ಪಟನಾ: ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಕೇವಲ ಎರಡು ಅಂಕಗಳಿಗೆ ತೃಪ್ತಿಪಟ್ಟಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ 3ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಬಿಹಾರ ತಂಡವನ್ನು ಎದುರಿಸಲಿದೆ. ಶನಿವಾರದಿಂದ ಪಟನಾದ ಮೋಯಿನ್ ಉಲ್ ಹಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಕಾದಾಟದಲ್ಲಿ ಗೆಲುವು ಸಾಧಿಸುವುದು ಮಯಾಂಕ್ ಅಗರ್ವಾಲ್ ಬಳಗದ ಗುರಿಯಾಗಿದೆ.
ಕರ್ನಾಟಕ ತಂಡದ ಮೊದಲ ಎರಡೂ ಪಂದ್ಯಗಳಲ್ಲಿ ಮಳೆಯಿಂದಾಗಿ ಮೊದಲ ಇನಿಂಗ್ಸ್ ಪೂರ್ಣಗೊಂಡಿರಲಿಲ್ಲ. ಇದರಿಂದಾಗಿ ಎರಡೂ ಪಂದ್ಯಗಳಲ್ಲಿ ತಲಾ ಒಂದು ಅಂಕ ಗಳಿಸಿದ್ದು, ಸಿ ಗುಂಪಿನ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಹೀಗಾಗಿ ನಾಕೌಟ್ ಅವಕಾಶ ವೃದ್ಧಿಸಿಕೊಳ್ಳಲು ಕರ್ನಾಟಕ ತಂಡ ಈ ಪಂದ್ಯದಲ್ಲಿ ಪೂರ್ಣ 7 ಅಂಕ ಕಲೆಹಾಕುವ ಅಗತ್ಯವಿದೆ. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಭಾರತ ಎ ತಂಡದೊಂದಿಗೆ ಆಸ್ಟ್ರೆಲಿಯಾಗೆ ಪ್ರಯಾಣಿಸಿರುವುದರಿಂದ ಅಲಭ್ಯರಾಗಿದ್ದಾರೆ. ಆದರೆ ಇತ್ತೀಚೆಗೆ ಮಹಾರಾಜ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಅಭಿನವ್ ಮನೋಹರ್ ಸೇರ್ಪಡೆ ಬಲ ತುಂಬಿದೆ.
ಕಳೆದ ಕೇರಳ ವಿರುದ್ಧದ ಪಂದ್ಯದಲ್ಲಿ 50 ಓವರ್ ಬೌಲಿಂಗ್ ಮಾಡಿದ್ದ ಕರ್ನಾಟಕ, 3 ವಿಕೆಟ್ ಮಾತ್ರ ಗಳಿಸಿತ್ತು. ಇದು ರಾಜ್ಯದ ಬೌಲರ್ಗಳಿಂದ ಈ ಬಾರಿ ಸುಧಾರಿತ ನಿರ್ವಹಣೆ ನಿರೀಸುವಂತೆ ಮಾಡಿದೆ. ಪ್ರಮುಖವಾಗಿ ರಾಜ್ಯದ ಸ್ಪಿನ್ನರ್ಗಳು ಬಿಗಿ ದಾಳಿ ಸಂಟಿಸಬೇಕಾದ ಅಗತ್ಯವಿದೆ.
ಮತ್ತೊಂದೆಡೆ ಬಿಹಾರ ತಂಡ ಮೊದಲ ಪಂದ್ಯದಲ್ಲಿ ಹರಿಯಾಣ ಎದುರು ಇನಿಂಗ್ಸ್ ಸೋಲು ಕಂಡಿದ್ದರೆ, 2ನೇ ಪಂದ್ಯದಲ್ಲಿ ಬಂಗಾಳ ವಿರುದ್ಧ ಭಾರಿ ಮಳೆಯಿಂದಾಗಿ ಒಂದೂ ಎಸೆತ ಆಟವಾಡದೆ ಒಂದು ಅಂಕಕ್ಕೆ ತೃಪ್ತಿಪಟ್ಟಿತ್ತು. ವೀರ್ಪ್ರತಾಪ್ ಸಿಂಗ್ ಸಾರಥ್ಯದ ಬಿಹಾರ ತಂಡವೀಗ ಹಾಲಿ ಋತುವಿನಲ್ಲಿ ತವರಿನಲ್ಲಿ ಮೊದಲ ಪಂದ್ಯ ಆಡಲಿದೆ.
ಆರಂಭ: ಬೆಳಗ್ಗೆ 9.00
ಬಿಹಾರ ತಂಡದಲ್ಲಿ 13ರ ಬಾಲಕನಿಗೆ ಸ್ಥಾನ
ಇತ್ತೀಚೆಗೆ ಆಸ್ಟ್ರೆಲಿಯಾ ವಿರುದ್ಧದ 19 ವಯೋಮಿತಿ ಟೆಸ್ಟ್ ಸರಣಿಯಲ್ಲಿ ಬಿರುಸಿನ ಶತಕ ಸಿಡಿಸಿ ಮಿಂಚಿದ್ದ 13 ವರ್ಷದ ವೈಭವ್ ಸೂರ್ಯವಂಶಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಬಿಹಾರ ಪರ ಕಣಕ್ಕಿಳಿಯುವ ನಿರೀಕ್ಷೆ ಇದೆ. ಮೊದಲ 2 ಪಂದ್ಯಗಳಿಗೆ ಬಿಹಾರದ 20 ಆಟಗಾರರ ತಂಡದಲ್ಲಿರದ ವೈಭವ್ ಇದೀಗ ಪಟನಾ ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.
ಮತ್ತೆ ಮಳೆ ಭೀತಿ
ಬಂಗಾಳದಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿರುವ ದಾನಾ ಚಂಡಮಾರುತದಿಂದಾಗಿ ಬಿಹಾರದಲ್ಲೂ ಮಳೆಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಕರ್ನಾಟಕಕ್ಕೆ ಸತತ 3ನೇ ಪಂದ್ಯದಲ್ಲೂ ಮಳೆ ಕಾಡುವ ಭೀತಿ ಎದುರಾಗಿದೆ.