಲಿತಾಂಶ ಉಭಯ ತಂಡಗಳ ಭವಿಷ್ಯ ನಿರ್ಧರಿಸಿದೆ. ಉಭಯ ತಂಡಗಳ ಸದ್ಯದ ಪ್ಲೇಆಫ್ ಲೆಕ್ಕಾಚಾರ ಹೀಗಿದೆ...
ಆರ್ಸಿಬಿ: ಕೊನೇ 2 ಪಂದ್ಯಗಳಲ್ಲಿ ಗೆಲ್ಲುವ ಜತೆಗೆ ರನ್ರೇಟ್ ಸುಧಾರಣೆ ಮತ್ತು ಇತರ ಫಲಿತಾಂಶಗಳು ಪೂರಕವಾಗಿ ಬರುವುದು ಕೂಡ ಅಗತ್ಯವಾಗಿದೆ. ಅಂದರೆ ಸಿಎಸ್ಕೆ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ ಗೆಲ್ಲಬೇಕು ಮತ್ತು ಲಖನೌ ತಂಡ ತನ್ನ ಉಳಿದ 2ರಲ್ಲಿ 1 ಪಂದ್ಯವಾದರೂ ಸೋಲಬೇಕು ಮತ್ತು ಗುಜರಾತ್ ಉಳಿದೆರಡು ಪಂದ್ಯ ಗೆದ್ದರೂ ರನ್ರೇಟ್ ಸುಧಾರಿಸಬಾರದು. ಆರ್ಸಿಬಿಗೆ ಹಾಲಿ ಚಾಂಪಿಯನ್ ಸಿಎಸ್ಕೆ (ಮೇ 18) ಕೊನೇ ಲೀಗ್ ಎದುರಾಳಿಯಾಗಿದೆ.
ಡೆಲ್ಲಿ: ಉಳಿದ 2 ಪಂದ್ಯ ಜಯಿಸುವ ಜತೆಗೆ ರನ್ರೇಟ್ ಸುಧಾರಣೆ ಮತ್ತು ಇತರ ಫಲಿತಾಂಶಗಳು ವರವಾಗಬೇಕು. ಅಂದರೆ ಸಿಎಸ್ಕೆ ಮತ್ತು ಲಖನೌ ಉಳಿದ 2ರಲ್ಲಿ ಒಂದಾದರೂ ಪಂದ್ಯ ಸೋಲಲಿ ಅಥವಾ ಸನ್ರೈಸರ್ಸ್ ಉಳಿದ 2 ಪಂದ್ಯಗಳಲ್ಲೂ ಸೋಲಲಿ ಎಂದು ಪ್ರಾರ್ಥಿಸಬೇಕಿದೆ. ಡೆಲ್ಲಿಗೆ ಲಖನೌ (ಮೇ 14) ಕೊನೇ ಲೀಗ್ ಎದುರಾಳಿಯಾಗಿದೆ. ಡೆಲ್ಲಿ ತಂಡ ಕೊನೇ 2ರಲ್ಲಿ 1 ಪಂದ್ಯ ಮಾತ್ರ ಗೆದ್ದರೂ ಗಣಿತಶಾಸ್ತ್ರದ ಪ್ರಕಾರ ಆಸೆ ಜೀವಂತವಿದ್ದರೂ, ರನ್ರೇಟ್ ಕಳಪೆಯಾಗಿರುವುದರಿಂದ ಪ್ಲೇಆಫ್ಗೇರುವುದು ಕಷ್ಟಕರ.