ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವಾಸುಕಿ ಕೌಶಿಕ್ (16ಕ್ಕೆ 4) ಸಹಿತ ತ್ರಿವಳಿ ವೇಗಿಗಳ ಮಾರಕ ದಾಳಿ ಮತ್ತು ಯುವ ಬ್ಯಾಟರ್ ಆರ್. ಸ್ಮರಣ್ (83*ರನ್, 100 ಎಸೆತ, 12 ಬೌಂಡರಿ, 1 ಸಿಕ್ಸರ್) ದಿಟ್ಟ ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ 2ನೇ ಚರಣದಲ್ಲಿ ಪ್ರವಾಸಿ ಪಂಜಾಬ್ ಎದುರು ಮೊದಲ ದಿನವೇ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಈ ಮೂಲಕ ವಿಜಯ್ ಹಜಾರೆ ಟ್ರೋಫಿಯ ಅಮೋಘ ಲಯವನ್ನು ಮುಂದುವರಿಸಿರುವ ಮಯಾಂಕ್ ಅಗವಾಲ್ ಪಡೆ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಿದೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ತನ್ನ 6ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಿರ್ಧಾರ ಅದ್ಭುತ ಯಶಸ್ಸು ತಂದುಕೊಟ್ಟಿತು. ನಾಯಕ ಶುಭಮಾನ್ ಗಿಲ್ (4) ಸಹಿತ ಪಂಜಾಬ್ ಬ್ಯಾಟರ್ಗಳು ರಾಜ್ಯದ ವೇಗಿಗಳ ದಾಳಿಗೆ ದಯನೀಯ ವೈಫಲ್ಯ ಅನುಭವಿಸಿದರು. ಇದರೊಂದಿಗೆ ಪಂಜಾಬ್ 29 ಓವರ್ಗಳಲ್ಲೇ ಕೇವಲ 55 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಕರ್ನಾಟಕ ತಂಡ ದಿನದಂತ್ಯಕ್ಕೆ 50 ಓವರ್ಗಳಲ್ಲಿ 4 ವಿಕೆಟ್ಗೆ 199 ರನ್ ಗಳಿಸಿದೆ. ಕರ್ನಾಟಕ ಸದ್ಯ 144 ರನ್ ಮುನ್ನಡೆಯಲ್ಲಿದೆ. ಶತಕದತ್ತ ಸಾಗಿರುವ ಸ್ಮರಣ್ ಜತೆಗೆ ಅಭಿನವ್ ಮನೋಹರ್ (1*) ಕ್ರೀಸ್ನಲ್ಲಿದ್ದಾರೆ.
ಸ್ಮರಣ್ ಆಸರೆ
ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲಿ ಶತಕ ಸಿಡಿಸಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದ ಆರ್. ಸ್ಮರಣ್ ರಣಜಿಯಲ್ಲೂ ಅದೇ ಾಮ್ರ್ ಮುಂದುವರಿಸಿದರು. ಆರಂಭಿಕರಾದ ಅನೀಶ್ ಕೆವಿ (33) ಮತ್ತು ನಾಯಕ ಮಯಾಂಕ್ ಅಗರ್ವಾಲ್ (20) ಮೊದಲ ವಿಕೆಟ್ಗೆ 55 ರನ್ ಸೇರಿಸಿ 4 ರನ್ ಅಂತರದಲ್ಲಿ ಔಟಾದರು. ನಂತರದಲ್ಲಿ ಸ್ಮರಣ್ ಇನಿಂಗ್ಸ್ಗೆ ಆಸರೆಯಾಗಿ ನಿಂತರು. ದೇವದತ್ ಪಡಿಕ್ಕಲ್ (27) ಜತೆಗೆ 3ನೇ ವಿಕೆಟ್ಗೆ 52 ರನ್ ಮತ್ತು ಕೆಎಲ್ ಶ್ರೀಜಿತ್ (26) ಜತೆಗೆ 4ನೇ ವಿಕೆಟ್ಗೆ 81 ರನ್ ಸೇರಿಸಿದ 21 ವರ್ಷದ ಸ್ಮರಣ್, ರಣಜಿಯಲ್ಲಿ ಚೊಚ್ಚಲ ಶತಕದ ನಿರೀೆಯಲ್ಲಿದ್ದಾರೆ. ರಣಜಿ ಮೊದಲ ಚರಣದಲ್ಲಿ ಆಡಿದ 5 ಪಂದ್ಯಗಳ 7 ಇನಿಂಗ್ಸ್ಗಳಲ್ಲಿ ಸ್ಮರಣ್ ಅರ್ಧಶತಕವೂ ಇಲ್ಲದೆ 145 ರನ್ ಮಾತ್ರ ಗಳಿಸಿದ್ದರು.
ವೇಗಿಗಳ ದಾಳಿಗೆ ಪಂಜಾಬ್ ತತ್ತರ
ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯ ಅದ್ಭುತ ಫಾರ್ಮ್ಅನ್ನು ರಣಜಿಯಲ್ಲೂ ಮುಂದುವರಿಸಿದ ವಾಸುಕಿ ಕೌಶಿಕ್ಗೆ ಎಡಗೈ ವೇಗಿ ಅಭಿಲಾಷ್ ಶೆಟ್ಟಿ (19ಕ್ಕೆ 3) ಮತ್ತು ಅನುಭವಿ ಪ್ರಸಿದ್ಧ ಕೃಷ್ಣ (11ಕ್ಕೆ 2) ಕೂಡ ಉತ್ತಮ ಬೆಂಬಲ ಒದಗಿಸಿದರು. ಇದರಿಂದಾಗಿ ಪಂಜಾಬ್ ಅರ್ಧಶತಕದ ಗಡಿ ದಾಟುವಷ್ಟರಲ್ಲೇ ಸುಸ್ತಾಯಿತು. ಅಭಿಲಾಷ್ ಎಸೆದ ಪಂದ್ಯದ 4ನೇ ಓವರ್ನಲ್ಲಿ ಶುಭಮಾನ್ ಗಿಲ್ (4) ಕೀಪರ್ ಶ್ರೀಜಿತ್ಗೆ ಕ್ಯಾಚ್ ನೀಡಿ ಔಟಾದರು. ನಂತರ ಪಂಜಾಬ್ 17 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಪ್ರವಾಸಿ ತಂಡದ ಇತರ ಪ್ರಮುಖ ಬ್ಯಾಟರ್ಗಳಾದ ಪ್ರಭ್ಸಿಮ್ರನ್ ಸಿಂಗ್ (6), ಅನ್ಮೋಲ್ಪ್ರೀತ್ ಸಿಂಗ್ (0), ರಮಣ್ದೀಪ್ ಸಿಂಗ್ (16) ರಾಜ್ಯದ ವೇಗಿಗಳ ದಾಳಿಗೆ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಶಕ್ತರಾಗಲಿಲ್ಲ. ರಮಣ್ದೀಪ್ ಮತ್ತು ಮಯಾಂಕ್ ಮಾರ್ಕಂಡೆ (12) 7ನೇ ವಿಕೆಟ್ಗೆ 18 ರನ್ ಸೇರಿಸಿದ್ದೇ ಪಂಜಾಬ್ ಇನಿಂಗ್ಸ್ನ ಅತಿದೊಡ್ಡ ಜತೆಯಾಟವೆನಿಸಿತು. ಪಂಜಾಬ್ನ ಕೊನೇ 4 ವಿಕೆಟ್ 9 ರನ್ ಅಂತರದಲ್ಲಿ ಉರುಳಿತು. ಇದರಿಂದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮೊದಲ ಇನಿಂಗ್ಸ್ನಲ್ಲಿ ಬೌಲಿಂಗ್ಗೆ ಇಳಿಯುವ ಅಗತ್ಯವೇ ಬರಲಿಲ್ಲ.
ಪಂಜಾಬ್: 29 ಓವರ್ಗಳಲ್ಲಿ 55 (ಪ್ರಭ್ಸಿಮ್ರನ್ 6, ಗಿಲ್ 4, ಅನ್ಮೋಲ್ಪ್ರೀತ್ 0, ರಮಣ್ದೀಪ್ 16, ಮಾರ್ಕಂಡೆ 12, ಕೌಶಿಕ್ 16ಕ್ಕೆ 4, ಅಭಿಲಾಷ್ 19ಕ್ಕೆ 3, ಪ್ರಸಿದ್ಧ ಕೃಷ್ಣ 11ಕ್ಕೆ 2, ಪರಂತಾಪ್ 3ಕ್ಕೆ 1), ಕರ್ನಾಟಕ: 50 ಓವರ್ಗಳಲ್ಲಿ 4 ವಿಕೆಟ್ಗೆ 199 (ಅನೀಶ್ 33, ಮಯಾಂಕ್ 20, ಪಡಿಕ್ಕಲ್ 27, ಸ್ಮರಣ್ 83, ಶ್ರೀಜಿತ್ 26, ಗುರ್ನೂರ್ 74ಕ್ಕೆ 1, ಆರಾಧ್ಯ ಶುಕ್ಲಾ 29ಕ್ಕೆ 1, ಸನ್ವೀರ್ 38ಕ್ಕೆ 1, ಮಾರ್ಕಂಡೆ 6ಕ್ಕೆ 1).
6: ಕರ್ನಾಟಕ ತಂಡ 6 ವರ್ಷಗಳ ಬಳಿಕ ನಾಲ್ವರು ವೇಗಿಗಳೊಂದಿಗೆ (ಕೌಶಿಕ್, ಪ್ರಸಿದ್ಧ, ಅಭಿಲಾಷ್, ಪರಂತಾಪ್) ಕಣಕ್ಕಿಳಿಯಿತು. ಈ ಮುನ್ನ 2018-19ರಲ್ಲಿ ಕೊನೆಯದಾಗಿ ವಿದರ್ಭ ಎದುರು ನಾಲ್ವರು ವೇಗಿಗಳನ್ನು (ವಿನಯ್, ಮಿಥುನ್, ಪ್ರಸಿದ್ಧ, ಬಿನ್ನಿ) ಆಡಿಸಿತ್ತು.
46: ಇದು ರಣಜಿ ಟ್ರೋಫಿ ಪಂಜಾಬ್ ತಂಡದ 2ನೇ ಕನಿಷ್ಠ ಮೊತ್ತವಾಗಿದೆ ಮತ್ತು ಕಳೆದ 46 ವರ್ಷಗಳಲ್ಲೇ ಅದರ ಕನಿಷ್ಠ ಮೊತ್ತವಾಗಿದೆ. 1978ರಲ್ಲಿ ಹರಿಯಾಣ ಎದುರು 42 ರನ್ಗಳಿಗೆ ಆಲೌಟ್ ಆಗಿದ್ದು ಅತ್ಯಂತ ಕನಿಷ್ಠವೆನಿಸಿದೆ.
55: ಹಾಲಿ 2024-25ರ ಸಾಲಿನ ರಣಜಿ ಟ್ರೋಫಿಯಲ್ಲಿ ಇದು ತಂಡವೊಂದರ ಕನಿಷ್ಠ ಮೊತ್ತವಾಗಿದೆ. ಜಮ್ಮು&ಕಾಶ್ಮೀರ ವಿರುದ್ಧ ಸರ್ವೀಸಸ್ 71 ರನ್ಗಳಿಗೆ ಆಲೌಟ್ ಆಗಿದ್ದು ಹಿಂದಿನ ಕನಿಷ್ಠ.
2: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯವೊಂದರಲ್ಲಿ ಇದು 2ನೇ ಕನಿಷ್ಠ ಮೊತ್ತವಾಗಿದೆ. 2015ರಲ್ಲಿ ಕರ್ನಾಟಕದ ಎದುರು ಮುಂಬೈ 44 ರನ್ಗಳಿಗೆ ಕುಸಿದಿದ್ದು ಕನಿಷ್ಠವಾಗಿದೆ.