ಕ್ರೀಡೆ

ಜಡ್ಡು-ಸುಂದರ್​ ದಾಳಿಗೆ ನಲುಗಿದ ಕಿವೀಸ್​; ಐದು ವಿಕೆಟ್​ ಪಡೆಯುವ ಮೂಲಕ ವಿಶೇಷ ದಾಖಲೆ ಬರೆದ Ravindra Jadeja

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್​ ನಡುವಿನ ಟೆಸ್ಟ್​ ಸರಣಿಯ ಅಂತಿಮ ಪಂದ್ಯದಲ್ಲಿ ಪ್ರವಾಸಿ ತಂಡವನ್ನು 235 ರನ್​ಗಳಿಗೆ ಆಲೌಟ್​ ಮಾಡಿದ್ದು, ಆತಿಥೇಯರು ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಕೊಂಡ ನ್ಯೂಜಿಲೆಂಡ್​ ತಂಡವು ಡೆರಿಲ್​ ಮಿಚೆಲ್​ (82 ರನ್​, 129 ಎಸೆತ, 3 ಬೌಂಡರಿ, 3 ಸಿಕ್ಸರ್​), ವಿಲ್​ ಯಂಗ್​ (71 ರನ್​, 138 ಎಸೆತ, 4 ಬೌಂಡರಿ, 2 ಸಿಕ್ಸರ್​) ಅರ್ಧಶತಕಗಳ ಫಲವಾಗಿ 65.4 ಓವರ್​ಗಳಲ್ಲಿ 235 ರನ್​ಗಳಿಗೆ ಆಲೌಟ್​ ಆಯಿತು.

ಭಾರತದ ಪರ ರವೀಂದ್ರ ಜಡೇಜಾ (Ravindra Jadeja) (22-1-65-5), ವಾಷಿಂಗ್ಟನ್​ ಸುಂದರ್​ (18.4-2-81-4), ಆಕಾಶ್​ ದೀಪ್​ (5-0-22-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ. ನ್ಯೂಜಿಲೆಂಡ್​ ವಿರುದ್ಧ ಐದು ವಿಕೆಟ್​ ಪಡೆಯುವ ಮೂಲಕ ರವೀಂದ್ರ ಜಡೇಜಾ (Ravindra Jadeja) ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ  ಟಾಪ್​ ಫೈವ್​ಗೆ ಲಗ್ಗೆ ಇಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ (Ravindra Jadeja) ಈವರೆಗೆ 312 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಇದಕ್ಕೂ ಮೊದಲು ಈ ಸಾಧನೆ ಜಹೀರ್ ಖಾನ್ (311) ಮತ್ತು ಇಶಾಂತ್ ಶರ್ಮಾ (311) ಹೆಸರಿನಲ್ಲಿತ್ತು. ಇದೀಗ ರವೀಂದ್ರ ಜಡೇಜಾ (Ravindra Jadeja) ಈ ದಾಖಲೆಯನ್ನು ಮುರಿದು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ (619) ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ . ರವಿಚಂದ್ರನ್ ಅಶ್ವಿನ್ (533*), ಕಪಿಲ್ ದೇವ್ (434) ಮತ್ತು ಹರ್ಭಜನ್​ ಸಿಂಗ್​ (417) ಇದ್ದಾರೆ.