ಕ್ರೀಡೆ

ಇದೇ ಕೊನೆಯ ಬಾರಿ ಎಂದು ಭಾವಿಸುತ್ತೇನೆ; ಶತಕವೀರ Nitish Reddy ಕುರಿತು ಅಚ್ಚರಿಯ ಹೇಳಿಕೆ ನೀಡಿದ ಟೀಮ್​ ಇಂಡಿಯಾ ಮಾಜಿ ಕೋಚ್

ಮೆಲ್ಬೋರ್ನ್​: ಇಲ್ಲಿನ ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡಿನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು ನಿತೀಶ್​ ರೆಡ್ಡಿ (Nitish Reddy) ಶತಕದ ಬಲದಿಂದ ಮೊದಲ ಇನ್ನಿಂಗ್ಸ್​ನಲ್ಲಿ 369 ರನ್​ಗಳಿಗೆ ಆಲೌಟ್​ ಆಗಿದ್ದು, 105ರನ್​ಗಳ ಹಿನ್ನಡೆಯನ್ನು ಅನುಭವಿಸಿದೆ.

ಇನ್ನೂ ತಂಡದ ಪರ ಅವಶ್ಯಕ ಸನ್ನಿವೇಶದಲ್ಲಿ ಶತಕ ಬಾರಿಸುವ ಮೂಲಕ ಆಸರೆಯಾಗಿರುವ ನಿತೀಶ್​ ರೆಡ್ಡಿ (Nitish Reddy) (114 ರನ್​, 189 ಎಸೆತ, 11 ಬೌಂಡರಿ, 1 ಸಿಕ್ಸರ್​) ಬಗ್ಗೆ ಮಾಜಿ ಹಾಗೂ ಹಾಲಿ ಆಟಗಾರರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದು, ಟೀಮ್​ ಇಂಡಿಯಾವನ್ನು ಫಾಲೋ ಆನ್ ಜೊತೆಗೆ ಸೋಲಿನ ಭೀತಿಯಿಂದಲೂ ಪಾರಾ ಮಾಡುವಲ್ಲಿ ನಿತೀಶ್​ ಪ್ರಮುಖ ಪಾತ್ರ ವಹಿಸಿದ್ದಾರೆ. ನಿತೀಶ್​ ರೆಡ್ಡಿಗೆ ಬ್ಯಾಟಿಂಗ್​ ಕ್ರಮಾಂಕದಲ್ಲಿ ಬಡ್ತಿ ನೀಡುವಂತೆ ಸಲಹೆ ಕೂಡ ಕೇಳಿ ಬಂದಿದ್ದು, ಈ ಬಗ್ಗೆ ಟೀಮ್​ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ (Ravi Shastri) ಮಾತನಾಡಿದ್ದಾರೆ.

ಜನವರಿ 03ರಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಅಂತಿಮ ಟೆಸ್ಟ್​ ಪಂದ್ಯದಲ್ಲಿ ನಿತೀಶ್​ ರೆಡ್ಡಿಗೆ (Nitish Reddy) ಬ್ಯಾಟಿಂಗ್​ ಕ್ರಮಾಂಕದಲ್ಲಿ ಬಡ್ತಿ ನೀಡುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಆತ ಬ್ಯಾಟಿಂಗ್​ ಮಾಡಿದ ಶೈಲಿ ನೋಡಿದರೆ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಇದೇ ಕೊನೆಯ ಬಾರಿ ಎಂದು ಭಾವಿಸುತ್ತೇನೆ. ಬ್ಯಾಟಿಂಗ್​ ಕ್ರಮಾಂಕದಲ್ಲಿ ಸಮತೋಲನ ಇರಬೇಕೆಂದರೆ 5 ಅಥವಾ 6ನೇ ಕ್ರಮಾಂಕದಲ್ಲಿ ಆತನನ್ನು ಕಣಕ್ಕಿಳಿಸುವುದು ಸೂಕ್ತ ಎಂದು ಭಾವಿಸುತ್ತೇನೆ.

ಆತ ಆಯ್ಕೆಗಾರರಿಗೆ ಮತ್ತು ಮ್ಯಾನೇಜ್​ಮೆಂಟ್​ಗೆ ತನ್ನ ಆಟದ ಮೂಲಕ ಯಾವ ರೀತಿಯ ವಿಶ್ವಾಸವನ್ನು ನೀಡಿದ್ದಾನೆ ಎಂಬುದು ವಿಶೇಷವಾಗಿ ಹೇಳಬೇಕಾಗಿಲ್ಲ. ನನ್ನ ಪ್ರಕಾರ ಟೀಮ್​ ಇಂಡಿಯಾವು ಸಿಡ್ನಿ ಟೆಸ್ಟ್​​ನಲ್ಲಿ ನಿತೀಶ್​ನನ್ನು 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಬೇಕು ಮತ್ತು ಐದು ಬೌಲರ್​ಗಳೊಂದಿಗೆ ಕಣಕ್ಕಿಳಿಯಬೇಕು ಎಂದು ಟೀಮ್​ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.