ಬೆಂಗಳೂರು: ಕರ್ನಾಟಕದ ಆಟಗಾರರು ವಲಸೆ ಹೋಗಿ ಆಡಿದಾಗ ವಿದರ್ಭ ತಂಡ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜತೆಗೆ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದೆ. ವಿದರ್ಭ ತಂಡ 2017-18 ಹಾಗೂ 2018-19ರಲ್ಲಿ ಪ್ರಶಸ್ತಿ ಗೆದ್ದಾಗ ಕನ್ನಡಿಗ ಗಣೇಶ್ ಸತೀಶ್ ಪ್ರಮುಖ ಪಾತ್ರವವಹಿಸಿದ್ದರು. ಈ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಕರುಣ್ ನಾಯರ್ ಕೊಡುಗೆ ಪ್ರಮುಖ ಪಾತ್ರ ವಹಿಸಿದೆ.
ಕಳೆದ ವರ್ಷ ವಿದರ್ಭ ತಂಡಕ್ಕೆ ವಲಸೆ ಹೋಗಿದ್ದ 33 ವರ್ಷದ ಕರುಣ್ ನಾಯರ್ ಪಾಲಿಗೆ ಇದು ವೈಯಕ್ತಿಕ ಮೂರನೇ ರಣಜಿ ಟ್ರೋಫಿ ಎನಿಸಿದೆ. ಇದಕ್ಕೂ ಮುನ್ನ 2013-14, 2014-15ರಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕ ತಂಡದ ಸದಸ್ಯರಾಗಿದ್ದರು. ಹಾಲಿ ಋತುವಿನಲ್ಲಿ ರನ್ ಹೊಳೆಯನ್ನೆ ಹರಿಸಿರುವ ಕರುಣ್ ನಾಯರ್, ಒಟ್ಟಾರೆ 1,897 ರನ್ ಕಲೆಹಾಕಿದ್ದಾರೆ. ರಣಜಿಯಲ್ಲಿ 4 ಶತಕ, 2 ಅರ್ಧಶತಕ ಸಹಿತ 860 ರನ್, ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಶತಕ, 1 ಅರ್ಧಶತಕ ಸೇರಿ 779 ರನ್ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 3 ಅರ್ಧಶತಕ ಸಹಿತ 255 ರನ್ ಬಾರಿಸಿದ್ದಾರೆ. ಇದರ ಜತೆಗೆ ಕೆಎಸ್ಸಿಎ ಮಹಾರಾಜ ಟ್ರೋಫಿಯಲ್ಲಿ ಮೈಸೂರ್ ವಾರಿಯರ್ಸ್ ತಂಡದ ನಾಯತ್ವವಹಿಸಿಕೊಂಡು ಪ್ರಶಸ್ತಿ ಗೆದ್ದುಕೊಟ್ಟಿದ್ದರು.
8 ಒಟ್ಟು ಕೋಟಿ ಬಹುಮಾನ
ಐದು ವರ್ಷಗಳ ಬಳಿಕ ಮರಳಿ ರಣಜಿ ಟ್ರೋಫಿ ಜಯಿಸಿರುವ ಚಾಂಪಿಯನ್ ವಿದರ್ಭ ತಂಡ ಬಿಸಿಸಿಐನಿಂದ 5 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದುಕೊಂಡಿತು. ಜತೆಗೆ ವಿದರ್ಭ ಕ್ರಿಕೆಟ್ ಸಂಸ್ಥೆ 3 ಕೋಟಿ ರೂ. ಬಹುಮಾನ ಘೋಷಿಸಿದೆ. ರನ್ನರ್ ಅಪ್ ಕೇರಳ ತಂಡ 3 ಕೋಟಿ ರೂ. ನಗದು ಬಹುಮಾನ ಮೊತ್ತ ಜೇಬಿಗಿಳಿಸಿಕೊಂಡಿತು.