ನವದೆಹಲಿ: ಕೆಲವು ವರ್ಷಗಳ ಹಿಂದಿನವರೆಗೂ ಅಫ್ಘಾನಿಸ್ತಾನ ತಂಡವನ್ನು ಎಲ್ಲರೂ ಕ್ರಿಕೆಟ್ ಶಿಶುವಿನಂತೆ ನೋಡುತ್ತಿದ್ದರು. ಅದರ ಪ್ರದರ್ಶನವೂ ಕೂಡ ಅಷ್ಟೇ ಕಳಪೆಯಾಗಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಆಫ್ಗಾನ್ ಇಂದು ಅಪಾಯಕಾರಿ ತಂಡವಾಗಿದೆ. ರಶೀದ್ ಖಾನ್, ಮೊಹಮ್ಮದ್ ನಬಿ, ರೆಹಮಾನುಲ್ಲಾ ಗುರ್ಬಾಜ್, ಒಮರ್ಜಾಯ್ ಅವರಂತಹ ಆಟಗಾರರು ವಿಶ್ವ ದರ್ಜೆಯ ಗುಣಮಟ್ಟವನ್ನು ಹೊಂದಿದ್ದಾರೆ. ಇದಕ್ಕಾಗಿ ಸಾಕಷ್ಟು ಶ್ರಮ ಸಹ ಪಟ್ಟಿದ್ದಾರೆ. ಪ್ರಪಂಚದಾದ್ಯಂತ ಸಣ್ಣ ಲೀಗ್‌ಗಳಲ್ಲಿ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಅಫ್ಘಾನ್ ತಂಡ ಇಂದು ಬಲಿಷ್ಠವಾಗಿದೆ. ಕಳೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾದಂತಹ ದೊಡ್ಡ ತಂಡಗಳಿಗೆ ಆಫ್ಘಾನ್ ಆಘಾತ ನೀಡಿತ್ತು. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲೂ ಅದೇ ಹುಮ್ಮಸ್ಸು ಆಫ್ಗಾನ್ ತಂಡದಲ್ಲಿ ಮುಂದುವರಿದಿದೆ.
ಅಫ್ಘಾನಿಸ್ತಾನ ಕಿರು ವಿಶ್ವಕಪ್ನಲ್ಲಿ ಬ್ಯಾಕ್-ಟು-ಬ್ಯಾಕ್ ವಿಜಯಗಳೊಂದಿಗೆ ಸೂಪರ್-8 ಅನ್ನು ಪ್ರವೇಶಿಸಿದೆ. ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಟ್ರೋಫಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾದ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಆಫ್ಗಾನ್ ಪಡೆ ಸೋಲಿಸಿದೆ. ಆದರೆ, ಅಂತಿಮ ಲೀಗ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಎದುರು ಸೋತಿತ್ತು. ಈ ಒಂದು ಪಂದ್ಯವನ್ನು ಹೊರತುಪಡಿಸಿದರೆ, ಈ ಮೆಗಾ ಟೂರ್ನಿಯಲ್ಲಿ ಆಫ್ಗಾನ್ನ ಶಕ್ತಿ ಕುಂದಿಲ್ಲ.
ಗುಣಮಟ್ಟದ ಸ್ಪಿನ್ ಬೌಲಿಂಗ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ರಶೀದ್ ಖಾನ್, ಎದುರಾಳಿ ತಂಡಗಳನ್ನು ತಲ್ಲಣಗೊಳಿಸುತ್ತಿದ್ದಾರೆ. ಸೂಪರ್ ಬ್ಯಾಟಲ್‌ನ ಭಾಗವಾಗಿ ತಂಡವು ಮೊದಲ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದ ನಾಯಕ ರಶೀದ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರನ್ನು ಹೊಗಳಿದ್ದಾರೆ.
ರೋಹಿತ್ ಓರ್ವ ಅದ್ಭುತ ಬ್ಯಾಟ್ಸ್‌ಮನ್ ಎಂದು ಹೊಗಳಿದ ರಶೀದ್ ಖಾನ್, ಹಿಟ್‌ಮ್ಯಾನ್ ಅವರ ಪುಲ್ ಶಾಟ್ಗೆ ನಾನು ಅಭಿಮಾನಿ ಎಂದರು. ಆ ಪುಲ್ ಶಾಟ್ ವಿಶ್ವದಲ್ಲೇ ಬೆಸ್ಟ್ ಎಂದು ರೋಹಿತ್ರನ್ನು ಕೊಂಡಾಡಿದರು. ರೋಹಿತ್ ರೀತಿ ಆಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸೋಲಿನ ಬಗ್ಗೆಯೂ ಮಾತನಾಡಿದ ರಶೀದ್, ಈ ಪಂದ್ಯದಲ್ಲಿ ವಿಂಡೀಸ್ ಅಮೋಘವಾಗಿ ಆಡಿತು. ಅದರಲ್ಲೂ ಪವರ್ ಪ್ಲೇನಲ್ಲಿ ಉತ್ತಮ ಆರಂಭ ಸಿಕ್ಕಿತು. ಈ ಪಂದ್ಯದಲ್ಲಿ ಸೋತಿರುವುದು ನೋವಿನ ಸಂಗತಿಯಾದರೂ ಇದರಿಂದ ಸಾಕಷ್ಟು ಕಲಿತಿದ್ದೇನೆ ಎಂದರು. ಆದರೆ ನಾವು ಸೂಪರ್-8ಗೆ ಅರ್ಹತೆ ಪಡೆದಿದ್ದೇವೆ ಎಂದು ಖುಷಿ ವ್ಯಕ್ತಪಡಿಸಿದರು. (ಏಜೆನ್ಸೀಸ್)