ಪುಣೆ: ಗ್ಲೆನ್ ಮ್ಯಾಕ್ಸ್ವೆಲ್ ಅಜೇಯ ದ್ವಿಶತಕ ಸಾಧನೆಯ ಏಕಾಂಗಿ ಹೋರಾಟದ ಬಲದಿಂದ ಅಫ್ಘಾನಿಸ್ತಾನ ಎದುರು ಆಘಾತದಿಂದ ಪಾರಾಗಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿರುವ ಆಸ್ಟ್ರೆಲಿಯಾ ತಂಡ ತನ್ನ 9ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧವೂ ಗೆದ್ದು ಲಯ ಕಾಯ್ದುಕೊಳ್ಳುವ ಹುರುಪಿನಲ್ಲಿದೆ. ಬಾಂಗ್ಲಾಗೆ 2025ರ ಚಾಂಪಿಯನ್ಸ್ ಟ್ರೋಫಿ ಅರ್ಹತೆ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದಾಗಿದೆ.
ಐದು ಬಾರಿಯ ಚಾಂಪಿಯನ್ ಆಸ್ಟ್ರೆಲಿಯಾ ಆರಂಭಿಕ 2 ಪಂದ್ಯಗಳಲ್ಲಿ ಸೋತ ಬಳಿಕ ಸತತ 6 ಗೆಲುವಿನೊಂದಿಗೆ ಬೀಗುತ್ತಿದ್ದು, ಗೆಲುವಿನ ಓಟವನ್ನು 7ನೇ ಪಂದ್ಯಕ್ಕೂ ವಿಸ್ತರಿಸುವ ಮೂಲಕ ಸೆಮಿಫೈನಲ್ಗೆ ಮುನ್ನ ಲಯ ಕಾಯ್ದುಕೊಳ್ಳುವ ಉತ್ಸಾಹದಲ್ಲಿದೆ. ಆದರೂ ಬ್ಯಾಟಿಂಗ್ ವಿಭಾಗದ ಅಸ್ಥಿರ ನಿರ್ವಹಣೆ ಈಗಲೂ ಆಸೀಸ್ ಪಾಲಿಗೆ ತಲೆನೋವಾಗಿಯೇ ಉಳಿದಿದೆ. ಒಂದು ವೇಳೆ ಆಫ್ಘನ್ ಎದುರು ಸೋತಿದ್ದರೆ ಆಸೀಸ್ ಪಾಲಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿರುತಿತ್ತು.
ಮತ್ತೊಂದೆಡೆ ಬಾಂಗ್ಲಾ, ಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರಿಂದ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಆಸೆ ಜೀವಂತ ಉಳಿಸಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಸೋತರೂ, ರನ್ರೇಟ್ ಶ್ರೀಲಂಕಾಕ್ಕಿಂತ ಕೆಳಗೆ ಕುಸಿಯದಂತೆ ಬಾಂಗ್ಲಾ ನೋಡಿಕೊಳ್ಳಬೇಕಾಗಿದೆ. ಭಾರಿ ಅಂತರದಿಂದ ಸೋತರೆ ಬಾಂಗ್ಲಾ ಅಂಕಪಟ್ಟಿಯಲ್ಲಿ 9 ಅಥವಾ 10ನೇ ಸ್ಥಾನಕ್ಕಿಳಿದು ಚಾಂಪಿಯನ್ಸ್ ಟ್ರೋಫಿ ಅರ್ಹತೆ ತಪ್ಪಿಸಿಕೊಳ್ಳುವ ಭೀತಿ ಇದೆ. ನಾಯಕ ಶಕೀಬ್ ಅಲ್ ಹಸನ್ ಗಾಯದಿಂದಾಗಿ ಅಲಭ್ಯರಾಗಿರುವುದು ಕೂಡ ಬಾಂಗ್ಲಾಗೆ ಹಿನ್ನಡೆ ಎನಿಸಿದೆ.
ಏಕದಿನ ಮುಖಾಮುಖಿ: 21
ಆಸೀಸ್: 19, ಬಾಂಗ್ಲಾ: 1, ರದ್ದು: 1
ವಿಶ್ವಕಪ್ ಮುಖಾಮುಖಿ: 3
ಆಸೀಸ್: 3, ಬಾಂಗ್ಲಾ: 0
ಆರಂಭ: ಬೆಳಗ್ಗೆ 10.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್