ಬೆಂಗಳೂರು: ಮೇ 18ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಹಾಗೂ ಚೆನ್ನೈ ಸೂಪರ್ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಈಗಾಗಲೇ ಎರಡು ತಂಡಗಳು ಈಗಾಗಲೇ ಸಿದ್ಧತೆ ಪ್ರಾರಂಭಿಸಿದ್ದು, ಈ ಮ್ಯಾಚನ್ನು ಐಪಿಎಲ್ನ ಕ್ವಾರ್ಟರ್ ಫಿನಾಲೆ ಪಂದ್ಯ ಎಂದೇ ಬಿಂಬಿತವಾಗಿದೆ.
ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೆ 32 ಬಾರಿ ಮುಖಾಮುಖಿಯಾಗಿದ್ದು, ಆರ್ಸಿಬಿ 10 ಪಂದ್ಯಗಳಲ್ಲಿ ಗೆದ್ದರೆ, ಸಿಎಸ್ಕೆ 21 ಪಂದ್ಯಗಳಲ್ಲಿ ಗೆದ್ದಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ವಿಶೇಷ ಎಂದರೆ ಈ 32 ಪಂದ್ಯಗಳಲ್ಲಿ ಸಿಎಸ್ಕೆ ವಿರುದ್ಧ ಮೇ 18 ರಂದು 2 ಮ್ಯಾಚ್ಗಳು ನಡೆದಿದೆ. ಈ ಎರಡೂ ಪಂದ್ಯಗಳಲ್ಲೂ ಆರ್ಸಿಬಿ ಜಯಭೇರಿ ಬಾರಿಸಿದೆ.
ಈ ಲೆಕ್ಕಾಚಾರಗಳ ನಡುವೆ ಈ ಸಲ ಗೆಲುವು ಆರ್ಸಿಬಿ ತಂಡದ್ದೇ ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಇದಕ್ಕೆ ಕಾರಣ ಪಂದ್ಯ ನಡೆಯುತ್ತಿರುವುದು ಮೇ 18 ರಂದು. ಅಂದರೆ ಮೇ 18 ರಂದು ಆರ್ಸಿಬಿ ಈವರೆಗೆ 04 ಪಂದ್ಯಗಳನ್ನಾಡಿದೆ. 2013 ರ ಮೇ 18 ರಂದು ಸಿಎಸ್ಕೆ ವಿರುದ್ಧ ಆರ್ಸಿಬಿ ಜಯ ಸಾಧಿಸಿತ್ತು. ಇದಾದ ಬಳಿಕ 2014 ರಲ್ಲೂ ಮೇ 18 ರಂದು ಸಿಎಸ್ಕೆ ತಂಡಕ್ಕೆ ಸೋಲುಣಿಸುವಲ್ಲಿ ಆರ್ಸಿಬಿ ಯಶಸ್ವಿಯಾಗಿತ್ತು. ಇನ್ನು 2016 ರ ಮೇ 18 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಜಯ ಸಾಧಿಸಿತ್ತು. 2023 ರ ಮೇ 18 ರಂದು ಎಸ್ಆರ್ಹೆಚ್ ವಿರುದ್ಧ ಆರ್ಸಿಬಿ ಗೆದ್ದು ಬೀಗಿತ್ತು.
ಇದೀಗ ಮೇ 18ರಂದೇ ಆರ್ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ಹಿಂದೆ ಇದೇ ದಿನಾಂಕದಂದು ಸಿಎಸ್ಕೆಗೆ ಆರ್ಸಿಬಿ ಎರಡು ಬಾರಿ ಸೋಲುಣಿಸಿತ್ತು. ಹೀಗಾಗಿ ಈ ಬಾರಿಯೂ ಗೆಲುವು ನಮ್ಮದೇ ಮತ್ತು ನಾವು ಗಳು ಪ್ಲೇಆಫ್ ಪ್ರವೇಶಿಸುವುದು ಖಚಿತ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಮೇ 18ರಂದು ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ.
ವಿರಾಟ್ ಕೊಹ್ಲಿ ಮೇ 18 ರಂದು 4 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಸಿಎಸ್ಕೆ ವಿರುದ್ಧ 56* (29), 27 (29) ರನ್ ಕಲೆಹಾಕಿದರೆ, ಪಂಜಾಬ್ ಕಿಂಗ್ಸ್ ವಿರುದ್ಧ 113 (50) ರನ್ ಬಾರಿಸಿದ್ದರು. ಹಾಗೆಯೇ ಕಳೆದ ಸೀಸನ್ನಲ್ಲಿ ಎಸ್ಆರ್ಹೆಚ್ 100 (63) ರನ್ ಬಾರಿಸಿ ಅಬ್ಬರಿಸಿದ್ದರು. ಹೀಗಾಗಿ ಮೇ 18 ರಂದು ಮತ್ತೊಮ್ಮೆ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.
ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 18 ರನ್ಗಳ ಅಂತರ ಅಥವಾ ಚೇಸ್ ಮಾಡಿದರೆ 18.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಪ್ಲೇಆಫ್ ಪ್ರವೇಶಿಸಬಹುದಾಗಿದೆ. ಕಾಕತಾಳೀಯ ಎಂಬಂತೆ ಇಲ್ಲೂ ಕೂಡ 18ರ ಲೆಕ್ಕಾಚಾರ ಕಾಣಿಸಿಕೊಂಡಿದೆ. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವ ನಿರೀಕ್ಷೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ನಿರೀಕ್ಷೆಯೊಂದಿಗೆ ಆರ್ಸಿಬಿ ಈ ಬಾರಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆಯಾ ಕಾದು ನೋಡಬೇಕಿದೆ.