ಬೆಂಗಳೂರು: ಪ್ರತಿಷ್ಠಿತ ಪ್ರಥಮ ದರ್ಜೆ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ 90ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ದುಲೀಪ್ ಟ್ರೋಫಿ, ಇರಾನಿ ಟ್ರೋಫಿ ಮೂಲಕ ದೇಶೀಯ ಕ್ರಿಕೆಟ್ ಹಬ್ಬ ಈಗಾಗಲೆ ಶುರುವಾಗಿದ್ದು, ಶುಕ್ರವಾರದಿಂದ ಇನ್ನಷ್ಟು ಮೆರುಗು ಪಡೆದುಕೊಳ್ಳಲಿದೆ. ಮುಂಬರುವ ದಿನಗಳಲ್ಲಿ ಭಾರತ ಹಲವು ಟೆಸ್ಟ್ ಪಂದ್ಯಗಳನ್ನು ಆಡಲಿರುವುದರಿಂದ ಯುವ ಕ್ರಿಕೆಟಿಗರಿಗೆ ಆಯ್ಕೆಗಾರರ ಗಮನಸೆಳೆಯಲು ಉತ್ತಮ ಅವಕಾಶವೆನಿಸಿದೆ. 42 ಬಾರಿಯ ಚಾಂಪಿಯನ್ ಮುಂಬೈ ಹಾಲಿ ಚಾಂಪಿಯನ್ ಆಗಿ ಅಭಿಯಾನ ಆರಂಭಿಸಲಿದ್ದರೆ, 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ 10 ವರ್ಷಗಳ ಬಳಿಕ ಪ್ರಶಸ್ತಿಗೆ ಮುತ್ತಿಕ್ಕುವ ತವಕದಲ್ಲಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿಗೆ ಪೂರ್ವಭಾವಿಯಾಗಿ ಭಾರತ ಎ ತಂಡ ಆಸ್ಟ್ರೆಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ರೆಡ್ಬಾಲ್ ತಂಡದಲ್ಲೂ ಸ್ಥಾನ ಸಂಪಾದಿಸಲು ಆಟಗಾರರು ಪ್ರಯತ್ನಿಸಬಹುದಾಗಿದೆ.
ಕಳೆದ ಆವೃತ್ತಿಯಲ್ಲಿ ಲೀಗ್ ಪಂದ್ಯಗಳ ನಡುವೆ ಕೇವಲ 3 ದಿನಗಳ ಬಿಡುವು ನೀಡಿದ್ದರಿಂದ ಗಾಯ ಮತ್ತು ಬಳಲಿಕೆಯ ಸಮಸ್ಯೆ ಕಾಡಿತ್ತು. ಈ ಸಂಬಂಧ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಸಹಿತ ಕೆಲ ಪ್ರಮುಖ ಆಟಗಾರರಿಂದ ದೂರುಗಳೂ ಬಂದಿದ್ದವು. ಇದರ ಹಿನ್ನೆಲೆಯಲ್ಲಿ ಈ ಬಾರಿ ಪಂದ್ಯಗಳ ನಡುವೆ ಕನಿಷ್ಠ 4 ದಿನಗಳ ಬಿಡುವು ನೀಡಲಾಗಿದೆ.
10 ವರ್ಷಗಳ ಬರ ನೀಗುವುದೇ ಕರ್ನಾಟಕ?
ಮಯಾಂಕ್ ಅಗರ್ವಾಲ್ ಸಾರಥ್ಯದ ಕರ್ನಾಟಕ ತಂಡ ಇಂದೋರ್ನಲ್ಲಿ ಆತಿಥೇಯ ಮಧ್ಯಪ್ರದೇಶ ವಿರುದ್ಧ ಅಭಿಯಾನ ಆರಂಭಿಸಲಿದ್ದು, 2014-15ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ತವಕದಲ್ಲಿದೆ. ರಾಜ್ಯ ತಂಡ ಅನುಭವಿ&ಯುವ ಆಟಗಾರರ ಉತ್ತಮ ಮಿಶ್ರಣದೊಂದಿಗೆ ಆತ್ಮವಿಶ್ವಾಸದಲ್ಲಿದೆ. ಆಲ್ರೌಂಡರ್ ಶ್ರೇಯಸ್ ಗೋಪಾಲ್ ಮತ್ತೆ ರಾಜ್ಯ ತಂಡಕ್ಕೆ ಮರಳಿರುವುದರಿಂದ ಈ ಬಾರಿ ಸ್ಪಿನ್ ವಿಭಾಗಕ್ಕೆ ಹೆಚ್ಚಿನ ಬಲ ಲಭಿಸಿದೆ.
ಮಧ್ಯಪ್ರದೇಶ ಜತೆಗೆ ಬಂಗಾಳ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣದಂಥ ಬಲಿಷ್ಠ ತಂಡಗಳನ್ನು ಒಳಗೊಂಡ ಗುಂಪಿನಲ್ಲಿ ರಾಜ್ಯ ತಂಡ ಇರುವುದರಿಂದ ನಾಕೌಟ್ ಪ್ರವೇಶಿಸಲು ಬಲಿಷ್ಠ ನಿರ್ವಹಣೆ ಅಗತ್ಯವೆನಿಸಿದೆ. ಮಾಜಿ ನಾಯಕ ಮನೀಷ್ ಪಾಂಡೆ ಈ ಬಾರಿ ಉಪನಾಯಕತ್ವ ಪಡೆದುಕೊಂಡಿದ್ದು, ಹೆಚ್ಚಿನ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ. ಆರ್ ಸಮರ್ಥ್ ಈ ಬಾರಿ ವಲಸೆ ಹೋಗಿರುವ ನಡುವೆ, ದೇವದತ್ ಪಡಿಕ್ಕಲ್, ನಿಕಿನ್ ಜೋಸ್ ಅವರಿಂದಲೂ ರಾಜ್ಯ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಕೊಡುಗೆ ಸಿಗಬೇಕಾಗಿದೆ. ಸಿಕೆ ನಾಯ್ಡು ಟ್ರೋಫಿಯಲ್ಲಿ ರಾಜ್ಯದ 23 ವಯೋಮಿತಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟ ಬಳಿಕ ಯೆರೆ ಗೌಡ ಈ ಬಾರಿ ಸೀನಿಯರ್ ತಂಡದ ಕೋಚ್ ಆಗಿ ಮರಳಿದ್ದಾರೆ.
ಕಳೆದ ಆವೃತ್ತಿಯಲ್ಲಿ ಸ್ಪಿನ್ನರ್ಗಳ ವೈಲ್ಯ ರಾಜ್ಯ ತಂಡಕ್ಕೆ ತೀವ್ರ ಹಿನ್ನಡೆ ತಂದಿತ್ತು. ಆದರೆ, ಕಳೆದ ಆವೃತ್ತಿಯಲ್ಲಿ ಕೇರಳಕ್ಕೆ ವಲಸೆ ಹೋಗಿದ್ದ 31 ವರ್ಷದ ಶ್ರೇಯಸ್ ಗೋಪಾಲ್ ಈ ಬಾರಿ ಮರಳಿರುವುದರಿಂದ ರಾಜ್ಯ ತಂಡದ ಸ್ಪಿನ್ ಬೌಲಿಂಗ್ ವಿಭಾಗ ಮತ್ತೆ ಬಲ ಪಡೆದುಕೊಂಡಿದೆ. ಕಳೆದ ಋತುವಿನಲ್ಲಿ 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ 30 ವಿಕೆಟ್ ಕಬಳಿಸುವ ಮೂಲಕ ಕರ್ನಾಟಕ ತಂಡದ ಪ್ರಶಸ್ತಿ ಗೆಲುವಿಗೆ ನೆರವಾಗಿದ್ದ 20 ವರ್ಷದ ಆಫ್-ಸ್ಪಿನ್ನರ್ ಮೊಹ್ಸಿನ್ ಖಾನ್ ಈ ಬಾರಿ ಸೀನಿಯರ್ ತಂಡಕ್ಕೆ ಪ್ರವೇಶ ಪಡೆದಿದ್ದಾರೆ. ಎಡಗೈ ಸ್ಪಿನ್ ದಾಳಿ ನಡೆಸುವ 18 ವರ್ಷದ ಆಲ್ರೌಂಡರ್ ಹಾರ್ದಿಕ್ ರಾಜ್ಯ ತಂಡದ 3ನೇ ಸ್ಪಿನ್ನರ್ ಆಗಿದ್ದಾರೆ. ಜತೆಗೆ ಐವರು ವೇಗಿಗಳು ತಂಡದಲ್ಲಿದ್ದಾರೆ. ಅವರೆಂದರೆ ಅನುಭವಿ ಪ್ರಸಿದ್ಧ ಕೃಷ್ಣ, ವೈಶಾಕ್, ವಿ. ಕೌಶಿಕ್, ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಮತ್ತು ಆಲ್ರೌಂಡರ್ ವಿದ್ಯಾಧರ್ ಪಾಟೀಲ್. ಹೀಗಾಗಿ ಈ ಸಲ ರಾಜ್ಯ ಬೌಲಿಂಗ್ ವಿಭಾಗ ಬಲಿಷ್ಠಗೊಂಡಿದೆ.
ಶುಭಂ ಶರ್ಮ ಸಾರಥ್ಯದ ಎದುರಾಳಿ ಮಧ್ಯಪ್ರದೇಶ ತಂಡ ರಜತ್ ಪಾಟೀದಾರ್, ಕುಮಾರ್ ಕಾರ್ತಿಕೇಯ, ಯಶ್ ದುಬೆ, ಆವೇಶ್ ಖಾನ್, ಕುಲ್ವಂತ್ ಕೆಜ್ರೋಲಿಯಾರಂಥ ಪ್ರಮುಖ ಆಟಗಾರರನ್ನು ಹೊಂದಿರುವುದರಿಂದ ಜಿದ್ದಾಜಿದ್ದಿನ ಪೈಪೋಟಿ ನಿರೀಸಲಾಗಿದೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಮನೀಷ್ ಪಾಂಡೆ (ಉಪನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಸ್ಮರಣ್ ಆರ್, ಶ್ರೇಯಸ್ ಗೋಪಾಲ್, ಸುಜಯ್ ಸಾತೆರಿ (ವಿ.ಕೀ), ಹಾರ್ದಿಕ್ ರಾಜ್, ವೈಶಾಕ್ ವಿಜಯ್ಕುಮಾರ್, ಪ್ರಸಿದ್ಧ ಕೃಷ್ಣ, ವಿ. ಕೌಶಿಕ್, ಲವನೀತ್ ಸಿಸೋಡಿಯಾ (ವಿ.ಕೀ), ಮೊಹ್ಸಿನ್ ಖಾನ್, ವಿದ್ಯಾಧರ್ ಪಾಟೀಲ್, ಕಿಶನ್ ಎಸ್. ಬಿದರೆ, ಅಭಿಲಾಷ್ ಶೆಟ್ಟಿ.
*ಆರಂಭ: ಬೆಳಗ್ಗೆ 9.30
*ನೇರಪ್ರಸಾರ: ಜಿಯೋಸಿನಿಮಾ
ಪ್ರಮುಖರು ಕಣಕ್ಕೆ
ರಾಷ್ಟ್ರೀಯ ತಂಡದಿಂದ ಹೊರಗಿರುವ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ಆಡುವುದು ಕಡ್ಡಾಯ ಎಂದು ಬಿಸಿಸಿಐ ಈಗಾಗಲೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಜತೆಗೆ ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ಮುಕೇಶ್ ಕುಮಾರ್, ರಜತ್ ಪಾಟೀದಾರ್, ಪೃಥ್ವಿ ಷಾ ಸಹಿತ ಪ್ರಮುಖ ಆಟಗಾರರು ರಣಜಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರರಂಥ ಅನುಭವಿಗಳು 36ನೇ ವಯಸ್ಸಿನಲ್ಲೂ ಪುನರಾಗಮನಕ್ಕೆ ಪ್ರಯತ್ನಿಸುವ ನಿರೀೆ ಇದೆ.
ಗುಂಪುಗಳು:
ಎ: ಮುಂಬೈ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರ, ಸರ್ವೀಸಸ್, ಒಡಿಶಾ, ಬರೋಡ, ತ್ರಿಪುರ, ಮೇಘಾಲಯ.
ಬಿ: ರಾಜಸ್ಥಾನ, ಗುಜರಾತ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಆಂಧ್ರ, ಹೈದರಾಬಾದ್, ವಿದರ್ಭ, ಪುದುಚೇರಿ.
ಸಿ: ಕರ್ನಾಟಕ, ಮಧ್ಯಪ್ರದೇಶ, ಕೇರಳ, ಬಿಹಾರ, ಹರಿಯಾಣ, ಬಂಗಾಳ, ಉತ್ತರ ಪ್ರದೇಶ, ಪಂಜಾಬ್.
ಡಿ: ದೆಹಲಿ, ಚಂಡೀಗಢ, ರೈಲ್ವೇಸ್, ಛತ್ತೀಸ್ಗಢ, ಜಾರ್ಖಂಡ್, ತಮಿಳುನಾಡು, ಅಸ್ಸಾಂ, ಸೌರಾಷ್ಟ್ರ.
ಪ್ಲೇಟ್: ಅರುಣಾಚಲ ಪ್ರದೇಶ, ಸಿಕ್ಕಿಂ, ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಗೋವಾ.
ಕರ್ನಾಟಕದ ಪಂದ್ಯಗಳು
ದಿನಾಂಕ: ಎದುರಾಳಿ (ಸ್ಥಳ)
ಅ.11-14: ಮಧ್ಯಪ್ರದೇಶ (ಇಂದೋರ್)
ಅ. 18-21: ಕೇರಳ (ಬೆಂಗಳೂರು&ಆಲೂರು)
ಅ.26-29: ಬಿಹಾರ (ಪಟನಾ)
ನ. 6-9: ಬಂಗಾಳ (ಬೆಂಗಳೂರು)
ನ.13-16: ಉತ್ತರ ಪ್ರದೇಶ (ಲಖನೌ)
ಜ. 23-26: ಪಂಜಾಬ್ (-)
ಜ. 30-ಫೆ.2: ಹರಿಯಾಣ (-)
ಎರಡು ಹಂತಗಳಲ್ಲಿ ಟೂರ್ನಿ
ರಣಜಿ ಟ್ರೋಫಿ ಟೂರ್ನಿಯನ್ನು ಈ ಬಾರಿ 2 ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಎಲ್ಲ ತಂಡಗಳೂ ನವೆಂಬರ್ 16ರವರೆಗೆ ತಲಾ 5 ಲೀಗ್ ಪಂದ್ಯಗಳನ್ನು ಆಡಲಿವೆ. ನಂತರದಲ್ಲಿ ಎರಡು ವೈಟ್ಬಾಲ್ ಕ್ರಿಕೆಟ್ ಟೂರ್ನಿಗಳು ಅಂದರೆ ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಟಿ20 (ನ. 23-ಡಿ.15) ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ (ಡಿ.21-ಜ.18) ಟೂರ್ನಿಗಳು ನಡೆಯಲಿವೆ. ನಂತರ ಜ.23ರಿಂದ ರಣಜಿಯ ಕೊನೇ 2 ಲೀಗ್ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 8ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ. ಫೆಬ್ರವರಿ 26ರಿಂದ ಮಾರ್ಚ್ 2ರವರೆಗೆ ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಹಾಲಿ ದೇಶೀಯ ಕ್ರಿಕೆಟ್ ಋತುವಿಗೆ ತೆರೆ ಬೀಳಲಿದೆ.
ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಭಾಗವಹಿಸುವ ಒಟ್ಟು 38 ತಂಡಗಳ ಪೈಕಿ ಎಲೈಟ್ ಗುಂಪಿನಲ್ಲಿರುವ 32 ತಂಡಗಳನ್ನು ತಲಾ 8ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಉಳಿದ 6 ತಂಡಗಳು ಪ್ಲೇಟ್ ಗುಂಪಿನಲ್ಲಿವೆ. ಎಲೈಟ್ ಗುಂಪಿನ ಅಗ್ರ 2 ತಂಡಗಳು ನೇರವಾಗಿ ಕ್ವಾರ್ಟರ್ಫೈನಲ್ಗೇರಲಿವೆ. ಪ್ಲೇಟ್ ಗುಂಪಿನ ಅಗ್ರ 2 ತಂಡಗಳು ಪ್ಲೇಟ್ ಫೈನಲ್ನಲ್ಲಿ ಆಡಲಿವೆ. ಇವೆರಡು ತಂಡಗಳು 2025-26ರ ಸಾಲಿನಲ್ಲಿ ಎಲೈಟ್ ಗುಂಪಿನಲ್ಲಿ ಆಡಲಿದ್ದರೆ, ಎಲೈಟ್ ಗುಂಪಿನ 2 ಕೊನೇ ಸ್ಥಾನಿ ತಂಡಗಳು ಮುಂದಿನ ಬಾರಿ ಪ್ಲೇಟ್ ಗುಂಪಿಗೆ ಹಿಂಬಡ್ತಿ ಪಡೆಯಲಿವೆ.
ವಿಜೇತರಿಗೆ 5 ಕೋಟಿ ರೂ. ಬಹುಮಾನ
ರಣಜಿ ಟ್ರೋಫಿಯ ವಿಜೇತ ತಂಡ 5 ಕೋಟಿ ರೂ. ಬಹುಮಾನ ಪಡೆಯಲಿದೆ. ರನ್ನರ್ಅಪ್ ತಂಡ 3 ಕೋಟಿ ರೂ. ಗಳಿಸಲಿದೆ. ಸೆಮಿೈನಲ್ನಲ್ಲಿ ಸೋಲುವ 2 ತಂಡಗಳು ತಲಾ 1 ಕೋಟಿ ರೂ. ಗಳಿಸಲಿವೆ. ಇನ್ನು ಟೂರ್ನಿಯಲ್ಲಿ 40ಕ್ಕಿಂತ ಹೆಚ್ಚು ಪಂದ್ಯ ಆಡಿರುವ ಅನುಭವಿ ಆಟಗಾರರು ಪ್ರತಿದಿನಕ್ಕೆ 60 ಸಾವಿರ ರೂಪಾಯಿ, 40ಕ್ಕಿಂತ ಕಡಿಮೆ&20ಕ್ಕಿಂತ ಅಧಿಕ ಪಂದ್ಯ ಆಡಿರುವ ಆಟಗಾರರು ಪ್ರತಿದಿನಕ್ಕೆ 50 ಸಾವಿರ ರೂ. ಮತ್ತು 20ಕ್ಕಿಂತ ಕಡಿಮೆ ಪಂದ್ಯ ಆಡಿರುವ ಆಟಗಾರರು ಪ್ರತಿದಿನಕ್ಕೆ 40 ಸಾವಿರ ರೂ. ವೇತನ ಪಡೆಯಲಿದ್ದಾರೆ.