ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಳೆ, ಮಂದಬೆಳಕಿನ ಅಡಚಣೆ ಮತ್ತು ಪ್ರಮುಖ ಬ್ಯಾಟರ್ಗಳ ವೈಫಲ್ಯದ ನಡುವೆ ಮೊದಲ ಪಂದ್ಯದಲ್ಲಿ ಕೇವಲ ಒಂದು ಅಂಕಕ್ಕೆ ತೃಪ್ತಿಪಟ್ಟಿರುವ ಕರ್ನಾಟಕ ತಂಡ 90ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಕೇರಳ ತಂಡವನ್ನು ಎದುರಿಸಲು ಸಜ್ಜಾಗಿದೆ. ಬೆಂಗಳೂರು ಹೊರವಲಯದ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ಶುಕ್ರವಾರದಿಂದ ಪಂದ್ಯ ನಡೆಯಲಿದ್ದು, ಮೊದಲ ಗೆಲುವಿನ ಹಂಬಲದಲ್ಲಿರುವ ಮಯಾಂಕ್ ಅಗರ್ವಾಲ್ ಬಳಗಕ್ಕೆ ಮಳೆ ಅಡಚಣೆಯ ಭೀತಿಯೂ ಇದೆ.
ಇಂದೋರ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಿಕಿನ್ ಜೋಸ್ ಹೊರತಾಗಿ ರಾಜ್ಯ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳೆಲ್ಲ ಬೇಗನೆ ಔಟಾಗಿ ನಿರಾಸೆ ಮೂಡಿಸಿದ್ದರು. ತವರಿನ ವಾತಾವರಣದಲ್ಲಿ ಈಗ ನಾಯಕ ಮಯಾಂಕ್ ಅಗರ್ವಾಲ್ ಜತೆಗೆ ಉಪನಾಯಕ ಮನೀಷ್ ಪಾಂಡೆ, ದೇವದತ್ ಪಡಿಕ್ಕಲ್, ಆರ್. ಸ್ಮರಣ್ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಬೇಕಾಗಿದೆ. ಇನ್ನು ಕೇರಳ ತಂಡದಿಂದ ಮರಳಿರುವ ಶ್ರೇಯಸ್ ಗೋಪಾಲ್ ಉಪಯುಕ್ತ ಅರ್ಧಶತಕ ಸಿಡಿಸಿ ಬ್ಯಾಟಿಂಗ್ನಲ್ಲಿ ಮಿಂಚಿದ್ದರೂ, ಬೌಲಿಂಗ್ನಲ್ಲಿ 30 ಓವರ್ ಎಸೆದರೂ ಒಂದೂ ವಿಕೆಟ್ ಕಬಳಿಸಿರಲಿಲ್ಲ. ಇದರಿಂದ ರಾಜ್ಯ ತಂಡದ ಸ್ಪಿನ್ ವಿಭಾಗದ ದೌರ್ಬಲ್ಯ ಹಾಗೆಯೇ ಉಳಿದುಕೊಂಡಿದೆ. ಈ ಬಾರಿ ಕೇರಳ ವಿರುದ್ಧವಾದರೂ ಶ್ರೇಯಸ್ ಬೌಲಿಂಗ್ನಲ್ಲಿ ಕಮಾಲ್ ತೋರಿಸಬೇಕಿದೆ. ರಾಜ್ಯ ತಂಡ ಶ್ರೀ ಲಯಕ್ಕೆ ಮರಳಿ ಪೂರ್ಣ ಅಂಕ ಕಲೆಹಾಕದಿದ್ದರೆ ನಾಕೌಟ್ ಹಂತಕ್ಕೇರುವ ಹಾದಿ ಕಠಿಣವಾಗಲಿದೆ.
ಆರಂಭ: ಬೆಳಗ್ಗೆ 9.30
ಎಲ್ಲಿ: ಕೆಎಸ್ಸಿಎ ಮೈದಾನ, ಆಲೂರು
ಪ್ರಸಿದ್ಧ ಕೃಷ್ಣ ಗೈರು
ಮೊದಲ ಪಂದ್ಯದಲ್ಲಿ ಕೇವಲ 8 ಓವರ್ ಬೌಲಿಂಗ್ ಮಾಡಿ ಗಾಯದಿಂದಾಗಿ ಮೈದಾನ ತೊರೆದಿದ್ದ ವೇಗಿ ಪ್ರಸಿದ್ಧ ಕೃಷ್ಣ, ಮೀಸಲು ಆಟಗಾರರಾಗಿ ಭಾರತ ಟೆಸ್ಟ್ ತಂಡವನ್ನು ಕೂಡಿಕೊಂಡಿರುವುದರಿಂದ ರಾಜ್ಯ ತಂಡದ 2ನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಬೇರೆಯವರನ್ನು ಸೇರ್ಪಡೆಗೊಳಿಸದ ಕಾರಣ ರಾಜ್ಯ ತಂಡದ ಬಲ 16ರಿಂದ 15ಕ್ಕೆ ಇಳಿದಿದೆ. ಉಳಿದಂತೆ ತಂಡದಲ್ಲಿ ಬೇರಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ 2ನೇ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಸ್ಥಾವನ್ನು ಅಭಿಲಾಷ್ ಶೆಟ್ಟಿ ಅಥವಾ ವಿದ್ಯಾಧರ್ ಪಾಟೀಲ್ ತುಂಬುವ ಸಾಧ್ಯತೆ ಇದೆ.
ಕೇರಳಕ್ಕೆ ಸ್ಯಾಮ್ಸನ್ ಬಲ
ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದ ವಿಶ್ವಾಸದಲ್ಲಿರುವ ಕೇರಳ ತಂಡಕ್ಕೆ ಈ ಬಾರಿ ಅನುಭವಿ ವಿಕೆಟ್ ಕೀಪರ್&ಬ್ಯಾಟರ್ ಸಂಜು ಸ್ಯಾಮ್ಸನ್ ಸೇರ್ಪಡೆಯ ಬಲವಿದೆ. ಬಾಂಗ್ಲಾದೇಶ ವಿರುದ್ಧದ ಕೊನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಉತ್ತಮ ಲಯದಲ್ಲಿರುವ ಸ್ಯಾಮ್ಸನ್ ಆಗಮಿಸಿದ್ದರೂ, ಸಚಿನ್ ಬೇಬಿ ಕೇರಳ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ತಮಿಳುನಾಡಿನಿಂದ ವಲಸೆ ಬಂದಿರುವ ಬಾಬಾ ಅಪರಾಜಿತ್, ವಿದರ್ಭದಿಂದ ವಲಸೆ ಬಂದಿರುವ ಆದಿತ್ಯ ಸರ್ವಾಟೆ, ಮಧ್ಯಪ್ರದೇಶದಿಂದ ವಲಸೆ ಬಂದಿರುವ ಜಲಜ್ ಸಕ್ಸೇನಾ ಜತೆಗೆ ರೋಹನ್ ಕುನ್ನುಮಲ್, ವಿಷ್ಣು ವಿನೋದ್, ಬಸಿಲ್ ಥಂಪಿ ಮತ್ತು ಮೊಹಮದ್ ಅಜರುದ್ದೀನ್ ಕೇರಳ ತಂಡದ ಇತರ ಪ್ರಮುಖ ಆಟಗಾರರಾಗಿದ್ದಾರೆ.
ಮಳೆ ಭೀತಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಂತೆ ರಣಜಿ ಪಂದ್ಯವೂ ಮಳೆ ಭೀತಿಯಿಂದ ಮುಕ್ತವಾಗಿಲ್ಲ. ಕರ್ನಾಟಕ&ಕೇರಳ ಪಂದ್ಯದ ನಾಲ್ಕೂ ದಿನ ಮಳೆ ಅಡಚಣೆ ತರುವ ಭೀತಿ ಇದೆ. 2 ದಿನಗಳ ಕಾಲ ನಿರಂತರವಾಗಿ ಸುರಿದ ಜಡಿಮಳೆಯೂ ಪಿಚ್ ತಯಾರಿಗೆ ಹಿನ್ನಡೆ ತಂದಿದ್ದು, ಮೈದಾನವನ್ನು ಪಂದ್ಯಕ್ಕೆ ಸಜ್ಜುಗೊಳಿಸುವುದು ಕೂಡ ಸವಾಲೆನಿಸಿದೆ.