ರಾಜ್ಕೋಟ್: ಕಳೆದ ಮೂರು ತಿಂಗಳಿನಿಂದ ಪ್ರತಿವಾರವೂ ದೇಶೀಯ ಕ್ರಿಕೆಟ್ ಪ್ರಿಯರ ಕುತೂಹಲ ಕರೆಳಿಸುತ್ತಿದ್ದ 86ನೇ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿ ಅಂತಿಮ ಸುತ್ತಿಗೆ ಬಂದು ನಿಂತಿದೆ. ಈ ಪ್ರತಿಷ್ಠಿತ ಹಣಾಹಣಿಗೆ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ಸನ್ನದ್ಧವಾಗಿದೆ.
ರಾಷ್ಟ್ರೀಯ ತಂಡಕ್ಕೆ ಉತ್ತಮ ಆಟಗಾರರನ್ನು ಕೊಡುಗೆ ನೀಡಿದರೂ ದೇಶೀಯ ಕ್ರಿಕೆಟ್ನಲ್ಲಿ ಪ್ರಭುತ್ವ ಸಾಧಿಸಲು ವಿಫಲವಾಗಿರುವ ಉಭಯ ತಂಡಗಳು ಟ್ರೋಫಿಗಾಗಿ ಹೋರಾಟ ನಡೆಸಲಿವೆ. ರಾಷ್ಟ್ರೀಯ ಟೆಸ್ಟ್ ತಂಡದ ಸದಸ್ಯರಾದ ಚೇತೇಶ್ವರ ಪೂಜಾರ ಹಾಗೂ ವೃದ್ಧಿಮಾನ್ ಸಾಹ ಕ್ರಮವಾಗಿ ಸೌರಾಷ್ಟ್ರ ಹಾಗೂ ಬಂಗಾಳ ಪರ ಕಣಕ್ಕಿಳಿಯುವ ಮೂಲಕ ಪಂದ್ಯದ ರೋಚಕತೆ ಹೆಚ್ಚಿಸಿದ್ದಾರೆ.
ತವರು ನೆಲದಲ್ಲೇ ಆಡುವ ಅವಕಾಶ ಗಿಟ್ಟಿಸಿಕೊಂಡಿರುವ ಸೌರಾಷ್ಟ್ರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯುತ್ತಿದೆ. ಸೌರಾಷ್ಟ್ರ ತಂಡ ಜೈದೇವ್ ಉನಾದ್ಕತ್, ಶೆಲ್ಡನ್ ಜಾಕ್ಸನ್, ಪೂಜಾರ, ಅರ್ಪಿತ್ ವಸವಾಡರಂಥ ಅನುಭವಿಗಳ ಬಲ ಹೊಂದಿದೆ. ಪೂಜಾರ-ಜಾಕ್ಸನ್ ಜೋಡಿ ಲೀಗ್ ಹಂತದಲ್ಲಿ ಕರ್ನಾಟಕದ ಎದುರು ರನ್ಹೊಳೆಯನ್ನೇ ಹರಿಸಿತ್ತು. ಈ ಜೋಡಿಯೇ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಅಸ್ತ್ರವಾಗಿದೆ. ಟೂರ್ನಿಯಲ್ಲಿ ಇದುವರೆಗೂ ಅತಿಹೆಚ್ಚು ವಿಕೆಟ್ ಕಬಳಿಸಿರುವ ನಾಯಕ ಉನಾದ್ಕತ್ಗೆ (65ವಿಕೆಟ್) ಲಯ ದಕ್ಕಿದ್ದಲ್ಲಿ ಎದುರಾಳಿ ತಂಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ನನಸಾಗುವುದೇ 3 ದಶಕದ ಕನಸು
13 ಬಾರಿ ಫೈನಲ್ ಪ್ರವೇಶಿಸಿದರೂ ಕೇವಲ 2 ಬಾರಿಗೆ ಪ್ರಶಸ್ತಿ ಗೆದ್ದಿರುವ ಬಂಗಾಳ ತಂಡ 13 ವರ್ಷಗಳ ಬಳಿಕ ಪ್ರಶಸ್ತಿ ಹಂತಕ್ಕೇರಿದೆ. ಬಲಿಷ್ಠ ಕರ್ನಾಟಕ ತಂಡವನ್ನು ಕೋಲ್ಕತದಲ್ಲಿ ಮಣಿಸಿ ಫೈನಲ್ಗೇರಿರುವ ಬಂಗಾಳ ತಂಡಕ್ಕೆ ವೇಗದ ಬೌಲರ್ಗಳೇ ಆಸರೆಯಾಗಿದ್ದಾರೆ. ತ್ರಿಮೂರ್ತಿಗಳಾದ ಇಶಾನ್ ಪೊರೆಲ್, ಮುಕೇಶ್ ಕುಮಾರ್ ಹಾಗೂ ಆಕಾಶ್ದೀಪ್ ಸೌರಾಷ್ಟ್ರ ತಂಡಕ್ಕೆ ಕಂಟಕವಾಗಬಲ್ಲರು. ಮೂರು ದಶಕಗಳಿಂದಲೂ ಮರೀಚಿಕೆಯಾಗಿರುವ ಪ್ರಶಸ್ತಿಗೆ ಮುತ್ತಿಕ್ಕುವ ಹಂಬಲದಲ್ಲಿದೆ.