ಕ್ರೀಡೆ

ರಣಜಿ ಟ್ರೋಫಿ: ಕೌಶಿಕ್​ ದಾಳಿಗೆ ಉತ್ತರ ಪ್ರದೇಶ ತತ್ತರ, ಮೊದಲ ದಿನವೇ ಮುನ್ನಡೆ ಸಾಧಿಸಿದ ಕರ್ನಾಟಕ

ಲಖನೌ: ವೇಗಿ ವಾಸುಕಿ ಕೌಶಿಕ್​ (20ಕ್ಕೆ 5) ಮಾರಕ ಬೌಲಿಂಗ್​ ದಾಳಿಯ ನೆರವಿನಿಂದ ಆತಿಥೇಯ ಉತ್ತರ ಪ್ರದೇಶ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ತನ್ನ 5ನೇ ಲೀಗ್​ ಪಂದ್ಯದಲ್ಲಿ ಮೊದಲ ದಿನವೇ ಇನಿಂಗ್ಸ್​ ಮುನ್ನಡೆ ಸಾಧಿಸಿ ಬೀಗಿದೆ. ಈ ಮೂಲಕ ನಾಕೌಟ್​ ಆಸೆ ಜೀವಂತವಿಡುವ ನಿಟ್ಟಿನಲ್ಲಿ ಕರ್ನಾಟಕ ದಿಟ್ಟ ಹೆಜ್ಜೆ ಇಟ್ಟಿದೆ.

ಏಕನಾ ಸ್ಟೇಡಿಯಂನಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಉತ್ತರ ಪ್ರದೇಶದ ಲೆಕ್ಕಾಚಾರ ತಲೆಕೆಳಗಾಯಿತು. ಕೌಶಿಕ್​ ಜತೆಗೆ ವಿದ್ಯಾಧರ್​ ಪಾಟೀಲ್​ (22ಕ್ಕೆ 3) ದಾಳಿಗೆ ಕುಸಿದ ಉತ್ತರ ಪ್ರದೇಶ 40.3 ಓವರ್​ಗಳಲ್ಲಿ ಕೇವಲ 89 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಕರ್ನಾಟಕ ತಂಡ ದಿನದಂತ್ಯಕ್ಕೆ 31 ಓವರ್​ಗಳಲ್ಲಿ 5 ವಿಕೆಟ್​ಗೆ 127 ರನ್​ ಗಳಿಸಿದ್ದು, ಸದ್ಯ 38 ರನ್​ ಮುನ್ನಡೆಯಲ್ಲಿದೆ. ಪದಾರ್ಪಣೆಯ ಪಂದ್ಯದಲ್ಲೇ ಬಿರುಸಿನ ಅರ್ಧಶತಕ ಬಾರಿಸಿ ಮಿಂಚಿರುವ ವಿಕೆಟ್​ ಕೀಪರ್​&ಬ್ಯಾಟರ್​ ಕೆಎಲ್​ ಶ್ರೀಜಿತ್​ (68*ರನ್​, 77 ಎಸೆತ, 9 ಬೌಂಡರಿ) ಜತೆಗೆ ಶ್ರೇಯಸ್​ ಗೋಪಾಲ್​ (14*) ಕ್ರೀಸ್​ನಲ್ಲಿದ್ದಾರೆ.

ಕೌಶಿಕ್​ ಕಡಿವಾಣ

ಕೌಶಿಕ್​&ವಿದ್ಯಾಧರ್​ ವೇಗದ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ 56 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡು ನಿರುತ್ತರವಾಗಿತ್ತು. ಆಗ ಸಮೀರ್​ ರಿಜ್ವಿ (25) ಆಸರೆಯಾದರೂ, ಮೊತ್ತವನ್ನು 100ರ ಗಡಿ ದಾಟಿಸಲು ರಾಜ್ಯದ ಬೌಲರ್​ಗಳು ಅವಕಾಶ ಬಿಟ್ಟುಕೊಡಲಿಲ್ಲ. ವೈಶಾಕ್​ ವಿಜಯ್​ಕುಮಾರ್​&ವಿದ್ವತ್​ ಕಾವೇರಪ್ಪ ಗೈರಿನಲ್ಲಿ ರಾಜ್ಯದ ವೇಗದ ಬೌಲಿಂಗ್​ ಪಡೆಗೆ ಬಲ ತುಂಬಿದ 32 ವರ್ಷದ ಕೌಶಿಕ್​ ಸತತ 2ನೇ ಪಂದ್ಯದಲ್ಲಿ 5 ವಿಕೆಟ್​ ಗೊಂಚಲು ಪಡೆದರು. ಒಟ್ಟಾರೆ 4ನೇ ಬಾರಿ 5 ವಿಕೆಟ್​ ಗೊಂಚಲು ಪಡೆದ ಸಾಧನೆ ಮಾಡಿದರು.

ಮಿಂಚಿದ ಶ್ರೀಜಿತ್​

ರಾಜ್ಯ ತಂಡದ ಪರ ಈಗಾಗಲೆ ಏಕದಿನ, ಟಿ20 ಪಂದ್ಯ ಆಡಿರುವ 28 ವರ್ಷದ ಕೆಎಲ್​ ಶ್ರೀಜಿತ್​ ಈ ಬಾರಿ ಪ್ರಥಮ ದರ್ಜೆ ಕ್ರಿಕೆಟ್​ಗೂ ಕಾಲಿಟ್ಟರು. ಆರಂಭಿಕ ನಿಕಿನ್​ ಜೋಸ್​ ಮತ್ತು ಆರ್​. ಸ್ಮರಣ್​ ಖಾತೆಯನ್ನೇ ತೆರೆಯದೆ ನಿರ್ಗಮಿಸಿದಾಗ ಕರ್ನಾಟಕ ಆರಂಭಿಕ ಆಘಾತ ಎದುರಿಸಿತು. ಆಗ ನಾಯಕ ಮಯಾಂಕ್​ ಅಗರ್ವಾಲ್​ (30) ಜತೆಗೂಡಿ ಶ್ರೀಜಿತ್​ ಆಸರೆಯಾದರು. ಇವರಿಬ್ಬರು 48 ರನ್​ ಸೇರಿಸಿದಾಗ ಮಯಾಂಕ್​ ಔಟಾದರೆ, ನಂತರ ಬಂದ ಮನೀಷ್​ ಪಾಂಡೆ (6) ಮತ್ತು ಅಭಿನವ್​ ಮನೋಹರ್​ (6) ಬೇಗನೆ ನಿರ್ಗಮಿಸಿದರು. ಮುನ್ನಡೆ ಪಡೆಯುವ ಮುನ್ನವೇ ಕರ್ನಾಟಕ 5 ಪ್ರಮುಖ ವಿಕೆಟ್​ ಕಳೆದುಕೊಂಡಿತು. ಆಗ ಶ್ರೀಜಿತ್​ ಮತ್ತು ಶ್ರೇಯಸ್​ ಗೋಪಾಲ್​ ಮುರಿಯದ 6ನೇ ವಿಕೆಟ್​ಗೆ 46 ಎಸೆತಗಳಲ್ಲೇ 43 ರನ್​ ಸೇರಿಸಿ ಅಮೂಲ್ಯ ಮುನ್ನಡೆ ಒದಗಿಸಿದರು.

ಶ್ರೀಜಿತ್​, ಪರಂತಾಪ್​ ಪದಾರ್ಪಣೆ

ಕರ್ನಾಟಕ ತಂಡ 3 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ವಿಕೆಟ್​ ಕೀಪರ್​&ಬ್ಯಾಟರ್​ ಕೆಎಲ್​ ಶ್ರೀಜಿತ್​ ಮತ್ತು ಯುವ ವೇಗಿ ಯಶೋವರ್ಧನ್​ ಪರಂತಾಪ್​ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರೆ, ಸುಜಯ್​ ಸಾತೇರಿ ಮತ್ತು ಅಭಿಲಾಷ್​ ಶೆಟ್ಟಿ ಸ್ಥಾನ ಬಿಟ್ಟುಕೊಟ್ಟರು. ಹಾರ್ದಿಕ್​ ರಾಜ್​ ಬದಲಿಗೆ ಮೊಹ್ಸಿನ್​ ಖಾನ್​ ಮರಳಿದರು.

ಉತ್ತರ ಪ್ರದೇಶ: 40.3 ಓವರ್​ಗಳಲ್ಲಿ 89 (ರಿತುರಾಜ್​ ಶರ್ಮ 12, ಸಮೀರ್​ ರಿಜ್ವಿ 25, ವಿ. ಕೌಶಿಕ್​ 20ಕ್ಕೆ 5, ವಿದ್ಯಾಧರ್​ 22ಕ್ಕೆ 3, ಯಶೋವರ್ಧನ್​ 19ಕ್ಕೆ 1, ಮೊಹ್ಸಿನ್​ ಖಾನ್​ 23ಕ್ಕೆ 1), ಕರ್ನಾಟಕ: 31 ಓವರ್​ಗಳಲ್ಲಿ 5 ವಿಕೆಟ್​ಗೆ 127 (ನಿಕಿನ್​ 0, ಮಯಾಂಕ್​ 30, ಸ್ಮರಣ್​ 0, ಕೆಎಲ್​ ಶ್ರೀಜಿತ್​ 68*, ಮನೀಷ್​ ಪಾಂಡೆ 6, ಅಭಿನವ್​ 6, ಶ್ರೇಯಸ್​ 14*, ಶಿವಂ ಮಾವಿ 52ಕ್ಕೆ 2, ಅಕಿಬ್​ ಖಾನ್​ 31ಕ್ಕೆ 2, ಸೌರಭ್​ 38ಕ್ಕೆ 1).