Ravindra Jadeja: ಪ್ರಸಕ್ತ ದೆಹಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕ ಶುಭಮನ್ ಗಿಲ್ ಶತಕದಾಟ ತೋರಿದರೆ, ಯಶಸ್ವಿ ಜೈಸ್ವಾಲ್ ದಿಗ್ಗಜರ ದಾಖಲೆಯನ್ನು ಸರಿಗಟ್ಟುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಮಧ್ಯೆ, ಬೌಲಿಂಗ್ನಲ್ಲಿ ತಂಡದ ಪರ ಮಿಂಚಿದ ರವೀಂದ್ರ ಜಡೇಜಾ, ಮೂರು ವಿಕೆಟ್ಗಳನ್ನು ಕಬಳಿಸಿದರು. ಇದೇ ಸಮಯದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಡ್ಡು, ಟೆಸ್ಟ್ ನಾಯಕತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್ ಪ್ರವಾಸದ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಭಾರತ ತಂಡಕ್ಕೆ ನಾಯಕನಾಗಿರುವ ಶುಭಮನ್ ಗಿಲ್, ತಂಡವನ್ನು ಯಶಸ್ಸಿನತ್ತ ಮುನ್ನಡೆಸುತ್ತಿರುವುದು ಹಲವರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ಈ ತಂಡಕ್ಕೆ ಜಡೇಜಾರನ್ನು ಉಪನಾಯಕನಾಗಿ ಮಾಡಿರುವ ಬಿಸಿಸಿಐ, ಅವರಿಗೂ ದೊಡ್ಡ ಜವಾಬ್ದಾರಿಯನ್ನು ಹಸ್ತಾಂತರಿಸಿದೆ. ಈ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಡ್ಡು, ಈ ಹಿಂದೆಯೇ ನಾಯಕತ್ವಕ್ಕೆ ಸಂಬಂಧಿಸಿದಂತೆ ನಾನು ಹೇಳಿಕೆ ನೀಡಿದ್ದೇನೆ. ಇದೇ ಪ್ರಶ್ನೆಯನ್ನು ಎಷ್ಟು ಸಲ ಕೇಳ್ತೀರಿ ಎಂದು ಗರಂ ಆದರು.
ನೀವು ಎಷ್ಟೇ ಸಲ ಈ ಪ್ರಶ್ನೆ ಕೇಳಿದ್ರು ಇದಕ್ಕೆ ನನ್ನ ಉತ್ತರ ಒಂದೇ. ಇದರಲ್ಲಿ ಬದಲಾವಣೆ ಇಲ್ಲ. ನನಗೆ ತಂಡದ ಕ್ಯಾಪ್ಟನ್ ಆಗುವ ಬಯಕೆಯಿಲ್ಲ. ಈ ಹಿಂದೆ ಒಂದು ಅವಕಾಶ ಬೇಕು ಎಂದೆನಿಸಿತ್ತು. ಆದರೆ, ಈಗ ಅದ್ಯಾವುದೂ ಇಲ್ಲ. ಸದ್ಯ ನನ್ನ ತಲೆಯಲ್ಲಿ, ಮನದಲ್ಲಿ ಇರುವುದು ಒಂದೇ ಧ್ಯೇಯ. ಅದು ಆದಷ್ಟು ಹೆಚ್ಚು ಸಮಯ ಭಾರತ ತಂಡವನ್ನು ಪ್ರತಿನಿಧಿಸುವುದು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡುವುದೇ ನನ್ನ ಗುರಿ. ಈ ನಾಯಕ ಅಥವಾ ಉಪನಾಯಕನ ಜವಾಬ್ದಾರಿಗಳ ಮೇಲೆ ಯಾವುದೇ ಆಸಕ್ತಿಯಿಲ್ಲ" ಎಂದಿದ್ದಾರೆ.
ಆಸೀಸ್ ವಿರುದ್ಧದ ಏಕದಿನ ಸರಣಿಯಿಂದ ತಮ್ಮ ಹೆಸರನ್ನು ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಜಡೇಜಾ, "ನನಗೆ ಏಕದಿನ ಪಂದ್ಯಗಳನ್ನು ಆಡುವ ಆಸೆಯಿದೆ. ಆದರೆ, ಈ ನಿರ್ಧಾರ ನನ್ನ ಕೈಯಲ್ಲಿ ಇಲ್ಲ. ಅಂತಿಮವಾಗಿ, ನನ್ನನ್ನು ಆಡಿಸುವುದು, ಬಿಡುವುದು ಎಲ್ಲವೂ ಟೀಮ್ ಮ್ಯಾನೇಜ್ಮೆಂಟ್ಗೆ ಬಿಟ್ಟದ್ದು. ಆಸ್ಟ್ರೇಲಿಯಾ ಸರಣಿಗೆ ನನ್ನ ಹೆಸರನ್ನು ಪರಿಗಣಿಸದೆ ಇದ್ದಾಗ ನನಗೇನು ಆಶ್ಚರ್ಯ ಅನಿಸಲಿಲ್ಲ. ತಂಡಗಳು ಪ್ರಕಟವಾದ ಬಳಿಕವೇ ನನಗೂ ಈ ವಿಷಯ ಗೊತ್ತಾಗಿದ್ದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).