ಲಖನೌ: ವಿಕೆಟ್ ಕೀಪರ್&ಎಡಗೈ ಬ್ಯಾಟರ್ ಕೃಷ್ಣನ್ ಲಕ್ಷ್ಮಣನ್ ಶ್ರೀಜಿತ್ (110 ರನ್, 153 ಎಸೆತ, 12 ಬೌಂಡರಿ) ಪದಾರ್ಪಣೆಯ ಪಂದ್ಯದಲ್ಲೇ ಶತಕ ಸಿಡಿಸಿದ ಸಾಧನೆಯ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಉತ್ತರ ಪ್ರದೇಶ ಎದುರು ಭಾರಿ ಮುನ್ನಡೆ ಸಾಧಿಸಿದೆ. ಆದರೆ ಉತ್ತರ ಪ್ರದೇಶ ಎರಡನೇ ಇನಿಂಗ್ಸ್ನಲ್ಲಿ ಎಚ್ಚರಿಕೆಯ ಆರಂಭ ಕಂಡಿರುವುದರಿಂದ ರಾಜ್ಯದ ಗೆಲುವಿಗೆ ಮತ್ತೊಮ್ಮೆ ಬೌಲರ್ಗಳ ಬಿಗಿ ದಾಳಿಯೂ ಅಗತ್ಯವಾಗಿದೆ.
ಏಕನಾ ಸ್ಟೇಡಿಯಂನಲ್ಲಿ ಗುರುವಾರ 5 ವಿಕೆಟ್ಗೆ 127 ರನ್ಗಳಿಂದ 2ನೇ ದಿನದಾಟ ಆರಂಭಿಸಿದ ಕರ್ನಾಟಕ ತಂಡ, 275 ರನ್ ಪೇರಿಸುವ ಮೂಲಕ ಮೊದಲ ಇನಿಂಗ್ಸ್ನಲ್ಲಿ 186 ರನ್ ಮುನ್ನಡೆ ಸಾಧಿಸಿತು. ಶ್ರೀಜಿತ್ಗೆ ಬಾಲಂಗೋಚಿಗಳಾದ ಯಶೋವರ್ಧನ್ ಪರಂತಾಪ್ (55) ಮತ್ತು ವಿದ್ಯಾಧರ್ ಪಾಟೀಲ್ (38) ಸಮರ್ಥ ಸಾಥ್ ನೀಡಿ ಮುನ್ನಡೆ ಹಿಗ್ಗಿಸಿದರು. ಪ್ರತಿಯಾಗಿ ಉತ್ತರ ಪ್ರದೇಶ ದಿನದಂತ್ಯಕ್ಕೆ 1 ವಿಕೆಟ್ಗೆ 78 ರನ್ ಗಳಿಸಿದ್ದು, ಇನ್ನೂ 108 ರನ್ ಹಿನ್ನಡೆಯಲ್ಲಿದೆ. ಮಾಧವ್ ಕೌಶಿಕ್ (33*) ಮತ್ತು ಆರ್ಯನ್ ಜುಯಲ್ (35*) ಮುರಿಯದ 2ನೇ ವಿಕೆಟ್ಗೆ 70 ರನ್ ಸೇರಿಸಿ ಕ್ರೀಸ್ನಲ್ಲಿದ್ದಾರೆ.
ಮುನ್ನಡೆ ವಿಸ್ತರಿಸಿದ ಶ್ರೀಜಿತ್-ಪರಂತಾಪ್
ಶ್ರೀಜಿತ್ ಮತ್ತು ಶ್ರೇಯಸ್ ಗೋಪಾಲ್ (15) ಬೆಳಗ್ಗೆ ಕ್ರಮವಾಗಿ 68 ಮತ್ತು 14 ರನ್ಗಳಿಂದ ಆಟ ಆರಂಭಿಸಿದರು. ಶ್ರೇಯಸ್ ದಿನದ 6ನೇ ಓವರ್ನಲ್ಲೇ ಔಟಾದರು. ಆಗ ಶ್ರೀಜಿತ್ ಅವರನ್ನು ಪದಾರ್ಪಣೆ ಪಂದ್ಯ ಆಡುತ್ತಿರುವ ಮತ್ತೋರ್ವ ಆಟಗಾರ ಯಶೋವರ್ಧನ್ ಪರಂತಾಪ್ ಕೂಡಿಕೊಂಡರು. ಇವರಿಬ್ಬರು 7ನೇ ವಿಕೆಟ್ಗೆ 61 ರನ್ ಕೂಡಿಸಿದರು. ಈ ವೇಳೆ 28 ವರ್ಷದ ಶ್ರೀಜಿತ್ 125 ಎಸೆತಗಳಲ್ಲೇ ಶತಕ ಪೂರೈಸಿದರು. ಈ ಮೂಲಕ ರಾಜ್ಯಕ್ಕೆ ಕಳೆದ ಕೆಲ ವರ್ಷಗಳಿಂದ ಕಾಡುತ್ತಿರುವ ಸಮರ್ಥ ವಿಕೆಟ್ ಕೀಪರ್&ಬ್ಯಾಟರ್ ಕೊರತೆಯನ್ನು ನೀಗಿಸುವ ಭರವಸೆ ಮೂಡಿಸಿದರು. ಶಿವಂ ಮಾವಿಗೆ ಶ್ರೀಜಿತ್ ವಿಕೆಟ್ ಒಪ್ಪಿಸಿದ ಬಳಿಕ ಪರಂತಾಪ್, ವಿದ್ಯಾಧರ್ ಪಾಟೀಲ್ ಜತೆಗೆ 8ನೇ ವಿಕೆಟ್ಗೆ 51 ರನ್ ಸೇರಿಸಿ ಮುನ್ನಡೆಯನ್ನು ವಿಸ್ತರಿಸಿದರು.
ಶ್ರೀಜಿತ್ ಕರ್ನಾಟಕ ಪರ ಪದಾರ್ಪಣೆಯ ಪಂದ್ಯದಲ್ಲೇ ಶತಕ ಸಿಡಿಸಿದ 10ನೇ ಬ್ಯಾಟರ್ ಎನಿಸಿದರು. ಯೋಗೇಂದ್ರ ಬಿ ಪಟೇಲ್, ಎಸ್. ಕೃಷ್ಣ, ಪಿಆರ್ ಅಶೋಕಾನಂದ್, ಮಧು ವಿಜಯ್, ಕೆ. ಶ್ರೀರಾಮ್, ಕೆ. ಗಣಪತಿ ರಾವ್, ಜಿಆರ್ ವಿಶ್ವನಾಥ್, ಬಿಆರ್ ಶರತ್ ಮತ್ತು ಬಿ. ರೋಲ್ಯಾಂಡ್ ಹಿಂದಿನ ಸಾಧಕರು.
ಉತ್ತರ ಪ್ರದೇಶ: 89 ಮತ್ತು 26 ಓವರ್ಗಳಲ್ಲಿ 1 ವಿಕೆಟ್ಗೆ 78 (ಮಾಧವ್ ಕೌಶಿಕ್ 33*, ಆರ್ಯನ್ ಜುಯಲ್ 35*, ವಿದ್ಯಾಧರ್ 25ಕ್ಕೆ 1), ಕರ್ನಾಟಕ: 79.5 ಓವರ್ಗಳಲ್ಲಿ 275 (ಶ್ರೀಜಿತ್ 110, ಶ್ರೇಯಸ್ 15, ಪರಂತಾಪ್ 55, ವಿದ್ಯಾಧರ್ 38, ಶಿವಂ ಮಾವಿ 96ಕ್ಕೆ 3, ಅಕಿಬ್ 53ಕ್ಕೆ 3, ವಿಪ್ರಜ್ 32ಕ್ಕೆ 2).