ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭರ್ಜರಿ ಗೆಲುವಿನ ಲಯದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ಕಿಂಗ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಶನಿವಾರ ಚಿನ್ನಸ್ವಾಮಿ ಸ್ಟೇಡಿಂನಲ್ಲಿ ಮುಖಾಮುಖಿ ಆಗಲಿವೆ. ರಜತ್ ಪಾಟೀದಾರ್ ಪಡೆ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಳ್ಳುವ ಹಂಬಲದಲ್ಲಿದ್ದರೆ, ಈಗಾಗಲೆ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿರುವ ಎಂಎಸ್ ಧೋನಿ ಪಡೆ ಸಮಾಧಾನಕರ ಗೆಲುವಿನ ನಿರೀಕ್ಷೆಯಲ್ಲಿದೆ.
ಆರ್ಸಿಬಿ ತಂಡ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 3 ಸೋಲಿನೊಂದಿಗೆ 14 ಅಂಕ ಕಲೆಹಾಕಿದೆ. 8ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳುವ ಮೂಲಕ ಪ್ಲೇಆಫ್ ಪ್ರವೇಶವನ್ನೂ ಖಾತ್ರಿಪಡಿಸಿಕೊಳ್ಳುವ ಅವಕಾಶ ಆರ್ಸಿಬಿ ಮುಂದಿದೆ. ಆದರೆ ಈಗ ಆರ್ಸಿಬಿ ಗುರಿ ಪ್ಲೇಆಫ್ಗೇರುವುದು ಮಾತ್ರವಲ್ಲದೆ, ಅಂಕಪಟ್ಟಿಯಲ್ಲಿ ಅಗ್ರ 2ರೊಳಗಿ ಸ್ಥಾನ ಸಂಪಾದಿಸುವುದಾಗಿದೆ. ಹೀಗಾಗಿ ಆರ್ಸಿಬಿ ಉಳಿದ 4 ಪಂದ್ಯಗಳಲ್ಲಿ ಇನ್ನೂ 2&3 ಗೆಲುವಿನ ಅಗತ್ಯವಿದೆ.
ಮತ್ತೊಂದೆಡೆ ಸಿಎಸ್ಕೆ ತಂಡಕ್ಕೆ ಈ ಬಾರಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 8ರಲ್ಲಿ ಸೋತಿರುವ ಸಿಎಸ್ಕೆ ಈಗಾಗಲೆ ಪ್ಲೇಆ್ ರೇಸ್ನಿಂದ ಹೊರಬಿದ್ದಿದೆ. ಇನ್ನು ಕನಿಷ್ಠ ಕೊನೇ ಸ್ಥಾನದಿಂದ ಪಾರಾಗುವ ಅವಕಾಶವಷ್ಟೇ ಸಿಎಸ್ಕೆ ಮುಂದಿದೆ. ಜತೆಗೆ ಇತರ ಕೆಲ ತಂಡಗಳ ಪ್ಲೇಆಫ್ ಲೆಕ್ಕಾಚಾರವನ್ನು ತಪ್ಪಿಸಲು ಪ್ರಯತ್ನಿಸಬಹುದಾಗಿದೆ.
ಧೋನಿ-ಕೊಹ್ಲಿ ಮುಖಾಮುಖಿ
ಕಳೆದ 2 ಆವೃತ್ತಿಗಳಿಂದ ಆರ್ಸಿಬಿ-ಸಿಎಸ್ಕೆ ಎದುರಾದಾಗಲೆಲ್ಲಾ, ಇದೇ ವಿರಾಟ್ ಕೊಹ್ಲಿ-ಎಂಎಸ್ ಧೋನಿ ನಡುವಿನ ಕೊನೇ ಮುಖಾಮುಖಿ ಆಗಬಹುದೇ ಎಂಬ ಪ್ರಶ್ನೆ ಮೂಡುತಿತ್ತು. ಈ ಸಲವೂ ಮತ್ತೆ ಅದೇ ಪ್ರಶ್ನೆ ಎದ್ದಿದೆ. ಆದರೆ ಧೋನಿ ಈ ಸಲವೂ ಐಪಿಎಲ್ನಿಂದ ನಿವೃತ್ತಿ ಹೊಂದುವ ಲಕ್ಷಣ ಇದುವರೆಗೆ ಕಾಣಿಸಿಲ್ಲ. ಇದರ ನಡುವೆ ಉಭಯ ಆಟಗಾರರ ಅಭಿಮಾನಿಗಳು ಮತ್ತೊಂದು ಮುಖಾಮುಖಿಯನ್ನು ಆನಂದಿಸುವ ತವಕದಲ್ಲಿದ್ದಾರೆ.
ಭರ್ಜರಿ ಲಯದಲ್ಲಿ ಆರ್ಸಿಬಿ
ಆಡಿರುವ ಕೊನೇ 3 ಪಂದ್ಯಗಳಲ್ಲಿ ಗೆದ್ದಿರುವ ಆರ್ಸಿಬಿ ಭರ್ಜರಿ ಲಯದಲ್ಲಿದೆ. ತವರಿನಲ್ಲಿ ಆರಂಭಿಕ 3 ಪಂದ್ಯಗಳಲ್ಲಿ ಸೋತಿದ್ದ ಆರ್ಸಿಬಿ, ರಾಜಸ್ಥಾನ ವಿರುದ್ಧದ ಗೆಲುವಿನೊಂದಿಗೆ ಮನೆಯಂಗಳದಲ್ಲೂ ಜಯದ ಖಾತೆ ತೆರೆದಿದೆ. ಈ ಬಾರಿ ತವರಿನಲ್ಲೂ ಗೆಲುವಿನ ಓಟ ಮುಂದುವರಿಸುವುದು ಆರ್ಸಿಬಿ ಹಂಬಲವಾಗಿದೆ. ಇದುವರೆಗೆ 443 ರನ್ ಸಿಡಿಸಿರುವ ವಿರಾಟ್ ಕೊಹ್ಲಿ ಮತ್ತೆ ಆರೆಂಜ್ ಕ್ಯಾಪ್ ಒಲಿಸಿಕೊಳ್ಳುವ ಹಂಬಲದಲ್ಲಿದ್ದು, ಅವರಿಗ ಕನ್ನಡಿಗ ದೇವದತ್ ಪಡಿಕ್ಕಲ್ (230) ಉತ್ತಮ ಬೆಂಬಲ ಒದಗಿಸುತ್ತಿದ್ದಾರೆ. ಅನಾರೋಗ್ಯದಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಫಿಲ್ ಸಾಲ್ಟ್ (239) ಈ ಬಾರಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಬೌಲಿಂಗ್ನಲ್ಲಿ ಹ್ಯಾಸಲ್ವುಡ್ (18), ಕೃನಾಲ್ ಪಾಂಡ್ಯ (13), ಭುವನೇಶ್ವರ್ (12) ಪ್ರಮುಖ ಅಸ್ತ್ರವೆನಿಸಿದ್ದಾರೆ.
ಕೊನೇ ಹಣಾಹಣಿ...
ಕಳೆದ ವರ್ಷ ಬೆಂಗಳೂರಿನಲ್ಲೇ ಆರ್ಸಿಬಿ&ಸಿಎಸ್ಕೆ ಮುಖಾಮುಖಿ ಆದಾಗ ಉಭಯ ತಂಡಗಳಿಗೂ ಅದು ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಆಗ ಆರ್ಸಿಬಿ 27 ರನ್ಗಳಿಂದ ಗೆದ್ದು ಪ್ಲೇಆ್ಗೇರಿದ್ದರೆ, ಸಿಎಸ್ಕೆ ಹೊರಬಿದ್ದಿತ್ತು. ಆ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ 218 ರನ್ ಪೇರಿಸಿದ್ದರೆ, ಸಿಎಸ್ಕೆ 7 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಹಾಲಿ ವರ್ಷ ಚೆಪಾಕ್ನಲ್ಲಿ ಉಭಯ ತಂಡಗಳು ಮೊದಲ ಬಾರಿ ಮುಖಾಮುಖಿ ಆದಾಗ ಆರ್ಸಿಬಿ 50 ರನ್ಗಳಿಂದ ಗೆದ್ದು ಬೀಗಿತ್ತು. ಇದೀಗ ಆರ್ಸಿಬಿ, ಸಿಎಸ್ಕೆ ಎದುರು ಗೆಲುವಿನ ಹ್ಯಾಟ್ರಿಕ್ ಸಾಧಿಸುವ ಗುರಿಯಲ್ಲಿದ್ದರೆ, ಧೋನಿ ಪಡೆ ಸೇಡಿನ ತವಕದಲ್ಲಿದೆ.
ಮುಖಾಮುಖಿ: 34
ಆರ್ಸಿಬಿ: 12
ಸಿಎಸ್ಕೆ: 21
ರದ್ದು: 1
*ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಮಳೆ ಭೀತಿ...
ಉದ್ಯಾನನಗರಿಯಲ್ಲಿ ಶುಕ್ರವಾರ ಸಂಜೆ ಮಳೆಯಾಗಿದ್ದು, ಶನಿವಾರವೂ ಲು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಆರ್ಸಿಬಿ-ಸಿಎಸ್ಕೆ ಪಂದ್ಯ ಮಳೆ ಅಡಚಣೆ ಎದುರಿಸುವ ಭೀತಿ ಇದೆ. ಈ ಮುನ್ನ ಪಂಜಾಬ್ ವಿರುದ್ಧದ ಪಂದ್ಯ ಮಳೆ ಅಡಚಣೆಯಿಂದ ತಲಾ 14 ಓವರ್ಗಳಿಗೆ ಕಡಿತಗೊಂಡಿತ್ತು. ಸಿಎಸ್ಕೆ ನಡುವಿನ ಪಂದ್ಯವೂ ಸಂಪೂರ್ಣ ರದ್ದಾಗುವ ಸಾಧ್ಯತೆ ಕಡಿಮೆ. ಚಿನ್ನಸ್ವಾಮಿ ಸ್ಟೇಡಿಯಂನ ಮಳೆ ನೀರು ಇಂಗಿಸುವ ಸಬ್ಏರ್ ಸಿಸ್ಟಮ್ನಿಂದಾಗಿ ಪಂದ್ಯದಲ್ಲಿ ಸ್ಪಷ್ಟ ಲಿತಾಂಶ ನಿರೀಕ್ಷಿಸಬಹುದಾಗಿದೆ.
ಭವಿಷ್ಯದ ತಂಡ, ಸಿಎಸ್ಕೆ ಗುರಿ
ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಸತತ 2 ವರ್ಷ ಪ್ಲೇಆಫ್ಗೇರುವಲ್ಲಿ ವಿಫಲವಾಗಿರುವ ಸಿಎಸ್ಕೆ ಇನ್ನು ಭವಿಷ್ಯದ ತಂಡ ಕಟ್ಟುವತ್ತ ಗಮನಹರಿಸಲಿದೆ. ಈಗಾಗಲೆ ಶೇಕ್ ರಶೀದ್, ಆಯುಷ್ ಮಹಾತ್ರೆ, ಡಿವಾಲ್ಡ್ ಬ್ರೆವಿಸ್, ನೂರ್ ಅಹ್ಮದ್, ಅಂಶುಲ್ ಕಂಬೋಜ್ ಅವರಂಥ ಯುವ ಆಟಗಾರರಿಗೆ ಸಿಎಸ್ಕೆ ಹೆಚ್ಚು ಹೆಚ್ಚು ಅವಕಾಶ ನೀಡುತ್ತಿದೆ. ಮುಂಬರುವ ಪಂದ್ಯಗಳಲ್ಲಿ ತಂಡದ ಇತರ ಮೀಸಲು ಆಟಗಾರರೂ ಅವಕಾಶ ಪಡೆಯಬಹುದು.